ಬೆಂಗಳೂರು: ಬಿಡದಿ ಟೌನ್ ಶಿಪ್ ನಿರ್ಮಾಣಕ್ಕೆ ರೈತರಿಂದ ಭಾರಿ ವಿರೋಧ ವ್ಯಕ್ತವಾಗಿರುವ ವಿಚಾರಕ್ಕೆ ಸಂಬಂಧಿಸಿದಂತೆ ಹೋರಾಟವನ್ನು ರಾಜ್ಯವಾಗಿ ಜನಾಂದೋಲನವಾಗಿ ನಡೆಸಲು ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಮಾಸ್ಟರ್ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಈ ಕುರಿತಾಗಿ ರೈತರ ಜೊತೆಗೆ ಸಭೆ ನಡೆಸಿದ ಬೆನ್ನಲ್ಲೇ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ಅವರು ಯೋಜಿಸಿದ್ದಾರೆ. ಸ್ಥಳೀಯ ಹೋರಾಟವನ್ನು ರಾಜ್ಯಮಟ್ಟದ ರೈತ ಚಳುವಳಿಯಾಗಿ ರೂಪಿಸಲು ಪ್ಲ್ಯಾನ್ ಮಾಡಿಕೊಂಡಿದ್ದಾರೆ.
ಸರ್ಕಾರದ ವಿರುದ್ಧ ರೈತ ಸಂಘಟನೆಗಳನ್ನು ಒಗ್ಗೂಡಿಸಲು ರಣತಂತ್ರ ರೂಪಿಸಿದ್ದಾರೆ. ಈಗಾಗಲೇ ರೈತ ಸಂಘಟನೆಗಳ ಮುಖಂಡರ ಜೊತೆಗೆ ಪ್ರಾಥಮಿಕ ಹಂತದ ಚರ್ಚೆ ನಡೆಸಿರುವ ಕುಮಾರಸ್ವಾಮಿ ಯೋಜನೆ ಹಿಂಪಡೆಯುವವರೆಗೂ ಹೋರಾಟವನ್ನು ತೀವ್ರಗೊಳಿಸಲು ರೂಪುರೇಷೆ ಸಿದ್ದಪಡಿಸಿದ್ದಾರೆ. ಬಿಡದಿಯಿಂದ ರಾಜ್ಯಾದ್ಯಂತ ಹೋರಾಟದ ರಣಕಹಳೆ ಮೊಳಗಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಹೋರಾಟವನ್ನು ತಾರ್ಕಿಕ ಅಂತ್ಯಕ್ಕೆ ಕೊಂಡೊಯ್ಯಲು ಅವರು ನಿರಂತರ ಕಸರತ್ತು ನಡೆಸಿದ್ದು, ಈ ನಿಟ್ಟಿನಲ್ಲಿ ಹೋರಾಟವನ್ನು ಜನಾಂದೋಲನವಾಗಿ ಪರಿವರ್ತಿಸಲು ಸಿದ್ಧತೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.

