ಬೆಂಗಳೂರು: ಭವ್ಯವಾದ ವಾಸ್ತುಶಿಲ್ಪದ ಅದ್ಭುತಗಳನ್ನು ಹೊಂದಿರುವ ನಮ್ಮ ಹೆಮ್ಮೆಯ ಕರ್ನಾಟಕವು ಇತಿಹಾಸ ಮತ್ತು ಆಧುನಿಕತೆಯ ಅಪರೂಪದ ಸಮ್ಮಿಶ್ರಣವಾಗಿದೆ. ನಮ್ಮ ರಾಜ್ಯದ ಈ ಶ್ರೀಮಂತ ಇತಿಹಾಸ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಇಲ್ಲಿನ ಆಕರ್ಷಕ ವಸ್ತುಸಂಗ್ರಹಾಲಯಗಳು (Museums) ಕಣ್ಣಿಗೆ ಕಟ್ಟುವಂತೆ ಪ್ರದರ್ಶಿಸುತ್ತವೆ. ಪ್ರಾಚೀನ ಕಾಲದ ಅಪರೂಪದ ಕಲಾಕೃತಿಗಳು, ಸುಂದರ ಶಿಲ್ಪಗಳು, ವಿಜ್ಞಾನ ಮತ್ತು ತಂತ್ರಜ್ಞಾನದ ಆವಿಷ್ಕಾರಗಳವರೆಗೆ ಜ್ಞಾನದ ಭಂಡಾರವೇ ಈ ಮ್ಯೂಸಿಯಂಗಳಲ್ಲಿ ಅಡಗಿದೆ. ನಿಮ್ಮ ವೀಕೆಂಡ್ ಪ್ರವಾಸಕ್ಕಾಗಿ ರಾಜ್ಯದ ಪ್ರಮುಖ ಮ್ಯೂಸಿಯಂಗಳ ವಿವರ ಇಲ್ಲಿದೆ:
ಆರ್ಕಿಯಾಲಾಜಿಕಲ್ ಮ್ಯೂಸಿಯಂ, ಹಂಪಿ (ಕಮಲಾಪುರ)
ವಿಶ್ವ ಪರಂಪರೆಯ ತಾಣವಾದ ಹಂಪಿಯ ಪ್ರಮುಖ ಆಕರ್ಷಣೆಗಳಲ್ಲಿ ಈ ವಸ್ತುಸಂಗ್ರಹಾಲಯವೂ ಒಂದು. ಈ ಮ್ಯೂಸಿಯಂ ಒಟ್ಟು 4 ಗ್ಯಾಲರಿಗಳನ್ನು ಹೊಂದಿದ್ದು, ಸುತ್ತಲೂ ಹಂಪಿ ಕಣಿವೆಯ ಆಕರ್ಷಕ ಮಾದರಿ (Replica) ಮತ್ತು ಸುಂದರವಾದ ವಾಕ್‌ವೇಯನ್ನು ನಿರ್ಮಿಸಲಾಗಿದೆ.
ವಿಶೇಷತೆ: ವಿಜಯನಗರ ಸಾಮ್ರಾಜ್ಯದ ಪ್ರಸಿದ್ಧ ಅರಸ ಶ್ರೀಕೃಷ್ಣದೇವರಾಯನ ಸುಂದರ ಕಲಾಕೃತಿಗಳು, ಪುರಾತನ ಕಾಲದ ಆಯುಧಗಳು, ಉಪಕರಣಗಳು ಮತ್ತು ಅಪರೂಪದ ಆಂಟಿಕ್ಸ್ (Antiques) ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ.
ಸ್ಥಳ: ಕಮಲಾಪುರ ರಸ್ತೆ, ಹಂಪಿ, ಬಳ್ಳಾರಿ ಜಿಲ್ಲೆ.
ಸಮಯ: ಬೆಳಗ್ಗೆ 10:00 ರಿಂದ ಸಂಜೆ 5:00 ರವರೆಗೆ (ಶುಕ್ರವಾರ ರಜೆ).
ಜಾನಪದ ವಸ್ತುಸಂಗ್ರಹಾಲಯ (Folklore Museum), ಮೈಸೂರು
ಮೈಸೂರು ವಿಶ್ವವಿದ್ಯಾನಿಲಯದ ಮಾನಸಗಂಗೋತ್ರಿ ಆವರಣದಲ್ಲಿರುವ ಈ ಮ್ಯೂಸಿಯಂ ಕರ್ನಾಟಕದ ಸಮೃದ್ಧ ಜಾನಪದ ಕಲೆಗೆ ಸಾಕ್ಷಿಯಾಗಿದೆ. ಇದನ್ನು ಕರ್ನಾಟಕದ ಅತ್ಯುತ್ತಮ ಜಾನಪದ ಮ್ಯೂಸಿಯಂ ಎಂದು ಕರೆಯಲಾಗುತ್ತದೆ.
ವಿಶೇಷತೆ: ಇಲ್ಲಿ ಕಥಕ್ಕಳಿ ಉಡುಪುಗಳು, ಸಾಂಪ್ರದಾಯಿಕ ಗೊಂಬೆಗಳು, ಯಕ್ಷಗಾನದ ಮುಖವಾಡಗಳು, ಜಾನಪದ ದೇವತೆಗಳು, ರಾಜ-ರಾಣಿಯರು ಮತ್ತು ಸೈನಿಕರ ಆಕರ್ಷಕ ಕರಕುಶಲ ಕಲಾಕೃತಿಗಳು ಹಾಗೂ ಹಳೆಯ ಶಾಯಿ ಕರಕುಶಲ ವಸ್ತುಗಳ ಬೃಹತ್ ಸಂಗ್ರಹವಿದೆ.
ಸ್ಥಳ: ಟಿ. ನರಸೀಪುರ ರಸ್ತೆ, ನಂದಿನಿ ಮಿಲ್ಕ್ ಡೈರಿ ಎದುರು, ಸಿದ್ದಾರ್ಥ ನಗರ, ಮೈಸೂರು.
ಸಮಯ: ಬೆಳಗ್ಗೆ 10:00 ರಿಂದ ಸಂಜೆ 6:00 ರವರೆಗೆ (ಸೋಮವಾರ ರಜೆ)
ಪ್ರಾದೇಶಿಕ ನೈಸರ್ಗಿಕ ಇತಿಹಾಸ ವಸ್ತುಸಂಗ್ರಹಾಲಯ (RMNH), ಮೈಸೂರು
ಮೈಸೂರಿನ ಪ್ರಸಿದ್ಧ ಕಾರಂಜಿ ಕೆರೆಯ ದಂಡೆಯ ಮೇಲಿರುವ ಈ ಮ್ಯೂಸಿಯಂ ಪ್ರಕೃತಿ ಪ್ರೇಮಿಗಳ ನೆಚ್ಚಿನ ತಾಣವಾಗಿದೆ. ದಕ್ಷಿಣ ಭಾರತದ ಸಸ್ಯರಾಶಿ, ಪ್ರಾಣಿಸಂಕುಲ ಮತ್ತು ಭೂವೈಜ್ಞಾನಿಕ ಇತಿಹಾಸವನ್ನು ಇದು ಪರಿಚಯಿಸುತ್ತದೆ.
ವಿಶೇಷತೆ: ನೈಸರ್ಗಿಕ ಸಂಪನ್ಮೂಲಗಳ ಸಂರಕ್ಷಣೆಗೆ ಇಲ್ಲಿ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಪ್ರಾಣಿ ಮತ್ತು ಸಸ್ಯಗಳ ನಡುವಿನ ಸಂಬಂಧವನ್ನು ಇಲ್ಲಿ ವಿವರಿಸಲಾಗಿದೆ. ಶಾಲಾ ಮಕ್ಕಳಿಗಾಗಿ ಪರಿಸರ ಜಾಗೃತಿಯ ವಿಶೇಷ ಚಟುವಟಿಕೆಗಳನ್ನು ಇಲ್ಲಿ ಆಯೋಜಿಸಲಾಗುತ್ತದೆ.
ಸ್ಥಳ: ಮಾನಸಗಂಗೋತ್ರಿ, ಮೈಸೂರು.
ಸಮಯ: ಬೆಳಗ್ಗೆ 10:15 ರಿಂದ ಮಧ್ಯಾಹ್ನ 1:15 ಮತ್ತು ಮಧ್ಯಾಹ್ನ 2:30 ರಿಂದ ಸಂಜೆ 5:00 ರವರೆಗೆ (ಭಾನುವಾರ ರಜೆ).
ಯುದ್ಧನೌಕೆ ವಸ್ತುಸಂಗ್ರಹಾಲಯ (Warship Museum), ಕಾರವಾರ
ಕಾರವಾರದ ಟಾಗೋರ್ ಕಡಲತೀರದ ಬಳಿ ಇರುವ ಈ ಮ್ಯೂಸಿಯಂ ದೇಶಭಕ್ತಿಯ ಭಾವನೆಯನ್ನು ಮೂಡಿಸುತ್ತದೆ. 1971 ರ ಭಾರತ-ಪಾಕಿಸ್ತಾನ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಐಎನ್‌ಎಸ್ ಚಾಪೆಲ್ (INS Chapel) ಯುದ್ಧನೌಕೆಯನ್ನು ಈಗ ಮ್ಯೂಸಿಯಂ ಆಗಿ ಪರಿವರ್ತಿಸಲಾಗಿದೆ.
ವಿಶೇಷತೆ: ಯುದ್ಧನೌಕೆಯ ಒಳಗಿನ ಜೀವನ ಮತ್ತು ನೌಕಾಪಡೆಯ ಯುದ್ಧ ತಂತ್ರಗಳನ್ನು ಬಿಂಬಿಸುವ ಪ್ರತಿಮೆಗಳು ಇಲ್ಲಿವೆ. ಭಾರತೀಯ ನೌಕಾಪಡೆಯ ಶೌರ್ಯವನ್ನು ಸಾರುವ ಆಡಿಯೋ-ವಿಶುವಲ್ ವಿಡಿಯೋ ಪ್ರದರ್ಶನ ಇಲ್ಲಿದೆ.
ಸ್ಥಳ: NH17, ಕೋಡಿಬಾಗ್, ಕಾರವಾರ.
ಸಮಯ: ಬೆಳಗ್ಗೆ 9:00 ರಿಂದ ಮಧ್ಯಾಹ್ನ 12:30 ಮತ್ತು ಸಂಜೆ 4:00 ರಿಂದ ರಾತ್ರಿ 7:00 ರವರೆಗೆ (ಭಾನುವಾರ ರಜೆ).
ವಿಶ್ವೇಶ್ವರಯ್ಯ ಇಂಡಸ್ಟ್ರಿಯಲ್ ಅಂಡ್ ಟೆಕ್ನಾಲಜಿಕಲ್ ಮ್ಯೂಸಿಯಂ (VITM), ಬೆಂಗಳೂರು
1962 ರಲ್ಲಿ ಸ್ಥಾಪನೆಯಾದ ಈ ಮ್ಯೂಸಿಯಂ ಭಾರತದ ಶ್ರೇಷ್ಠ ಸಿವಿಲ್ ಇಂಜಿನಿಯರ್ ಸರ್ ಎಂ. ವಿಶ್ವೇಶ್ವರಯ್ಯನವರ ನೆನಪಿಗಾಗಿ 1965 ರಲ್ಲಿ ಸಾರ್ವಜನಿಕರಿಗೆ ಮುಕ್ತವಾಯಿತು. ಇದು ವಿಜ್ಞಾನ ಆಸಕ್ತರಿಗೆ ಅತ್ಯಂತ ಪ್ರಿಯವಾದ ಜಾಗವಾಗಿದೆ.
ವಿಶೇಷತೆ: ಕಬ್ಬನ್ ಪಾರ್ಕ್ ಬಳಿ ಇರುವ ಈ ಮ್ಯೂಸಿಯಂನಲ್ಲಿ ಎಂಜಿನ್ ಹಾಲ್, ಫನ್ ಸೈನ್ಸ್, ಕ್ರಾಫ್ಟ್ಸ್, ಸ್ಪೇಸ್ ಗ್ಯಾಲರಿ ಮತ್ತು ಮಕ್ಕಳ ವಿಜ್ಞಾನ ವಿಭಾಗ ಸೇರಿದಂತೆ 7 ಕಾಯಂ ಪ್ರದರ್ಶನ ಗ್ಯಾಲರಿಗಳಿವೆ. ಇಲ್ಲಿ ರೈಟ್ ಬ್ರದರ್ಸ್ ಅವರ 1903 ರ ವಿಮಾನದ ಅಸಲಿ ಮಾದರಿ (Replica) ಇದೆ. ಜೊತೆಗೆ ಇಲ್ಲಿ 3D ಥಿಯೇಟರ್ ಮತ್ತು ಮಿನಿ ಪ್ಲಾನೆಟೋರಿಯಂ (ತಾರಾಮಂಡಲ) ಕೂಡ ಇದೆ.
ಸ್ಥಳ: ಚಿನ್ನಸ್ವಾಮಿ ಸ್ಟೇಡಿಯಂ ಹತ್ತಿರ, ಕಸ್ತೂರಬಾ ರಸ್ತೆ, ಬೆಂಗಳೂರು.
ಸಮಯ: ಬೆಳಗ್ಗೆ 9:30 ರಿಂದ ಸಂಜೆ 6:00 ರವರೆಗೆ.
ಜಗನ್ಮೋಹನ ಅರಮನೆ ಮತ್ತು ಆರ್ಟ್ ಗ್ಯಾಲರಿ, ಮೈಸೂರು
ಮೈಸೂರು ಸಿಟಿ ಬಸ್ ನಿಲ್ದಾಣದ ಬಳಿ ಇರುವ ಜಗನ್ಮೋಹನ ಅರಮನೆಯು ಕರ್ನಾಟಕದ ಅತ್ಯಂತ ಹಳೆಯ ಮತ್ತು ಅತ್ಯುತ್ತಮ ಕಲಾ ಗ್ಯಾಲರಿಗಳಲ್ಲಿ ಒಂದಾಗಿದೆ. ಇದನ್ನು 1861 ರಲ್ಲಿ ಕೃಷ್ಣರಾಜ ಒಡೆಯರ್ III ಅವರು ರಾಜಮನೆತನದ ಪರ್ಯಾಯ ನಿವಾಸವಾಗಿ ನಿರ್ಮಿಸಿದ್ದರು. ನಂತರ 1915 ರಲ್ಲಿ ಇದನ್ನು ಆರ್ಟ್ ಗ್ಯಾಲರಿಯಾಗಿ ಪರಿವರ್ತಿಸಲಾಯಿತು.
ವಿಶೇಷತೆ: ಇಲ್ಲಿ ವಿಶ್ವಪ್ರಸಿದ್ಧ ಕಲಾವಿದ ರಾಜಾ ರವಿವರ್ಮ ಅವರ ಅಮೂಲ್ಯ ತೈಲ ವರ್ಣಚಿತ್ರಗಳು ಸೇರಿದಂತೆ ಮೊಘಲ್, ಮೈಸೂರು ಮತ್ತು ಶಾಂತಿನಿಕೇತನ ಶೈಲಿಯ 2,000 ಕ್ಕೂ ಹೆಚ್ಚು ವರ್ಣಚಿತ್ರಗಳಿವೆ. ರಾಜರ ಕಾಲದ ಆಯುಧಗಳು, ನಾಣ್ಯಗಳು ಮತ್ತು ಮುಂತಾದ ಅಪರೂಪದ ವಸ್ತುಗಳು ಇಲ್ಲಿವೆ. ದಸರಾ ಸಮಯದಲ್ಲಿ ಇಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.
ಸ್ಥಳ: ಮೈಸೂರು ಪ್ಯಾಲೇಸ್ ಹತ್ತಿರ, ಮೈಸೂರು.
ರೈಲ್ವೆ ಮ್ಯೂಸಿಯಂ (Railway Museum), ಮೈಸೂರು
ಭಾರತೀಯ ರೈಲ್ವೆಯು 1979 ರಲ್ಲಿ ಸ್ಥಾಪಿಸಿದ ಈ ಮ್ಯೂಸಿಯಂ ಭಾರತೀಯ ರೈಲ್ವೆ ಇತಿಹಾಸದ ಬೆಳವಣಿಗೆಯನ್ನು ಸಾರುತ್ತದೆ. ಮೈಸೂರು ಪ್ರವಾಸೋದ್ಯಮದಲ್ಲಿ ಇದು ಪ್ರಮುಖ ಪಾತ್ರ ವಹಿಸಿದೆ.
ವಿಶೇಷತೆ: ಇಲ್ಲಿ ಹಳೆಯ ಕಾಲದ ನ್ಯಾರೋ ಗೇಜ್, ಮೀಟರ್ ಗೇಜ್ ಇಂಜಿನ್‌ಗಳು ಮತ್ತು ಸ್ಟೀಮ್ (ಹಬೆ) ಎಂಜಿನ್‌ಗಳನ್ನು ಪ್ರದರ್ಶಿಸಲಾಗಿದೆ. 1899 ರ ಕಾಲದ ಮೈಸೂರು ಮಹಾರಾಜರು ಬಳಸುತ್ತಿದ್ದ ಎರಡು ಕೋಚ್‌ಗಳ ಖಾಸಗಿ ರಾಜಮನೆತನದ ರೈಲು (ಮಹರಾಣಿ ಸಲೂನ್ ಕ್ಯಾರೇಜ್) ಇಲ್ಲಿನ ಪ್ರಮುಖ ಆಕರ್ಷಣೆಯಾಗಿದೆ. ಇಲ್ಲಿ ಮಕ್ಕಳಿಗೆ ಬ್ಯಾಟರಿ ಚಾಲಿತ ಮಿನಿ ರೈಲು ರೈಡಿಂಗ್ ವ್ಯವಸ್ಥೆಯೂ ಇದೆ.
ಸ್ಥಳ: ಮೈಸೂರು ರೈಲ್ವೆ ಸ್ಟೇಷನ್ ಹತ್ತಿರ, ಮೈಸೂರು.

