HomeCrimeಬಿಯರ್ ಬಾಟಲಿ ಹಿಡಿದು ಪಬ್‌ ನಲ್ಲಿ ಮಾರಾಮಾರಿ ; ಕಾಂಗ್ರೆಸ್ ಸಂಸದರ ಸಹೋದರನ ವಿರುದ್ಧ ಎಫ್‌ಐಆರ್...

ಬಿಯರ್ ಬಾಟಲಿ ಹಿಡಿದು ಪಬ್‌ ನಲ್ಲಿ ಮಾರಾಮಾರಿ ; ಕಾಂಗ್ರೆಸ್ ಸಂಸದರ ಸಹೋದರನ ವಿರುದ್ಧ ಎಫ್‌ಐಆರ್ | Video

ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಜುಬಿಲಿ ಹಿಲ್ಸ್‌ನ ಪ್ರತಿಷ್ಠಿತ ಪಬ್ ಒಂದರಲ್ಲಿ ತಡರಾತ್ರಿ ಎರಡು ಗುಂಪುಗಳ ನಡುವೆ ಭೀಕರ ಮಾರಾಮಾರಿ ನಡೆದಿದ್ದು, ಬಿಯರ್ ಬಾಟಲಿಗಳು ಹಾಗೂ ಕುರ್ಚಿಗಳಿಂದ ಪರಸ್ಪರ ಹೊಡೆದಾಡಿಕೊಂಡ ಘಟನೆ ನಡೆದಿದೆ. ಈ ಗಲಾಟೆಯಲ್ಲಿ ಇಬ್ಬರು ತೀವ್ರವಾಗಿ ಗಾಯಗೊಂಡಿದ್ದು, ಪಬ್‌ನ ಆಸ್ತಿಪಾಸ್ತಿ ಹಾಗೂ ಪಾರ್ಕಿಂಗ್‌ನಲ್ಲಿದ್ದ ಕಾರುಗಳು ಜಖಂಗೊಂಡಿವೆ.

ಈ ಘಟನೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ರಾಜ್ಯಸಭಾ ಸಂಸದ ಅನಿಲ್ ಕುಮಾರ್ ಯಾದವ್ ಅವರ ಸಹೋದರ ಅರವಿಂದ್ ಕುಮಾರ್ ಯಾದವ್ (ಅಲಿಯಾಸ್ ಟಿಲ್ಲು) ಸೇರಿದಂತೆ 21 ಜನರ ವಿರುದ್ಧ ಪೊಲೀಸರು ಮೂರು ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿಕೊಂಡಿದ್ದಾರೆ.

ರಾತ್ರಿ 2 ಗಂಟೆಗೆ ಹೊತ್ತಿ ಉರಿದ ಕಿಡಿ

ಪೊಲೀಸರ ಮಾಹಿತಿಯ ಪ್ರಕಾರ, ಜುಬಿಲಿ ಹಿಲ್ಸ್‌ನ ದಸ್ಪಲ್ಲಾ ಹೋಟೆಲ್‌ನಲ್ಲಿರುವ ‘ಕಾರಾ ಕಾರಾ’ (Cara Cara Pub) ಪಬ್‌ನಲ್ಲಿ ಭಾನುವಾರ ಮುಂಜಾನೆ ಸುಮಾರು 2:10ರ ವೇಳೆಗೆ ಈ ಘಟನೆ ನಡೆದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಸದರ ಸಹೋದರ ಅರವಿಂದ್ ಕುಮಾರ್ ಯಾದವ್ ತಮ್ಮ ಕುಟುಂಬ ಹಾಗೂ ಸ್ನೇಹಿತರೊಂದಿಗೆ ಪಬ್‌ನಲ್ಲಿದ್ದರು. ಅದೇ ವೇಳೆ ವಸೀಮ್ ಖಾನ್ ಮತ್ತು ಅಫ್ಸರ್ ಖಾನ್ ನೇತೃತ್ವದ ಮತ್ತೊಂದು ಗುಂಪಿನೊಂದಿಗೆ ಯಾವುದೋ ಕ್ಷುಲ್ಲಕ ಕಾರಣಕ್ಕೆ ಮಾತಿನ ಚಕಮಕಿ ಆರಂಭವಾಗಿದೆ. ಕ್ಷಣಾರ್ಧದಲ್ಲೇ ಪರಿಸ್ಥಿತಿ ವಿಕೋಪಕ್ಕೆ ತಿರುಗಿ, ಎರಡೂ ಬಣಗಳು ಕುರ್ಚಿಗಳು ಮತ್ತು ಬಿಯರ್ ಬಾಟಲಿಗಳನ್ನು ಹಿಡಿದು ಪರಸ್ಪರ ಎಸೆದಾಡಿಕೊಂಡಿವೆ. ತಕ್ಷಣವೇ ಪಬ್‌ನ ಬೌನ್ಸರ್‌ಗಳು ಮಧ್ಯಪ್ರವೇಶಿಸಿ ಇವರನ್ನು ಬೇರ್ಪಡಿಸಿ ಹೊರಕಳಿಸಿದ್ದಾರೆ.

ಪಾರ್ಕಿಂಗ್‌ವರೆಗೆ ವಿಸ್ತರಿಸಿದ ಗ್ಯಾಂಗ್ ವಾರ್

ಆದರೆ, ಗಲಾಟೆ ಅಷ್ಟಕ್ಕೇ ನಿಲ್ಲಲಿಲ್ಲ. ಪಬ್‌ನಿಂದ ಹೊರಬಂದ ನಂತರ ಹೋಟೆಲ್‌ನ ಪಾರ್ಕಿಂಗ್ ಪ್ರದೇಶದಲ್ಲೂ ಎರಡೂ ಗುಂಪುಗಳು ಮತ್ತೆ ಮುಖಾಮುಖಿಯಾಗಿವೆ. ಅಲ್ಲಿಗೆ ಹೊರಗಿನಿಂದ ಬಂದ ಮತ್ತಷ್ಟು ಜನ ಸೇರಿಕೊಂಡು ಪರಿಸ್ಥಿತಿ ರಣಾಂಗಣವಾಗಿ ಮಾರ್ಪಟ್ಟಿದೆ.

ವಸೀಮ್ ಖಾನ್ ಮತ್ತು ಆತನ ಸ್ನೇಹಿತ ಕಾರಿನಲ್ಲಿ ಮನೆಗೆ ತೆರಳುತ್ತಿದ್ದಾಗ ಅವರ ಕಾರನ್ನು ಅಡ್ಡಗಟ್ಟಿ, ಹಿಗ್ಗಾಮುಗ್ಗಾ ಥಳಿಸಿ, ಕಾರನ್ನು ಪುಡಿಪುಡಿ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಈ ಗಲಾಟೆಯಲ್ಲಿ ಇಬ್ಬರಿಗೆ ಗಂಭೀರ ಗಾಯಗಳಾಗಿದ್ದು, ಸ್ಥಳದಲ್ಲಿದ್ದ ಜನರು ಮೊಬೈಲ್‌ನಲ್ಲಿ ಸೆರೆಹಿಡಿದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿವೆ.

21 ಜನರ ವಿರುದ್ಧ 3 ಕೇಸ್ ದಾಖಲು

ಘಟನೆ ಸಂಬಂಧ ಜುಬಿಲಿ ಹಿಲ್ಸ್ ಡಿಸಿಪಿ ನೇತೃತ್ವದಲ್ಲಿ ಪೊಲೀಸರು ಮೂರು ಪ್ರತ್ಯೇಕ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ. ಎರಡೂ ಗುಂಪುಗಳ ಒಟ್ಟು 21 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಸಂಸದರ ಸಹೋದರ ಅರವಿಂದ್ ಯಾದವ್ ಸದ್ಯ ತಲೆಮರೆಸಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಅರವಿಂದ್ ಯಾದವ್ ಸಿಕಂದರಾಬಾದ್‌ನ ಮಾಜಿ ಸಂಸದ ಅಂಜನ್ ಕುಮಾರ್ ಯಾದವ್ ಅವರ ಪುತ್ರ ಹಾಗೂ ಹಾಲಿ ರಾಜ್ಯಸಭಾ ಸಂಸದ ಅನಿಲ್ ಕುಮಾರ್ ಯಾದವ್ ಅವರ ಸಹೋದರನಾಗಿದ್ದಾರೆ. ಜೊತೆಗೆ, ನಿಯಮಗಳನ್ನು ಗಾಳಿಗೆ ತೂರಿ ನಿಗದಿತ ಸಮಯಕ್ಕಿಂತಲೂ ತಡರಾತ್ರಿವರೆಗೆ ಅನುಮತಿಯಿಲ್ಲದೆ ಪಬ್ ನಡೆಸುತ್ತಿದ್ದ ಮಾಲೀಕರ ವಿರುದ್ಧವೂ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಸರ್ಕಾರದ ವಿರುದ್ಧ ಪ್ರವೀಣ್ ಕುಮಾರ್ ಕಿಡಿ

ಪಬ್ ಗಲಾಟೆಯು ತೆಲಂಗಾಣ ರಾಜಕೀಯದಲ್ಲೂ ಭಾರಿ ಸಂಚಲನ ಮೂಡಿಸಿದೆ. ಬಿಆರ್‌ಎಸ್ ಹಿರಿಯ ನಾಯಕ ಹಾಗೂ ಮಾಜಿ ಐಪಿಎಸ್ ಅಧಿಕಾರಿ ಆರ್.ಎಸ್. ಪ್ರವೀಣ್ ಕುಮಾರ್ ಎಕ್ಸ್ (ಟ್ವಿಟರ್) ಮೂಲಕ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಕಾಂಗ್ರೆಸ್ ಯುವ ನಾಯಕರು ಪಬ್‌ಗಳಲ್ಲಿ ಮುಳುಗೇಳುತ್ತಿದ್ದಾರೆ. ಅವರು ಎಷ್ಟೇ ಅಟ್ಟಹಾಸ ಮೆರೆದರೂ ಅವರ ವಿರುದ್ಧ ಕೇಸ್ ಹಾಕಲು ಯಾರಿಗೂ ಧೈರ್ಯವಿಲ್ಲದಂತಾಗಿದೆ,” ಎಂದು ಕಿಡಿಕಾರಿದ್ದಾರೆ. ಡಿಜಿಪಿ ಸಿ.ವಿ. ಆನಂದ್, ಪೊಲೀಸ್ ಕಮಿಷನರ್ ವಿಸಿ ಸಜ್ಜನರ್ ಹಾಗೂ ಸಿಎಂಒಗೆ ಟ್ಯಾಗ್ ಮಾಡಿರುವ ಅವರು, “ಸಮಯ ಮೀರಿದರೂ ಪಬ್ ನಡೆಯಲು ಬಿಟ್ಟ ಸ್ಥಳೀಯ ಸಬ್ ಇನ್‌ಸ್ಪೆಕ್ಟರ್ ಮೇಲೆ ಏಕೆ ಕ್ರಮ ಕೈಗೊಂಡಿಲ್ಲ? ಕಾರಾ ಕಾರಾ ಪಬ್ ಲೈಸೆನ್ಸ್ ಅನ್ನು ಏಕೆ ರದ್ದು ಮಾಡಿಲ್ಲ?” ಎಂದು ನೇರವಾಗಿ ಪ್ರಶ್ನಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular