HomeKarnatakaರಾಜ್ಯದಲ್ಲಿ 583ಕ್ಕೂ ಹೆಚ್ಚು ನಕಲಿ ವೈದ್ಯರು ಪತ್ತೆ: ಚಿಕಿತ್ಸೆ ಪಡೆಯುವ ಮುನ್ನ ವೈದ್ಯರ ಪ್ರಮಾಣಪತ್ರ ಪರಿಶೀಲಿಸಲು...

ರಾಜ್ಯದಲ್ಲಿ 583ಕ್ಕೂ ಹೆಚ್ಚು ನಕಲಿ ವೈದ್ಯರು ಪತ್ತೆ: ಚಿಕಿತ್ಸೆ ಪಡೆಯುವ ಮುನ್ನ ವೈದ್ಯರ ಪ್ರಮಾಣಪತ್ರ ಪರಿಶೀಲಿಸಲು ಸೂಚನೆ

ಬೆಂಗಳೂರು: ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ನಕಲಿ ವೈದ್ಯರು, ನಕಲಿ ಕ್ಲಿನಿಕ್ ಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕೊವಿಡ್ ಸಾಂಕ್ರಾಮಿಕ ರೋಗದ ಬಳಿಕ ಸೂಕ್ತ ಪದವಿ, ತರಬೇತಿ ಹಾಗೂ ನೋಂದಣಿ ಇಲ್ಲದೆಯೇ ತಲೆ ಎತ್ತಿರುವ ಸಾವಿರಾರು ನಕಲಿ ಕ್ಲಿನಿಕ್‌ಗಳ ವಿರುದ್ಧ ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳುತ್ತಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಆರೋಗ್ಯ ಇಲಾಖೆ ನಡೆಸಿದ ಕಾರ್ಯಾಚರಣೆಯಲ್ಲಿ ರಾಜ್ಯದಲ್ಲಿ ಇದುವರೆಗೆ 583ಕ್ಕೂ ಹೆಚ್ಚು ನಕಲಿ ವೈದ್ಯರನ್ನು ಪತ್ತೆ ಹಚ್ಚಿ ಅವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ. ಆದಾಗ್ಯೂ, ಆರೋಗ್ಯ ಇಲಾಖೆಗೆ ನಕಲಿ ವೈದ್ಯರ ವಿರುದ್ಧ ಸಾಲು ಸಾಲು ದೂರುಗಳು ಬರುತ್ತಿದೆ. ಅಲೋಪಥಿ, ಆಯುರ್ವೇದ, ಹೋಮಿಯೋಪಥಿ ಹಾಗೂ ನ್ಯಾಚುರೋಪಥಿ ಹೆಸರುಗಳಲ್ಲಿ ಅನಧಿಕೃತ ದಂಧೆ ನಡೆಸುತ್ತಿರುವವರ ಪಟ್ಟಿಯನ್ನು ಇಲಾಖೆ ಸಿದ್ಧಪಡಿಸಿದೆ.

ಗಡಿ ಭಾಗದ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರಿನಲ್ಲಿ ಕೆಲವರು ‘ಮೊಬೈಲ್ ಕ್ಲಿನಿಕ್’ ಮಾಡಿಕೊಂಡು ಪ್ರತಿದಿನ ಸ್ಥಳ ಮತ್ತು ಫೋನ್ ನಂಬರ್ ಬದಲಾಯಿಸುತ್ತಾ ಚಿಕಿತ್ಸೆ ನೀಡುತ್ತಿದ್ದಾರೆ. ಕೆಲ ನಿರುದ್ಯೋಗಿಗಳು ಜನರ ಅನಾರೋಗ್ಯವನ್ನೇ ಬಂಡವಾಳ ಮಾಡಿಕೊಂಡು ಎಂಬಿಬಿಎಸ್ ಪದವಿ ಇಲ್ಲದೆ ಕ್ಲಿನಿಕ್ ತೆರೆದು ಚಿಕಿತ್ಸೆ ನೀಡುತ್ತಿರುವುದು ಬೆಳಕಿಗೆ ಬಂದಿದೆ.

ನಕಲಿ ವೈದ್ಯರ ಬಗ್ಗೆ ಅರಿವಿಲ್ಲದ ಜನರು ಅನಾರೋಗ್ಯ ಸಮಸ್ಯೆ ಎದುರಾದಾಗ ಇಂತಹ ಕ್ಲಿನಿಕ್ ಗಳಿಗೆ ತೆರಳಿ ಚಿಕಿತ್ಸೆ ಪಡೆಯುವುದರಿಂದ ಇನ್ನಷ್ಟು ಸಮಸ್ಯೆಗೆ ಸಿಲುಕುವಂತಾಗಿದೆ. ನಕಲಿ ವೈದ್ಯರು ನೀಡುವ ಅವೈಜ್ಞಾನಿಕ ಮಾತ್ರೆ ಮತ್ತು ಚಿಕಿತ್ಸೆಯಿಂದ ಸಾರ್ವಜನಿಕರ ಜೀವಕ್ಕೆ ಸಂಚಕಾರ ಒದಗುತ್ತಿದೆ. ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆಯು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದ್ದು, ಸಾರ್ವಜನಿಕರು ಸಹ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದೆ.

ಯಾವುದೇ ಕ್ಲಿನಿಕ್ ಆಸ್ಪತ್ರೆಗೆ ತೆರಳುವ ಮುನ್ನ ವೈದ್ಯರ ಪ್ರಮಾಣಪತ್ರ ಮತ್ತು ಆಸ್ಪತ್ರೆಯ ಮಾನ್ಯತೆಯನ್ನು ಕಡ್ಡಾಯವಾಗಿ ಪರಿಶೀಲಿಸಬೇಕು. ಸಿಕ್ಕ ಸಿಕ್ಕ ಕ್ಲಿನಿಕ್‌ಗಳಿಗೆ ಹೋಗಿ ತುರ್ತು ಚಿಕಿತ್ಸೆ ಪಡೆಯುವ ಬದಲು ಅಧಿಕೃತ ವೈದ್ಯರನ್ನು ಮಾತ್ರ ಸಂಪರ್ಕಿಸಬೇಕು.

ನಕಲಿ ವೈದ್ಯರನ್ನು ಮಟ್ಟಹಾಕಲು ಆರೋಗ್ಯ ಇಲಾಖೆ ನಡೆಸುತ್ತಿರುವ ವಿಶೇಷ ಕಾರ್ಯಾಚರಣೆಗೆ ಸಾರ್ವಜನಿಕರು ಮಾಹಿತಿ ನೀಡಿ ಸಹಕರಿಸಬೇಕು. ಇತ್ತೀಚೆಗೆ ಕಲುಷಿತ ಆಹಾರ ನೀಡುತ್ತಿದ್ದ ಹೋಟೆಲ್‌ಗಳ ಮೇಲೆ ದಾಳಿ ನಡೆಸಿದ್ದ ಆರೋಗ್ಯ ಇಲಾಖೆ ಅಧಿಕಾರಿಗಳು ಈಗ ನಕಲಿ ಕ್ಲಿನ್ಕ್, ನಕಲಿ ವೈದ್ಯರ ಮೇಲೆ ದಾಳಿ ನಡೆಸಲು ಮುಂದಾಗಿದ್ದಾರೆ. ಒಟ್ಟಾರೆ ಜನರ ಜೀವದ ಜೊತೆ ಆಟವಾಡುತ್ತಿರುವ ನಕಲಿ ವೈದ್ಯರ ಜಾಲಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆ ಮುಂದಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular