ದೇಶದ ಹಲವು ಭಾಗಗಳಲ್ಲಿ ನೈಋತ್ಯ ಮುಂಗಾರು ಅಬ್ಬರ ಮುಂದುವರಿದಿದ್ದು, ಶುಕ್ರವಾರ ಬೆಳಗ್ಗಿನಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದ ರಾಷ್ಟ್ರ ರಾಜಧಾನಿ ದೆಹಲಿ ಸೇರಿದಂತೆ ಅನೇಕ ರಾಜ್ಯಗಳಲ್ಲಿ ರಸ್ತೆಗಳು ಜಲಾವೃತವಾಗಿವೆ. ಭಾರೀ ಸಂಚಾರ ದಟ್ಟಣೆ, ಭೂಕುಸಿತ ಹಾಗೂ ಮಣ್ಣಿನ ಕುಸಿತಗಳಿಂದ ಜನಜೀವನ ಅಸ್ತವ್ಯಸ್ತವಾಗಿದೆ.
ಈ ಹಿನ್ನೆಲೆಯಲ್ಲಿ, ಮುಂದಿನ 24 ಗಂಟೆಗಳಲ್ಲಿ ದೇಶದ ಹಲವು ರಾಜ್ಯಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಎಚ್ಚರಿಕೆ ನೀಡಿದೆ.ಮುಂದಿನ 24 ಗಂಟೆಗಳಲ್ಲಿ ಒಡಿಶಾ, ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ, ಪೂರ್ವ ಮಧ್ಯಪ್ರದೇಶ, ಪೂರ್ವ ರಾಜಸ್ಥಾನ ಹಾಗೂ ಕೇರಳದಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.
ಮಳೆಯ ಅಬ್ಬರಕ್ಕೆ ತತ್ತರಿಸಿದ ರಾಜ್ಯಗಳು
* ದೆಹಲಿ-ಎನ್ಸಿಆರ್ನಲ್ಲಿ ಧಾರಾಕಾರ ಮಳೆ : ದೆಹಲಿ, ನೋಯ್ಡಾ, ಗುರುಗ್ರಾಮ್ ಹಾಗೂ ಫರೀದಾಬಾದ್ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿದೆ. ಆಗಸ್ಟ್ ತಿಂಗಳಲ್ಲಿ ದಾಖಲಾದ ಅತಿ ಹೆಚ್ಚು ಮಳೆಯ ದಿನವಾಗಿ ಶುಕ್ರವಾರ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಐಎಂಡಿ ದೆಹಲಿಗೆ ರೆಡ್ ಅಲರ್ಟ್ ಘೋಷಿಸಿದೆ. ಮಧ್ಯಾಹ್ನ ಆರಂಭವಾದ ಮಳೆ ರಾತ್ರಿ ತನಕ ಮುಂದುವರಿಯುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕೇರಳದ 7 ಜಿಲ್ಲೆಗಳಿಗೆ ರೆಡ್ ಅಲರ್ಟ್
ಕೇರಳದಲ್ಲಿ ಪರಿಸ್ಥಿತಿ ಮತ್ತಷ್ಟು ಗಂಭೀರವಾಗಿದೆ. ಅಲಪ್ಪುಳ, ಕೊಟ್ಟಾಯಂ, ಎರ್ನಾಕುಳಂ, ತ್ರಿಶೂರ್, ಪಾಲಕ್ಕಾಡ್, ಕಣ್ಣೂರು ಮತ್ತು ಕಾಸರಗೋಡು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ.ಪತ್ತನಂತಿಟ್ಟ, ಇಡುಕ್ಕಿ, ಮಲಪ್ಪುರಂ, ವಯನಾಡು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್, ತಿರುವನಂತಪುರಂ ಮತ್ತು ಕೊಲ್ಲಂ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಲಾಗಿದೆ.ಕೊಚ್ಚಿ–ಸೇಲಂ ರಾಷ್ಟ್ರೀಯ ಹೆದ್ದಾರಿಯ ಕುತೀರನ್ ಕವಲ ಸುರಂಗದ ಸಮೀಪ ಸಣ್ಣ ಪ್ರಮಾಣದ ಭೂಕುಸಿತ ಸಂಭವಿಸಿದೆ.
ಶಾಲೆಗಳಿಗೆ ರಜೆ
ಎರ್ನಾಕುಳಂ, ತ್ರಿಶೂರ್, ಪತ್ತನಂತಿಟ್ಟ, ಅಲಪ್ಪುಳ, ಕೊಟ್ಟಾಯಂ, ವಯನಾಡು, ಕಣ್ಣೂರು ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿನ ಶಾಲೆ ಹಾಗೂ ಶಿಕ್ಷಣ ಸಂಸ್ಥೆಗಳಿಗೆ ಸ್ಥಳೀಯ ಆಡಳಿತ ರಜೆ ಘೋಷಿಸಿದೆ.
ಹಿಮಾಚಲ ಪ್ರದೇಶದಲ್ಲಿ 145 ರಸ್ತೆಗಳು ಬಂದ್
ಭಾರೀ ಮಳೆಯಿಂದ ಉಂಟಾದ ಭೂಕುಸಿತದ ಪರಿಣಾಮ ಮಂಡಿ, ಕುಲ್ಲು, ಸಿರ್ಮೌರ್, ಶಿಮ್ಲಾ, ಕಾಂಗ್ರಾ, ಕಿನ್ನೌರ್ ಹಾಗೂ ಊನಾ ಜಿಲ್ಲೆಗಳಲ್ಲಿನ ಸುಮಾರು 145 ಪ್ರಮುಖ ರಸ್ತೆಗಳು ಬಂದ್ ಆಗಿವೆ.224 ವಿದ್ಯುತ್ ಟ್ರಾನ್ಸ್ಫಾರ್ಮರ್ಗಳು ಹಾನಿಗೊಳಗಾಗಿದ್ದು, 14 ಕುಡಿಯುವ ನೀರಿನ ಯೋಜನೆಗಳಿಗೆ ಅಡಚಣೆ ಉಂಟಾಗಿದೆ. ಜೂನ್ 30ರಿಂದ ಇದುವರೆಗೆ ಮಳೆ ಹಾಗೂ ಪ್ರವಾಹದಿಂದ ರಾಜ್ಯದಲ್ಲಿ 64 ಮಂದಿ ಮೃತಪಟ್ಟಿದ್ದಾರೆ ಎಂದು ರಾಜ್ಯ ತುರ್ತು ಕಾರ್ಯಾಚರಣೆ ಕೇಂದ್ರ (SEOC) ತಿಳಿಸಿದೆ.
ಉತ್ತರಾಖಂಡದಲ್ಲಿ ನದಿಗಳು ಅಪಾಯದ ಮಟ್ಟದಲ್ಲಿ
ಉತ್ತರಾಖಂಡದಲ್ಲಿ ಅಲಕನಂದಾ, ಭಾಗೀರಥಿ, ಮಂದಾಕಿನಿ ಹಾಗೂ ಗಂಗಾ ನದಿಗಳು ಅಪಾಯದ ಮಟ್ಟದಲ್ಲಿ ಹರಿಯುತ್ತಿವೆ.ದೆಹ್ರಾಡೂನ್, ಚಮೋಲಿ ಮತ್ತು ಬಾಗೇಶ್ವರ್ ಜಿಲ್ಲೆಗಳಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದ್ದು, 12ನೇ ತರಗತಿವರೆಗೆ ಶಾಲೆಗಳಿಗೆ ರಜೆ ನೀಡಲಾಗಿದೆ.ಮಳೆ ಹಾಗೂ ಭೂಕುಸಿತದಿಂದ 4 ರಾಷ್ಟ್ರೀಯ ಹೆದ್ದಾರಿಗಳು ಸೇರಿದಂತೆ 132 ರಸ್ತೆಗಳು ಸಂಚಾರಕ್ಕೆ ಬಂದ್ ಆಗಿವೆ. ಉತ್ತರಕಾಶಿಯ ಯಮುನೋತ್ರಿ ರಾಷ್ಟ್ರೀಯ ಹೆದ್ದಾರಿ ಹಾಗೂ ರುದ್ರಪ್ರಯಾಗದ ರಿಷಿಕೇಶ್–ಕೇದಾರನಾಥ ಹೆದ್ದಾರಿಯಲ್ಲೂ ಸಂಚಾರ ಸ್ಥಗಿತಗೊಂಡಿದೆ.
ಐಎಂಡಿಯ ಮಳೆ ಎಚ್ಚರಿಕೆ
ಮುಂದಿನ 24 ಗಂಟೆಗಳಲ್ಲಿ ಒಡಿಶಾ, ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ, ಪೂರ್ವ ಮಧ್ಯಪ್ರದೇಶ, ಪೂರ್ವ ರಾಜಸ್ಥಾನ ಹಾಗೂ ಕೇರಳದಲ್ಲಿ ಅತಿ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಐಎಂಡಿ ತಿಳಿಸಿದೆ.ಇದರ ಜೊತೆಗೆ ಬಿಹಾರ, ಛತ್ತೀಸ್ಗಢ, ಜಾರ್ಖಂಡ್, ಪಶ್ಚಿಮ ಬಂಗಾಳ, ಅಸ್ಸಾಂ, ಮೇಘಾಲಯ, ಅರುಣಾಚಲ ಪ್ರದೇಶ, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶ ರಾಜ್ಯಗಳ ಕೆಲ ಭಾಗಗಳಲ್ಲಿಯೂ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.

