ಮಿಚೆಲಿನ್ ಸ್ಟಾರ್ ಗೌರವಕ್ಕೆ ಪಾತ್ರರಾಗಿರುವ ವಿಶ್ವವಿಖ್ಯಾತ ಶೆಫ್ ವಿಕಾಸ್ ಖನ್ನಾ ಅವರು ಪ್ರತಿ ವರ್ಷ ರಂಜಾನ್ ಮಾಸದಲ್ಲಿ ಒಂದು ದಿನ ಉಪವಾಸ (ರೋಜಾ) ಮಾಡುತ್ತಾರೆ. ಒಬ್ಬ ಪಂಜಾಬಿ ಹಿಂದೂ ಕುಟುಂಬದಲ್ಲಿ ಹುಟ್ಟಿದ ಇವರು ಕಳೆದ 30 ವರ್ಷಗಳಿಂದ ಈ ಪದ್ಧತಿಯನ್ನು ಪಾಲಿಸುತ್ತಿರುವುದರ ಹಿಂದೆ ಧರ್ಮಕ್ಕಿಂತ ಮಿಗಿಲಾದ ಮಾನವೀಯತೆಯ ಕಥೆಯಿದೆ.
1992ರಲ್ಲಿ ಮುಂಬೈನಲ್ಲಿ ಭೀಕರ ಕೋಮು ದಂಗೆ ನಡೆಯುತ್ತಿದ್ದ ಸಮಯ. ಆಗ ವಿಕಾಸ್ ಖನ್ನಾ ಮುಂಬೈನ ಹೋಟೆಲ್ ಒಂದರಲ್ಲಿ ಟ್ರೈನಿ ಆಗಿ ಕೆಲಸ ಮಾಡುತ್ತಿದ್ದರು. ಇಡೀ ನಗರ ಹೊತ್ತಿ ಉರಿಯುತ್ತಿತ್ತು. ಆ ಗಲಭೆಯ ನಡುವೆ ಘಾಟ್ಕೋಪರ್ನಲ್ಲಿದ್ದ ತನ್ನ ಸಹೋದರನ ಸುರಕ್ಷತೆಯ ಬಗ್ಗೆ ವಿಕಾಸ್ ಅವರಿಗೆ ಆತಂಕ ಶುರುವಾಯಿತು.
ಪ್ರಾಣ ಉಳಿಸಿದ ಆ ಮುಸ್ಲಿಂ ಕುಟುಂಬ
ತಮ್ಮ ಸಹೋದರನನ್ನು ಹುಡುಕುತ್ತಾ ವಿಕಾಸ್ ಸುಮಾರು ಎರಡುವರೆ ಗಂಟೆಗಳ ಕಾಲ ಕಾಲ್ನಡಿಗೆಯಲ್ಲೇ ಸಾಗಿದರು. ದಾರಿಯಲ್ಲಿ ಒಂದು ಮುಸ್ಲಿಂ ಕುಟುಂಬ ಇವರನ್ನು ಕಂಡು, ಹೊರಗೆ ಪರಿಸ್ಥಿತಿ ಅಪಾಯಕಾರಿಯಾಗಿದೆ ಎಂದು ಎಚ್ಚರಿಸಿ ತಮ್ಮ ಮನೆಗೆ ಕರೆದೊಯ್ದರು.
ಸ್ವಲ್ಪ ಸಮಯದಲ್ಲೇ ರೊಚ್ಚಿಗೆದ್ದ ಗುಂಪೊಂದು ಆ ಮನೆಗೆ ನುಗ್ಗಿ ವಿಕಾಸ್ ಯಾರು ಎಂದು ಪ್ರಶ್ನಿಸಿತು. ಆಗ ಆ ಕುಟುಂಬದವರು ಹಿಂಜರಿಯದೆ, “ಇವನು ನಮ್ಮ ಮಗ” ಎಂದು ಸುಳ್ಳು ಹೇಳಿ ದಂಗೆಕೋರರಿಂದ ವಿಕಾಸ್ ಪ್ರಾಣ ಉಳಿಸಿದರು. ಅಷ್ಟೇ ಅಲ್ಲದೆ, ತಮ್ಮ ಅಳಿಯನನ್ನು ಕಳುಹಿಸಿ ವಿಕಾಸ್ ಅವರ ಸಹೋದರ ಸುರಕ್ಷಿತವಾಗಿದ್ದಾನೆ ಎಂಬ ಮಾಹಿತಿಯನ್ನೂ ತರಿಸಿಕೊಟ್ಟರು.
ಕೃತಜ್ಞತೆಯ ಸಂಕೇತವಾಗಿ ರೋಜಾ
ಎರಡು ದಿನಗಳ ಕಾಲ ಆ ಮನೆಯಲ್ಲೇ ನೆಲದ ಮೇಲೆ ಮಲಗಿ ಆಶ್ರಯ ಪಡೆದ ವಿಕಾಸ್ ಅವರಿಗೆ ಆ ಕುಟುಂಬದವರ ಹೆಸರು ಕೂಡ ತಿಳಿದಿರಲಿಲ್ಲ. ಅಂದಿನಿಂದ, ತಮಗೆ ಮರುಜನ್ಮ ನೀಡಿದ ಆ ಕುಟುಂಬದ ನೆನಪಿಗಾಗಿ ಮತ್ತು ಅವರ ಕ್ಷೇಮಕ್ಕಾಗಿ ವಿಕಾಸ್ ಪ್ರತಿ ವರ್ಷ ರಂಜಾನ್ನ ಒಂದು ದಿನ ಕಡ್ಡಾಯವಾಗಿ ಉಪವಾಸ ಮಾಡುತ್ತಾರೆ.
2017ರಲ್ಲಿ ಸಿಕ್ಕಿದ ಆತ್ಮೀಯರು
ಹಲವು ವರ್ಷಗಳ ಕಾಲ ಆ ಕುಟುಂಬದ ವಿಳಾಸ ಸಿಗದೆ ವಿಕಾಸ್ ಹುಡುಕಾಟ ನಡೆಸಿದ್ದರು. ಅಂತಿಮವಾಗಿ 2017ರಲ್ಲಿ ಸೋಷಿಯಲ್ ಮೀಡಿಯಾ ಸಹಾಯದಿಂದ ಆ ಕುಟುಂಬವನ್ನು ಪತ್ತೆಹಚ್ಚುವಲ್ಲಿ ಯಶಸ್ವಿಯಾದರು. ಅಂದು ಅವರ ಜೊತೆಯಲ್ಲೇ ಇಫ್ತಿಯಾರ್ ಕೂಟದಲ್ಲಿ ಭಾಗವಹಿಸಿ ತಮ್ಮ ರೋಜಾ ಅಂತ್ಯಗೊಳಿಸಿದ ವಿಕಾಸ್, “ಇದು ನನ್ನ ಬದುಕಿನ ಅತ್ಯಂತ ಮಹತ್ವದ ಈದ್” ಎಂದು ಭಾವುಕರಾಗಿ ಬರೆದುಕೊಂಡಿದ್ದರು.

