ಬೆಂಗಳೂರು: ರಾಜ್ಯ ಸರ್ಕಾರ ಸುಮಾರು ಹದಿನೈದು ಸಾವಿರ ಶಿಕ್ಷಕರ ನೇಮಕಾತಿಗೆ ಹೊರಡಿಸಿರುವ ಅಧಿಸೂಚನೆಗೆ ತಡೆಯಾಜ್ಞೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಆಗಸ್ಟ್ 11 ರಂದು ಸರ್ಕಾರ ಹೊರಡಿಸಿರುವ ಶಿಕ್ಷಕರ ನೇಮಕಾತಿ ಅಧಿಸೂಚನೆ ಪ್ರಶ್ನಿಸಿ ಹುಬ್ಬಳ್ಳಿಯ ಉರ್ದು ಭಾಷಾ ಶಿಕ್ಷಕಿ ಅಸ್ಮಾ ಘೋರಿ ಮತ್ತಿತರರು ಸಲ್ಲಿಸಿರುವ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ನ್ಯಾಯಪೀಠ ಈ ನಿರ್ದೇಶನ ನೀಡಿದೆ.
ಕನ್ನಡ ಅಥವಾ ಇಂಗ್ಲಿಷ್ ಬೋಧನಾ ಮಾಧ್ಯಮವಾಗಿರುವ ಶಾಲೆಗಳಲ್ಲಿ ಕೆಲವು ಖಾಲಿ ಹುದ್ದೆಗಳು ಇವೆ ಎಂದು ತೋರುತ್ತದೆ. ಸರ್ಕಾರ ಆ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲು ಪ್ರಯತ್ನಿಸುತ್ತಿದೆ. ಆದರೆ ಉರ್ದು ಶಾಲೆಗಳಲ್ಲಿ ನೇಮಕಾತಿ ಏಕೆ ನಡೆಯುತ್ತಿಲ್ಲ ಎನ್ನುವುದು ಕಾನೂನು ಬದ್ಧ ಪ್ರಶ್ನೆಯಾಗಿದೆ. ಹೀಗಾಗಿ ಉರ್ದು ಮಾಧ್ಯಮ ಶಾಲೆಗಳು ಸೇರಿದಂತೆ ಭಾಷಾ ಅಲ್ಪಸಂಖ್ಯಾತ ಶಿಕ್ಷಕರ ಆಯ್ಕೆ ಪ್ರಕ್ರಿಯೆಯನ್ನು ಏಕೆ ಕೈಗೊಂಡಿಲ್ಲ ಎನ್ನುವುದರ ಕುರಿತು ವಿವರಣೆ ನೀಡುವಂತೆ ಸರ್ಕಾರಕ್ಕೆ ಮೌಖಿಕವಾಗಿ ಸೂಚಿಸಿರುವ ನ್ಯಾಯಪೀಠ ವಿಚಾರಣೆಯನ್ನು ಸೆಪ್ಟೆಂಬರ್ 7ಕ್ಕೆ ಮುಂದೂಡಿದೆ.

