ಬೆಂಗಳೂರು : ರಾಜ್ಯದಾದ್ಯಂತ ಮುಂಗಾರು ಪೂರ್ವ ಚಟುವಟಿಕೆಗಳು ಚುರುಕಾಗಿದ್ದು, ಜೂನ್ 2ರವರೆಗೆ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಗುಡುಗು, ಮಿಂಚು ಮತ್ತು ಬಿರುಗಾಳಿ ಸಹಿತ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.
ಕರಾವಳಿ ಮತ್ತು ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದೆ. ಜೂನ್ 1ರಂದು ದಕ್ಷಿಣ ಒಳನಾಡಿನ ಕೆಲವು ಕಡೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದೆ.ರಾಜ್ಯದ ವಿವಿಧ ಭಾಗಗಳಲ್ಲಿ ಗುಡುಗು, ಮಿಂಚು ಮತ್ತು ಗಂಟೆಗೆ 40-50 ಕಿ.ಮೀ ವೇಗದಲ್ಲಿ ಬಲವಾದ ಗಾಳಿ ಬೀಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಎಲ್ಲೆಲ್ಲಿ ಭಾರಿ ಮಳೆ.?
1) ಚಾಮರಾಜನಗರ
2) ಚಿಕ್ಕಮಗಳೂರು
3) ಚಿತ್ರದುರ್ಗ
4) ಹಾಸನ
5) ಕೊಡಗು
6) ಮೈಸೂರು
7) ತುಮಕೂರು
ಕರಾವಳಿ ಭಾಗದಲ್ಲಿ ಜೂನ್ 3 ರಿಂದ 6ರವರೆಗೆ ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಸಮುದ್ರದಲ್ಲಿ ಗಾಳಿಯ ವೇಗ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಮೀನುಗಾರರಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
ದಕ್ಷಿಣ ಒಳನಾಡು: ದಕ್ಷಿಣ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂಗಾರು ಪೂರ್ವ ಚಟುವಟಿಕೆಗಳು ಸಕ್ರಿಯವಾಗಿವೆ.ಭಾರೀ ಮಳೆಯಾಗುವ ಹಿನ್ನೆಲೆಯಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ನಿಲ್ಲುವ ಅಥವಾ ರಸ್ತೆ ಸಂಚಾರಕ್ಕೆ ಅಡಚಣೆಯಾಗುವ ಸಾಧ್ಯತೆಯಿದೆ. ಜನರು ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ.

