ಇಂದಿನ ದಿನಗಳಲ್ಲಿ ಆರೋಗ್ಯ ವಿಮೆ (Health Insurance) ಎಂಬುದು ಕೇವಲ ಆಯ್ಕೆಯಲ್ಲ, ಅದೊಂದು ಅನಿವಾರ್ಯತೆ. ಆದರೆ, ವಿಮೆ ಮಾಡಿಸುವ ಭರದಲ್ಲಿ ನಾವು ಮಾಡುವ ಸಣ್ಣ ತಪ್ಪುಗಳು ಸಂಕಷ್ಟದ ಸಮಯದಲ್ಲಿ ಕೈಕೊಡಬಹುದು. ಸರಿಯಾದ ಯೋಜನೆಯನ್ನು ಆರಿಸಿಕೊಳ್ಳದಿದ್ದರೆ ಆರ್ಥಿಕ ನಷ್ಟ ಮಾತ್ರವಲ್ಲ, ಉತ್ತಮ ಚಿಕಿತ್ಸೆಯಿಂದಲೂ ವಂಚಿತರಾಗಬೇಕಾಗುತ್ತದೆ.
ನೀವು ಮೊದಲ ಬಾರಿಗೆ ವಿಮೆ ಪಡೆಯುತ್ತಿದ್ದರೆ ಅಥವಾ ಹಳೆಯ ಪಾಲಿಸಿಯನ್ನು ನವೀಕರಿಸುತ್ತಿದ್ದರೆ, ಈ ಕೆಳಗಿನ ಪ್ರಮುಖ ಅಂಶಗಳ ಬಗ್ಗೆ ಎಚ್ಚರವಿರಲಿ:
1.ಕಡಿಮೆ ಪ್ರೀಮಿಯಂ ಆಸೆಗೆ ಬೀಳಬೇಡಿ
ಅನೇಕರು ಹಣ ಉಳಿಸುವ ಉದ್ದೇಶದಿಂದ ಅತಿ ಕಡಿಮೆ ಪ್ರೀಮಿಯಂ ಇರುವ ಪಾಲಿಸಿಯನ್ನು ಆರಿಸಿಕೊಳ್ಳುತ್ತಾರೆ. ಆದರೆ ನೆನಪಿಡಿ, ಕಡಿಮೆ ಬೆಲೆಯ ಪಾಲಿಸಿಗಳಲ್ಲಿ ಕವರೇಜ್ (Coverage) ಕೂಡ ಕಡಿಮೆಯಿರುತ್ತದೆ. ತುರ್ತು ಸಂದರ್ಭದಲ್ಲಿ ಕಂಪನಿಯು ಅಲ್ಪ ಮೊತ್ತವನ್ನಷ್ಟೇ ಭರಿಸಬಹುದು, ಉಳಿದ ಹಣವನ್ನು ನೀವೇ ಜೇಬಿನಿಂದ ಹಾಕಬೇಕಾಗುತ್ತದೆ.
2.ಕವರೇಜ್ ಮೊತ್ತ (Sum Insured) ಎಷ್ಟಿರಬೇಕು?
ಕುಟುಂಬದ ಸದಸ್ಯರ ಸಂಖ್ಯೆ, ವಯಸ್ಸು ಮತ್ತು ಇಂದಿನ ವೈದ್ಯಕೀಯ ವೆಚ್ಚಗಳನ್ನು ಗಮನದಲ್ಲಿಟ್ಟುಕೊಂಡು ವಿಮಾ ಮೊತ್ತವನ್ನು ನಿರ್ಧರಿಸಿ. ಹಣದುಬ್ಬರ ಏರುತ್ತಿರುವ ಈ ಕಾಲದಲ್ಲಿ ಅತಿ ಕಡಿಮೆ ಮೊತ್ತದ ವಿಮೆ ಮಾಡಿಸುವುದು ಪ್ರಯೋಜನಕ್ಕೆ ಬರುವುದಿಲ್ಲ.
3.ಪಾಲಿಸಿ ದಾಖಲೆಗಳನ್ನು ಕಡೆಗಣಿಸಬೇಡಿ
ವಿಮೆ ಕಂಪನಿಗಳು ನೀಡುವ ದಸ್ತಾವೇಜುಗಳಲ್ಲಿ ‘ಷರತ್ತುಗಳು ಅನ್ವಯಿಸುತ್ತವೆ’ ಎಂಬ ಸಾಲುಗಳಿರುತ್ತವೆ. ಕಾಯುವ ಅವಧಿ (Waiting Period), ಸಹ-ಪಾವತಿ (Co-payment) ಮತ್ತು ಯಾವೆಲ್ಲ ಕಾಯಿಲೆಗಳು ಪಟ್ಟಿಯಿಂದ ಹೊರಗಿವೆ (Exclusions) ಎಂಬುದನ್ನು ಕೂಲಂಕಷವಾಗಿ ಓದಿ ಅರ್ಥಮಾಡಿಕೊಳ್ಳಿ.
4.ಅನಾರೋಗ್ಯದ ವಿಷಯ ಮುಚ್ಚಿಡಬೇಡಿ
ಪಾಲಿಸಿ ಫಾರ್ಮ್ ತುಂಬುವಾಗ ನಿಮಗೆ ಈಗಾಗಲೇ ಇರುವ ಆರೋಗ್ಯ ಸಮಸ್ಯೆಗಳ (Pre-existing diseases) ಬಗ್ಗೆ ಸರಿಯಾದ ಮಾಹಿತಿ ನೀಡಿ. ವಿಷಯ ಮುಚ್ಚಿಟ್ಟರೆ, ಭವಿಷ್ಯದಲ್ಲಿ ಕ್ಲೈಮ್ ಮಾಡುವಾಗ ವಿಮಾ ಕಂಪನಿಯು ಹಣ ನೀಡಲು ನಿರಾಕರಿಸುವ ಪೂರ್ಣ ಅಧಿಕಾರ ಹೊಂದಿರುತ್ತದೆ.
5.ನೆಟ್‌ವರ್ಕ್ ಆಸ್ಪತ್ರೆಗಳ ಪಟ್ಟಿ ಪರಿಶೀಲಿಸಿ
ನಿಮ್ಮ ಮನೆಯ ಹತ್ತಿರವಿರುವ ಅಥವಾ ನಿಮಗೆ ಪರಿಚಿತವಿರುವ ಆಸ್ಪತ್ರೆಗಳಲ್ಲಿ ‘ಕ್ಯಾಶ್‌ಲೆಸ್’ (Cashless) ಸೌಲಭ್ಯವಿದೆಯೇ ಎಂದು ಮೊದಲೇ ಖಚಿತಪಡಿಸಿಕೊಳ್ಳಿ. ಇಲ್ಲದಿದ್ದರೆ, ನೀವು ಮೊದಲು ಆಸ್ಪತ್ರೆ ಬಿಲ್ ಪಾವತಿಸಿ, ನಂತರ ಕಂಪನಿಯಿಂದ ಹಣ ಪಡೆಯಲು ಅಲೆಯಬೇಕಾಗುತ್ತದೆ.
6.ಆಡ್-ಆನ್ (Add-on) ಕವರ್‌ಗಳ ಮಹತ್ವ ತಿಳಿಯಿರಿ
ಹೆಚ್ಚುವರಿ ರಕ್ಷಣೆ ನೀಡುವ ‘ಆಡ್-ಆನ್’ ಯೋಜನೆಗಳು ಪಾಲಿಸಿಯನ್ನು ಇನ್ನು ಬಲಪಡಿಸುತ್ತವೆ. “ಇದು ಈಗ ಬೇಡ” ಎಂದು ನಿರ್ಲಕ್ಷಿಸುವ ಬದಲು, ನಿಮ್ಮ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅವುಗಳನ್ನು ಸೇರಿಸಿಕೊಳ್ಳುವುದು ಜಾಣತನ.

