ಅತಿವೇಗದ ರೈಲು ಭಾರತದ ಭವಿಷ್ಯದ ಪ್ರಯಾಣಿಕ ರೈಲು ವ್ಯವಸ್ಥೆಯ ಒಂದು ಭಾಗ. ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಮಾರ್ಗ ಭಾರತದ ಮೊದಲ ಅತಿವೇಗದ ರೈಲು ಯೋಜನೆಯಾಗಿದೆ. ಆದರೆ ಅಂತರ ನಗರದ ಪ್ರಯಾಣಕ್ಕಾಗಿ ಇನ್ನಷ್ಟು ರೈಲು ಯೋಜನೆಗಳನ್ನು ಘೋಷಣೆ ಮಾಡಲಾಗಿದೆ.
ಕೇಂದ್ರ ಬಜೆಟ್ 2026-27ರಲ್ಲಿ 7 ಹೊಸ ಅತಿವೇಗದ ರೈಲು ಮಾರ್ಗಗಳನ್ನು ಘೋಷಣೆ ಮಾಡಲಾಗಿದೆ. ಇದರದಲ್ಲಿ ಬೆಂಗಳೂರು-ಚೆನ್ನೈ ಮತ್ತು ಬೆಂಗಳೂರು-ಹೈದರಾಬಾದ್ ಮಾರ್ಗಗಳು ಸೇರಿವೆ. ಈ ಘೋಷಣೆ ಮೂಲಕ ಮುಂಬೈ-ಅಹಮದಾಬಾದ್ ಮಾರ್ಗದ ಆಚೆಗೂ ಯೋಜನೆಯನ್ನು ವಿಸ್ತರಣೆ ಮಾಡಲಾಗಿದೆ.
ಭಾರತೀಯ ರೈಲ್ವೆಯು ವಿಶ್ವದ ಅತಿದೊಡ್ಡ ರೈಲ್ವೆ ವ್ಯವಸ್ಥೆಗಳಲ್ಲಿ ಒಂದು. ಪ್ರಯಾಣಿಕ ಮತ್ತು ಸರಕು ಸಾರಿಗೆಯ ಪ್ರಮುಖ ಮಾಧ್ಯಮವಾಗಿ ಇದು ಕಾರ್ಯನಿರ್ವಹಿಸುತ್ತಿದೆ. ನಗರಗಳನ್ನು ಸಂಪರ್ಕಿಸುವ ಮೂಲಕ ಜನರು ಹಾಗೂ ಸರಕುಗಳ ಸಂಚಾರವನ್ನು ಸುಗಮಗೊಳಿಸಿದೆ.
ವಿವಿಧ ಪ್ರದೇಶಗಳ ಅಭಿವೃದ್ಧಿಯಲ್ಲಿ ರೈಲು ಮಹತ್ವದ ಪಾತ್ರವಹಿಸಿದೆ. ಆರ್ಥಿಕ ಚಟುವಟಿಕೆ, ಕಾರ್ಮಿಕರ ಚಲನೆ, ಮಾರುಕಟ್ಟೆ ವಿಸ್ತರಣೆ, ಶಿಕ್ಷಣ ಹಾಗೂ ವಿವಿಧ ಸೇವೆಗಳಿಗೆ ಬೆಂಬಲ ನೀಡಿದೆ.
ಅತಿ ವೇಗದ ರೈಲು: ಅತಿವೇಗದ ರೈಲು ಎನ್ನುವುದು ಸಾಂಪ್ರದಾಯಿಕ ರೈಲ್ವೆಗಿಂತ ಗಮನಾರ್ಹವಾಗಿ ಹೆಚ್ಚಿನ ವೇಗದಲ್ಲಿ ಕಾರ್ಯನಿರ್ವಹಿಸಲು ವಿನ್ಯಾಸಗೊಳಿಸಲಾದ ಪ್ರಯಾಣಿಕ ರೈಲ್ವೆ ವ್ಯವಸ್ಥೆ.
ಈ ವ್ಯವಸ್ಥೆಗಳು ಸಾಮಾನ್ಯವಾಗಿ ಮೀಸಲಾದ ಮಾರ್ಗಗಳಲ್ಲಿ ಚಲಿಸುತ್ತವೆ ಮತ್ತು ಸುಧಾರಿತ ರೋಲಿಂಗ್ ಸ್ಟಾಕ್, ಸಿಗ್ನಲಿಂಗ್, ಸಂವಹನ ಮತ್ತು ಸುರಕ್ಷತಾ ತಂತ್ರಜ್ಞಾನಗಳಿಂದ ಬೆಂಬಲವನ್ನು ಹೊಂದಿದ್ದು, ಉನ್ನತ ಮಟ್ಟದ ಕಾರ್ಯಾಚರಣೆಯ ದಕ್ಷತೆ ಮತ್ತು ವಿಶ್ವಾಸಾರ್ಹತೆಗೆ ಸಾಕ್ಷಿಯಾಗಲಿವೆ.
ಅತಿವೇಗದ ರೈಲನ್ನು ಗಂಟೆಗೆ 250 ಕಿಲೋಮೀಟರ್‌ಗಿಂತ ಹೆಚ್ಚಿನ ವೇಗದಲ್ಲಿ ಓಡುವ ರೈಲು ವ್ಯವಸ್ಥೆ ಎಂದು ವ್ಯಾಖ್ಯಾನಿಸಲಾಗಿದೆ. ಸಾಂಪ್ರದಾಯಿಕ ಮತ್ತು ಸೆಮಿ ಹೈಸ್ಪೀಡ್ ರೈಲುಗಳು ಸೇವೆಗಳಿಗಿಂತ ಹೈಸ್ಪೀಡ್ ರೈಲು ಸೇವೆ ಮೂಲಭೂತವಾಗಿ ಭಿನ್ನವಾಗಿದೆ.
ಸಾಂಪ್ರದಾಯಿಕ ರೈಲ್ವೆಯು ಸರಕು ಮತ್ತು ನಿಧಾನಗತಿಯ ಪ್ರಯಾಣಿಕ ರೈಲುಗಳೊಂದಿಗೆ ಹಳಿಗಳನ್ನು ಹಂಚಿಕೊಂಡರೆ, ಅತಿವೇಗದ ರೈಲು ವಿಶೇಷ ಮಾರ್ಗಗಳಲ್ಲಿ ಕಾರ್ಯನಿರ್ವಹಿಸುತ್ತದೆ, ಇದು ಹೆಚ್ಚಿನ ವೇಗ ಮತ್ತು ಹೆಚ್ಚು ನಿಖರವಾದ ವೇಳಾಪಟ್ಟಿಗಳಿಗೆ ಅನುವು ಮಾಡಿಕೊಡುತ್ತದೆ. ಅತಿವೇಗದ ರೈಲು ನಿರಂತರ ಹೈ-ಸ್ಪೀಡ್ ಕಾರ್ಯಾಚರಣೆಗಳಿಗಾಗಿ ವಿಶೇಷವಾಗಿ ನಿರ್ಮಿಸಲಾದ ಮೂಲಸೌಕರ್ಯಗಳನ್ನು ಒಳಗೊಂಡಿದೆ.
ಪ್ರಮುಖ ನಗರಗಳನ್ನು ಸಂಪರ್ಕಿಸಲು ಅತಿವೇಗದ ರೈಲು ಕಾರಿಡಾರ್‌ಗಳು ವಿಶೇಷವಾಗಿ ಸಹಕಾರಿ. 2030ರ ವೇಳೆಗೆ ಭಾರತದ ರೈಲ್ವೆ ಜಾಲದ ಅಭಿವೃದ್ಧಿಯನ್ನು ವಿವರಿಸುವ ದೀರ್ಘಾವಧಿಯ ಕಾರ್ಯತಂತ್ರದ ‘ನ್ಯಾಷನಲ್ ರೈಲ್ ಪ್ಲಾನ್’ ಅತಿವೇಗದ ರೈಲು ಕಾರಿಡಾರ್ ವ್ಯಾಪ್ತಿಯಲ್ಲಿ ಬರುತ್ತದೆ.
ದೇಶದ ದಕ್ಷಿಣ ಭಾಗಗಳಲ್ಲಿ ಅತಿವೇಗದ ರೈಲು ಜಾಲವನ್ನು ‘ದಕ್ಷಿಣ ಹೈ-ಸ್ಪೀಡ್ ಟ್ರಯಾಂಗಲ್’ ಅಥವಾ ‘ಡೈಮಂಡ್’ ಎಂದು ರೂಪಿಸಲಾಗಿದೆ. ಇದನ್ನು ಪ್ರಮುಖ ಮೆಟ್ರೋಪಾಲಿಟನ್ ಮತ್ತು ಆರ್ಥಿಕ ಕೇಂದ್ರಗಳನ್ನು ಸಂಪರ್ಕಿಸಲು ವಿನ್ಯಾಸಗೊಳಿಸಲಾಗಿದೆ.
ಅಂದಾಜು 1 ಗಂಟೆ 13 ನಿಮಿಷಗಳ ಪ್ರಯಾಣದ ಸಮಯದೊಂದಿಗೆ ಚೆನ್ನೈ-ಬೆಂಗಳೂರು ಅತಿವೇಗದ ಕಾರಿಡಾರ್, ಎರಡು ಪ್ರಮುಖ ಕೈಗಾರಿಕಾ ಮತ್ತು ತಂತ್ರಜ್ಞಾನ ಕೇಂದ್ರಗಳ ನಡುವಿನ ಸಂಪರ್ಕವನ್ನು ಗಮನಾರ್ಹವಾಗಿ ಹೆಚ್ಚಿಸುತ್ತದೆ.
ಬೆಂಗಳೂರು-ಹೈದರಾಬಾದ್ ಕಾರಿಡಾರ್ ಪ್ರಯಾಣದ ಸಮಯವನ್ನು ಸುಮಾರು 2 ಗಂಟೆಗಳಿಗೆ ಇಳಿಸುವ ನಿರೀಕ್ಷೆಯಿದೆ, ಇದು ಪ್ರಮುಖ ಆರ್ಥಿಕ ಮತ್ತು ಐಟಿ ಕೇಂದ್ರಗಳ ಸಂಪರ್ಕವನ್ನು ಬಲಪಡಿಸುತ್ತದೆ.

