ಅಧಿಕ ರಕ್ತದೊತ್ತಡ (High Blood Pressure) ಅಥವಾ ಹೈ ಬಿಪಿಯಿಂದಾಗಿ ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಇದರಿಂದಾಗಿ ಹೃದಯಾಘಾತ (Heart Attack) ಮತ್ತು ಹೈಪರ್‌ಟೆನ್ಷನ್‌ನಂತಹ ಗಂಭೀರ ಸಮಸ್ಯೆಗಳು ಬರುವ ಸಾಧ್ಯತೆ ಇರುತ್ತದೆ. ಇದರೊಂದಿಗೆ ರಕ್ತನಾಳಗಳು ಹಾನಿಗೊಳಗಾಗುವ ಅಪಾಯವೂ ಇದೆ.
ಅಷ್ಟೇ ಅಲ್ಲದೆ, ಇದು ಮೂತ್ರಪಿಂಡಗಳ (ಕಿಡ್ನಿ) ಮೇಲಿನ ಒತ್ತಡವನ್ನು ಹೆಚ್ಚಿಸಬಹುದು. ಆದರೆ, ಕೆಲವು ಸರಳ ಕ್ರಮಗಳ ಮೂಲಕ ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಸುಲಭವಾಗಿ ಕಡಿಮೆ ಮಾಡಿಕೊಳ್ಳಬಹುದು ಎಂದು ತಜ್ಞರು ಹೇಳುತ್ತಾರೆ.
ಹೈ ಬಿಪಿಯನ್ನು ಆರಂಭದಲ್ಲೇ ಗುರುತಿಸುವುದರಿಂದ ಅದನ್ನು ಸುಲಭವಾಗಿ ನಿಯಂತ್ರಿಸಬಹುದು. ಅಧಿಕ ರಕ್ತದೊತ್ತಡವನ್ನು ಕಡಿಮೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆ (WHO) ಸೂಚಿಸಿರುವ ಪ್ರಮುಖ 7 ಸಲಹೆಗಳ ಬಗ್ಗೆ ಇಲ್ಲಿದೆ ಮಾಹಿತಿ:
1. ತಂಬಾಕು ಮತ್ತು ಆಲ್ಕೋಹಾಲ್ ತ್ಯಜಿಸಿ
ತಂಬಾಕು ಮತ್ತು ಆಲ್ಕೋಹಾಲ್ ಸೇವನೆಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಅಥವಾ ಮಿತಿಗೊಳಿಸಬೇಕು. ಇವುಗಳ ಬಳಕೆಯಿಂದ ರಕ್ತದೊತ್ತಡ ತೀವ್ರವಾಗಿ ಹೆಚ್ಚಾಗುವುದಲ್ಲದೆ, ಅನೇಕ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಧೂಮಪಾನ ಮತ್ತು ಮದ್ಯಪಾನ ಆರೋಗ್ಯಕ್ಕೆ ಅತ್ಯಂತ ಹಾನಿಕಾರಕ.
2. ದಿನಕ್ಕೆ ಕನಿಷ್ಠ 30 ನಿಮಿಷಗಳ ವ್ಯಾಯಾಮ
ಪ್ರತಿದಿನ ಕನಿಷ್ಠ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಹಲವಾರು ಆರೋಗ್ಯ ಪ್ರಯೋಜನಗಳಿವೆ. ನಿಯಮಿತವಾಗಿ ವ್ಯಾಯಾಮ ಮಾಡುವುದರಿಂದ ಹೃದಯದ ಆರೋಗ್ಯ ಸುಧಾರಿಸುತ್ತದೆ ಮತ್ತು ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಬಹುದು.
3. ರಕ್ತದೊತ್ತಡವನ್ನು ನಿಯಮಿತವಾಗಿ ಪರಿಶೀಲಿಸಿ
ರಕ್ತದೊತ್ತಡವನ್ನು (BP Levels) ನಿಯಮಿತವಾಗಿ ಮನೆಯಲ್ಲೇ ಅಥವಾ ವೈದ್ಯರ ಬಳಿ ತಪಾಸಣೆ ಮಾಡಿಕೊಳ್ಳುತ್ತಿರುವುದರಿಂದ ಹೈ ಬಿಪಿ ಸಮಸ್ಯೆಯನ್ನು ಸುಲಭವಾಗಿ ಪತ್ತೆಹಚ್ಚಿ ನಿಯಂತ್ರಿಸಬಹುದು. ಇದರಿಂದ ಮುಂದಾಗುವ ಅಪಾಯಗಳನ್ನು ತಡೆಗಟ್ಟಿ ಸೂಕ್ತ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬಹುದು.
4. ಆರೋಗ್ಯಕರ ಆಹಾರ ಸೇವನೆ
ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳಲು ಮತ್ತು ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಪೌಷ್ಟಿಕ ಆಹಾರ ಸೇವನೆ ಅತ್ಯಗತ್ಯ. ಜೀವಸತ್ವಗಳು (Vitamins), ಖನಿಜಗಳು (Minerals) ಮತ್ತು ಇತರ ಅಗತ್ಯ ಪೋಷಕಾಂಶಗಳು ಸಮೃದ್ಧವಾಗಿರುವ ಆಹಾರ ಪದಾರ್ಥಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು.
5. ಸ್ಯಾಚುರೇಟೆಡ್ ಮತ್ತು ಟ್ರಾನ್ಸ್ ಫ್ಯಾಟ್ಸ್ ಬೇಡ
ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಲು, ಪೌಷ್ಟಿಕ ಆಹಾರವನ್ನು ಸೇವಿಸುವ ಜೊತೆಗೆ ಸ್ಯಾಚುರೇಟೆಡ್ (Saturated) ಮತ್ತು ಟ್ರಾನ್ಸ್ ಫ್ಯಾಟ್ (Trans Fats) ಒಳಗೊಂಡಿರುವ ಜಿಡ್ಡಿನ ಆಹಾರಗಳನ್ನು ಸಂಪೂರ್ಣವಾಗಿ ದೂರವಿಡಬೇಕು ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ಸೂಚಿಸಿದೆ.
6. ಉಪ್ಪಿನ ಬಳಕೆಯನ್ನು ಕಡಿಮೆ ಮಾಡಿ
ನಾವು ಸೇವಿಸುವ ಆಹಾರದಲ್ಲಿ ಉಪ್ಪಿನ ಪ್ರಮಾಣವನ್ನು ಆದಷ್ಟು ಕಡಿಮೆ ಮಾಡಬೇಕು. ಅತಿಯಾಗಿ ಉಪ್ಪನ್ನು ಸೇವಿಸುವುದರಿಂದ ರಕ್ತದೊತ್ತಡದ ಸಮಸ್ಯೆ ತೀವ್ರವಾಗಿ ಹೆಚ್ಚಾಗುತ್ತದೆ.
7. ಮಾನಸಿಕ ಒತ್ತಡ ಕಡಿಮೆ ಮಾಡಿಕೊಳ್ಳಿ & ಔಷಧಿ ಬಳಸಿ
ಅಧಿಕ ರಕ್ತದೊತ್ತಡಕ್ಕೆ ಮಾನಸಿಕ ಒತ್ತಡವೂ (Stress) ಒಂದು ಪ್ರಮುಖ ಕಾರಣವಾಗಿದೆ. ಆದ್ದರಿಂದ ಬಿಪಿಯನ್ನು ಕಂಟ್ರೋಲ್‌ನಲ್ಲಿಡಲು ಧಾನ್ಯ, ಯೋಗದ ಮೂಲಕ ಒತ್ತಡವನ್ನು ನಿಯಂತ್ರಿಸಬೇಕು. ಇದರೊಂದಿಗೆ, ಹೈ ಬಿಪಿ ಸಮಸ್ಯೆಯಿಂದ ಬಳಲುತ್ತಿರುವವರು ವೈದ್ಯರ ಸಲಹೆಯ ಮೇರೆಗೆ ಮಾತ್ರವೇ ಸೂಕ್ತ ಔಷಧಿಗಳನ್ನು ನಿಯಮಿತವಾಗಿ ತೆಗೆದುಕೊಳ್ಳಬೇಕು.

