ನಿನ್ನೆ ( ಮೇ 17 ) ಧರಂಶಾಲಾದಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2026ರ ಲೀಗ್ ಹಂತದ 61ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 23 ರನ್‌ಗಳ ಭರ್ಜರಿ ಗೆಲುವನ್ನು ದಾಖಲಿಸಿ ಪ್ಲೇಆಫ್ ಸುತ್ತಿಗೆ ಲಗ್ಗೆ ಇಟ್ಟಿತು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರಾಟ್ ಕೊಹ್ಲಿ, ದೇವದತ್ ಪಡಿಕ್ಕಲ್, ವೆಂಕಟೇಶ್ ಐಯ್ಯರ್ ಹಾಗೂ ಟಿಮ್ ಡೇವಿಡ್ ಅಬ್ಬರದ ಬ್ಯಾಟಿಂಗ್ ನೆರವಿನಿಂದ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 222 ರನ್ ಕಲೆಹಾಕಿ ಪಂಜಾಬ್ ಕಿಂಗ್ಸ್‌ಗೆ 223 ರನ್‌ಗಳ ಸವಾಲಿನ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟುವಲ್ಲಿ ಎಡವಿದ ಪಂಜಾಬ್ ಕಿಂಗ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 199 ರನ್ ಕಲೆಹಾಕಿತು.
ಟೂರ್ನಿಯ ಆರಂಭದ ಆರು ಪಂದ್ಯಗಳಲ್ಲಿ ಸತತವಾಗಿ ಗೆಲುವು ಕಂಡಿದ್ದ ಪಂಜಾಬ್ ಕಿಂಗ್ಸ್ ಸದ್ಯ ಸತತ ಆರು ಸೋಲುಗಳನ್ನು ಕಂಡಿದ್ದು ಈ ಸೋಲು ಅವರ ಪ್ಲೇಆಫ್ ಕನಸಿಗೆ ಬಹು ದೊಡ್ಡ ಹಿನ್ನಡೆಯನ್ನುಂಟುಮಾಡಿ ಉಳಿದ ಒಂದು ಪಂದ್ಯವನ್ನು ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿಹಾಕಿಕೊಂಡಿದೆ.
ಅಂಕಪಟ್ಟಿಯಲ್ಲಿ 13 ಅಂಕಗಳನ್ನು ಹೊಂದಿದ್ದ ಪಂಜಾಬ್ ಕಿಂಗ್ಸ್ ಪಾಲಿಗೆ 13ನೇ ಪಂದ್ಯವಾಗಿದ್ದ ಈ ಪಂದ್ಯವನ್ನು ಗೆದ್ದಿದ್ದರೆ 15 ಅಂಕಗಳನ್ನು ಮುಟ್ಟಬಹುದಾಗಿದ್ದ ಕಾರಣ ಆರ್‌ಸಿಬಿ ವಿರುದ್ಧದ ಈ ಪಂದ್ಯ ತಂಡಕ್ಕೆ ಬಹು ಮುಖ್ಯದ್ದಾಗಿತ್ತು.
ಇಂತಹ ಮಾಡು ಇಲ್ಲವೇ ಮಡಿ ಪಂದ್ಯವನ್ನು ಕೈಚೆಲ್ಲಿದ ಪಂಜಾಬ್ ಕಿಂಗ್ಸ್ ಭಾರೀ ಮುಖಭಂಗ ಅನುಭವಿಸಿತು. ಸೋಲಿಲ್ಲದ ಸರದಾರರಂತೆ ಮೆರೆದಿದ್ದ ತಂಡ ಈಗ ಪ್ಲೇಆಫ್ ಪ್ರವೇಶ ಅನುಮಾನ ಬಿಡಿ ಎನ್ನುವ ಹಂತ ತಲುಪಿದ್ದು ಆರ್‌ಸಿಬಿ ವಿರುದ್ಧ ಸೋತ ಬೆನ್ನಲ್ಲೇ ತಂಡಕ್ಕಿದ್ದ ಪ್ಲೇಆಫ್ ಆಸೆ ಬಹುತೇಕ ಕಳೆಗುಂದಿದೆ.
ಹೀಗೆ ಮಕಾಡೆ ಮಲಗಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಐಯ್ಯರ್‌ನನ್ನು ತಂಡದ ಮಾಲಕಿ ಪ್ರೀತಿ ಜಿಂಟಾ ಪಂದ್ಯ ಮುಗಿದ ಬಳಿಕ ಮೈದಾನದಲ್ಲೇ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ ಎಂಬ ಫೋಟೊ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಫೋಟೊದಲ್ಲಿ ಜಿಂಟಾ ಶ್ರೇಯಸ್‌ಗೆ ಕೈ ತೋರಿಸುತ್ತಾ ನಿಂದಿಸುತ್ತಿದ್ದಾರೆ.
ಇದು ಈ ಹಿಂದೆ ಕೆಎಲ್ ರಾಹುಲ್ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕನಾಗಿದ್ದಾಗ ಮೈದಾನದಲ್ಲಿ ಸಂಜೀವ್ ಗೋಯೆಂಕಾ ಬಳಿ ಎದುರಿಸಿದ್ದ ಪರಿಸ್ಥಿತಿಯನ್ನು ನೆನಪಿಸಿದೆ. ಆದರೆ ಅಸಲಿಯತ್ತಿಗೆ ಇದೊಂದು ನಕಲಿ ಚಿತ್ರವಾಗಿದ್ದು, ಎಐ ತಂತ್ರಜ್ಞಾನ ಬಳಸಿ ತಯಾರಿಸಿದ್ದಾಗಿದೆ. ನಿನ್ನೆ ಇಂತಹ ಯಾವುದೇ ಘಟನೆ ನಡೆಯದಿದ್ದು, ಬೇಕಂತಲೇ ಸಾಮಾಜಿಕ ಜಾಲತಾಣದಲ್ಲಿ ತನ್ನ ಖಾತೆ ಹೆಚ್ಚು ಜನರಿಗೆ ತಲುಪಬೇಕು ಎಂಬ ಕಾರಣಕ್ಕೆ ಈ ರೀತಿ ಎಡಿಟ್ ಮಾಡಿ ಫೋಟೊವನ್ನು ಹರಿಬಿಡಲಾಗಿದೆ.
ಸತ್ಯಾಂಶವನ್ನು ಪರಿಶೀಲಿಸಿ ನೋಡಿದರೆ ಪ್ರೀತಿ ಜಿಂಟಾ ಪಂದ್ಯದ ಫಲಿತಾಂಶದ ಬಗ್ಗೆ ನಾಯಕ ಶ್ರೇಯಸ್ ಜತೆ ಸಮಾಧಾನವಾಗಿಯೇ ಮಾತನಾಡುತ್ತಿರುವ ಅಸಲಿ ಫೋಟೊ ಲಭ್ಯವಾಗಿದ್ದು, ಇಲ್ಲಿದೆ ನೋಡಿ.

