HomeKarnatakaಬೆಲೆ ಕುಸಿತದಿಂದ ಕಂಗೆಟ್ಟ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಬರುವಂತೆ ಕೇಂದ್ರದ ಕೃಷಿ ಸಚಿವರಿಗೆ ಎಚ್‌ಡಿಕೆ...

ಬೆಲೆ ಕುಸಿತದಿಂದ ಕಂಗೆಟ್ಟ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಬರುವಂತೆ ಕೇಂದ್ರದ ಕೃಷಿ ಸಚಿವರಿಗೆ ಎಚ್‌ಡಿಕೆ ಮನವಿ

ಬೆಂಗಳೂರು: ಬೆಲೆ ಕುಸಿತದಿಂದ ಕಂಗೆಟ್ಟಿರುವ ರಾಜ್ಯದ ಮಾವು ಬೆಳೆಗಾರರ ನೆರವಿಗೆ ಧಾವಿಸುವಂತೆ ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ. ಕುಮಾರಸ್ವಾಮಿ ಅವರು ಕೇಂದ್ರದ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಲ್ಲಿ ಮನವಿ ಮಾಡಿದ್ದಾರೆ.

ಈ ಬಗ್ಗೆ ಕೃಷಿ ಸಚಿವರಿಗೆ ಪತ್ರವನ್ನು ಬರೆದು, ರೈತರ ಸಂಕಷ್ಟದ ಬಗ್ಗೆ ಚರ್ಚೆ ನಡೆಸಿದ ಸಚಿವ ಕುಮಾರಸ್ವಾಮಿ ಅವರು 2026-27ರ ಋತುವಿನಲ್ಲಿ ರೈತರು ಎದುರಿಸುತ್ತಿರುವ ಬೆಲೆ ಕುಸಿತ ಸಂಕಷ್ಟವನ್ನು ತಗ್ಗಿಸಲು ಮಾರುಕಟ್ಟೆ ಮಧ್ಯಸ್ಥಿಕೆ ಯೋಜನೆ (ಎಂಐಎಸ್) ಮೂಲಕ ನೆರವಾಗಬೇಕು ಹಾಗೂ ಬೆಲೆ ಕೊರತೆ ಪಾವತಿ ಯೋಜನೆ (ಪಿಡಿಪಿಎಸ್) ಅಡಿಯಲ್ಲಿ ಬೆಂಬಲ ಬೆಲೆ ನೀಡಬೇಕು ಎಂದು ಕೇಂದ್ರ ಕೃಷಿ ಸಚಿವರನ್ನು ವಿನಂತಿಸಿದ್ದಾರೆ.

ಮಾರುಕಟ್ಟೆ ಬೆಲೆ ಕುಸಿತ ಮತ್ತು ಹೆಚ್ಚುತ್ತಿರುವ ಕೃಷಿ ವೆಚ್ಚಗಳಿಂದಾಗಿ ಮಾವು ಬೆಳೆಗಾರರು ಎದುರಿಸುತ್ತಿರುವ ಸವಾಲುಗಳನ್ನು ತಮ್ಮ ಪತ್ರದಲ್ಲಿ ಕೃಷಿ ಸಚಿವರ ಗಮನಕ್ಕೆ ತಂದಿರುವ ಸಚಿವ ಕುಮಾರಸ್ವಾಮಿ ಅವರು; ರೈತರು ಮತ್ತು ತೋಟಗಾರಿಕೆ ವಲಯದ ಹಿತಾಸಕ್ತಿಯ ದೃಷ್ಟಿಯಿಂದ ಈ ವಿಷಯವನ್ನು ಸಹಾನುಭೂತಿಯಿಂದ ಪರಿಗಣಿಸುವಂತೆ ಕೋರಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕರ್ನಾಟಕವು ಅತಿಹೆಚ್ಚು ಮಾವು ಬೆಳೆಯುವ ಪ್ರಮುಖ ರಾಜ್ಯಗಳಲ್ಲಿ ಒಂದಾಗಿದೆ. ರಾಜ್ಯದಲ್ಲಿ ಸುಮಾರು 1.45 ಲಕ್ಷ ಹೆಕ್ಟೇರ್‌ಗಳಲ್ಲಿ ಮಾವು ಕೃಷಿ ಮಾಡಲಾಗುತ್ತಿದ್ದು, ಪ್ರಸಕ್ತ ಋತುವಿನಲ್ಲಿ ಸುಮಾರು 10 ಲಕ್ಷ ಮೆಟ್ರಿಕ್ ಟನ್ ಮಾವು ಬೆಳೆಯಲಾಗಿದೆ. ಆದರೆ, ಬೆಲೆ ಕುಸಿತ ಹಾಗೂ ಪ್ರತಿಕೂಲಕರ ಹವಾಮಾನದಿಂದ ರೈತರು ಸಂಕಷ್ಟಕ್ಕೆ ತುತ್ತಾಗಿದ್ದಾರೆ ಎಂದು ಸಚಿವರು ಕೃಷಿ ಸಚಿವರ ಗಮನ ಸೆಳೆದಿದ್ದಾರೆ.

ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ, ಬೆಂಗಳೂರು ಗ್ರಾಮಾಂತರ, ಧಾರವಾಡ, ತುಮಕೂರು ಮತ್ತು ಹಾವೇರಿಯಂತಹ ಜಿಲ್ಲೆಗಳಲ್ಲಿ ಸಾವಿರಾರು ರೈತ ಕುಟುಂಬಗಳು ಮಾವು ಕೃಷಿಯನ್ನು ಅವಲಂಬಿಸಿದೆ. ಇದು ಅತ್ಯಂತ ಪ್ರಮುಖ ವಾಣಿಜ್ಯ ತೋಟಗಾರಿಕಾ ಬೆಳೆಯಾಗಿದೆ. ಮಾರುಕಟ್ಟೆಯ ಏರಿಳಿತಗಳು ಮತ್ತು ಅತಿಯಾದ ಪೂರೈಕೆ ಪರಿಸ್ಥಿತಿಗಳಿಂದಾಗಿ ಅನೇಕ ಬೆಳೆಗಾರರು ತಮ್ಮ ಉತ್ಪನ್ನಗಳನ್ನು ಲಾಭದಾಯಕ ಮಟ್ಟಕ್ಕಿಂತ ಕಡಿಮೆ ಬೆಲೆಗೆ ಮಾರಾಟ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿದೆ ಎಂದು ತಮ್ಮ ಪತ್ರದಲ್ಲಿ ಕೇಂದ್ರ ಸಚಿವರು ಉಲ್ಲೇಖಿಸಿದ್ದಾರೆ.

ಕರ್ನಾಟಕ ಕೃಷಿ ಬೆಲೆ ಆಯೋಗದ ಅಂದಾಜಿನ ಪ್ರಕಾರ ಮಾವಿನ ಕೃಷಿಯ (C-3) ವೆಚ್ಚವನ್ನು ಕ್ವಿಂಟಲ್‌ಗೆ ₹3,951 ಎಂದು ಅಂದಾಜಿಸಲಾಗಿದೆ. ಆದರೆ ಚಾಲ್ತಿಯಲ್ಲಿರುವ ಮಾರುಕಟ್ಟೆ ಬೆಲೆಗಳು ಈ ಮಟ್ಟಕ್ಕಿಂತ ಗಣನೀಯವಾಗಿ ಕಡಿಮೆ ಇರುವುದರಿಂದ ನೀರಾವರಿ, ಕಾರ್ಮಿಕರ ವೆಚ್ಚ ಮತ್ತು ಕೊಯ್ಲು ಕಾರ್ಯಾಚರಣೆಗಳಲ್ಲಿ ಗಣನೀಯ ವೆಚ್ಚದ ಹೊರತಾಗಿಯೂ ರೈತರು ದೊಡ್ಡ ಪ್ರಮಾಣದಲ್ಲಿ ಆರ್ಥಿಕ ನಷ್ಟಕ್ಕೆ ಒಳಗಾಗಿದ್ದಾರೆ ಎಂದು ಸಚಿವರು ಪತ್ರದಲ್ಲಿ ಬರೆದಿದ್ದಾರೆ.

ಪಿಡಿಪಿಎಸ್ ಕಾರ್ಯವಿಧಾನದ ಮೂಲಕ ಬೆಂಬಲ ಬೆಲೆ ನೀಡುವುದರಿಂದ ಮಾರುಕಟ್ಟೆ ಬೆಲೆಗಳು ಮತ್ತು ಲಾಭದಾಯಕ ಆದಾಯದ ನಡುವಿನ ಅಂತರವನ್ನು ಕಡಿಮೆ ಮಾಡಲು ಸಹಾಯವಾಗುತ್ತದೆ ಮತ್ತು ಮಾವು ಬೆಳೆಗಾರರಿಗೆ ಆದಾಯ ರಕ್ಷಣೆಯನ್ನು ಖಚಿತಪಡಿಸುತ್ತದೆ ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

ಕೋಲಾರದಂತಹ ತೋಟಗಾರಿಕೆ ಅವಲಂಬಿತ ಜಿಲ್ಲೆಗಳಲ್ಲಿ ಇಂತಹ ನೆರವು ಅತಿಹೆಚ್ಚು ಪ್ರಯೋಜನಕಾರಿ ಆಗುತ್ತದೆ. ಅಲ್ಲಿ ಮಾವು ಕೃಷಿ ಗ್ರಾಮೀಣ ಆರ್ಥಿಕತೆಯ ಪ್ರಮುಖ ಅಂಶವಾಗಿದೆ ಎಂದಿರುವ ಕೇಂದ್ರ ಸಚಿವರು; ಕರ್ನಾಟಕ ಸರ್ಕಾರದ ಸಮನ್ವಯದೊಂದಿಗೆ ಈ ಪ್ರಸ್ತಾವನೆಯನ್ನು ಪರಿಶೀಲಿಸಬೇಕು. ಪಿಡಿಪಿಎಸ್ ಚೌಕಟ್ಟಿನ ಅಡಿಯಲ್ಲಿ ಮಾವು ಬೆಳೆಗಾರರಿಗೆ ಸೂಕ್ತ ಬೆಂಬಲವನ್ನು ನೀಡುವ ಬಗ್ಗೆ ಪರಿಗಣಿಸಲು ಮತ್ತು ಅಗತ್ಯ ಆಡಳಿತಾತ್ಮಕ ಪ್ರಕ್ರಿಯೆಯನ್ನು ಆದಷ್ಟು ಬೇಗ ಪ್ರಾರಂಭಿಸಲು ಕೃಷಿ ಸಚಿವಾಲಯ ಮುಂದಾಗಬೇಕು ಎಂದು ಸಚಿವರು ಕೋರಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular