ಮುಂಬೈ: ವಯಸ್ಸಾದ ಪೋಷಕರನ್ನು ಮನೆಯಿಂದ ಹೊರಹಾಕುವ ಅಥವಾ ಅವರನ್ನು ಸರಿಯಾಗಿ ನೋಡಿಕೊಳ್ಳದ ಮಕ್ಕಳ ವಿರುದ್ಧ ಬಾಂಬೆ ಹೈಕೋರ್ಟ್ ಗುರುವಾರ ಅತ್ಯಂತ ಮಹತ್ವದ ತೀರ್ಪನ್ನು ನೀಡಿದೆ. ತನ್ನ ಸ್ವಂತ ಮನೆಯಿಂದಲೇ ಮಗ ಮತ್ತು ಸೊಸೆಯಿಂದ ಹೊರದೂಡಲ್ಪಟ್ಟಿದ್ದ 71 ವರ್ಷದ ವೃದ್ಧೆಯ ಪರವಾಗಿ ತೀರ್ಪು ನೀಡಿರುವ ನ್ಯಾಯಾಲಯ, ಹಿರಿಯ ನಾಗರಿಕರು ತಮ್ಮ ನೆಮ್ಮದಿಯ ಜೀವನಕ್ಕಾಗಿ ಮಕ್ಕಳನ್ನು ಮನೆಯಿಂದ ಹೊರಹಾಕುವ ಸಂಪೂರ್ಣ ಹಕ್ಕನ್ನು ಹೊಂದಿದ್ದಾರೆ ಎಂದು ಸ್ಪಷ್ಟಪಡಿಸಿದೆ.
ಘಟನೆಯ ಹಿನ್ನೆಲೆ ಏನು? ಮುಂಬೈನ ಮುಲುಂಡ್ ನಿವಾಸಿಯಾದ ಈ ವೃದ್ಧೆ, ತನ್ನ ಹೆಸರಿನಲ್ಲಿರುವ ಫ್ಲಾಟ್‌ನಲ್ಲಿ ಮಗ ಮತ್ತು ಸೊಸೆಯ ಜೊತೆ ವಾಸವಾಗಿದ್ದರು. ಆದರೆ, ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾಯಿಸುವಂತೆ ಮಗ ಮತ್ತು ಸೊಸೆ ಆಕೆಗೆ ದೈಹಿಕವಾಗಿ ಮತ್ತು ಮಾನಸಿಕವಾಗಿ ಕಿರುಕುಳ ನೀಡುತ್ತಿದ್ದರು ಎಂದು ಆರೋಪಿಸಲಾಗಿತ್ತು. ಅಂತಿಮವಾಗಿ ಕಿರುಕುಳ ತಾಳಲಾರದೆ ಆಕೆ ತನ್ನದೇ ಮನೆಯಿಂದ ಹೊರಬಂದು ವೃದ್ಧಾಶ್ರಮ ಸೇರಬೇಕಾಯಿತು. ಈ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರ ಕಲ್ಯಾಣ ಕಾಯ್ದೆಯಡಿ ಆಕೆ ನ್ಯಾಯ ಮಂಡಳಿಯ ಮೊರೆ ಹೋಗಿದ್ದರು.
ನ್ಯಾಯಾಲಯದ ಕಠಿಣ ನಿಲುವು ನ್ಯಾಯಮೂರ್ತಿ ಎನ್.ಜೆ. ಜಾಮದಾರ್ ಅವರಿದ್ದ ಏಕಸದಸ್ಯ ಪೀಠವು ಈ ಪ್ರಕರಣದ ವಿಚಾರಣೆ ನಡೆಸಿ, “ಹಿರಿಯ ನಾಗರಿಕರು ತಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯವನ್ನು ಕಾಪಾಡಿಕೊಳ್ಳಲು ಅರ್ಹರಾಗಿದ್ದಾರೆ. ಸಂಸತ್ತು ಅಂಗೀಕರಿಸಿರುವ ಕಾನೂನಿನ ಅಡಿಯಲ್ಲಿ ವಿಧವೆಯರು ಅತ್ಯಂತ ದುರ್ಬಲ ವರ್ಗಕ್ಕೆ ಸೇರುತ್ತಾರೆ ಮತ್ತು ಅವರಿಗೆ ವಿಶೇಷ ರಕ್ಷಣೆ ನೀಡುವ ಅವಶ್ಯಕತೆಯಿದೆ” ಎಂದು ಅಭಿಪ್ರಾಯಪಟ್ಟಿತು. ಮನೆಯ ಮಾಲೀಕತ್ವ ವೃದ್ಧೆಯ ಹೆಸರಿನಲ್ಲೇ ಇರುವುದರಿಂದ ಮಗ ಮತ್ತು ಸೊಸೆ ತಕ್ಷಣವೇ ಮನೆಯನ್ನು ಖಾಲಿ ಮಾಡಬೇಕು ಎಂದು ಆದೇಶಿಸಿದೆ.
ಮಗನ ವಾದವನ್ನು ತಳ್ಳಿಹಾಕಿದ ಕೋರ್ಟ್ ವಿಚಾರಣೆಯ ವೇಳೆ ಮಗನು ತಾನು ಫ್ಲಾಟ್ ಖರೀದಿಸಲು ಹಣಕಾಸಿನ ನೆರವು ನೀಡಿದ್ದೇನೆ ಮತ್ತು ತಾಯಿಯ ಆರೋಗ್ಯವನ್ನು ನೋಡಿಕೊಳ್ಳುತ್ತಿದ್ದೇನೆ ಎಂದು ವಾದಿಸಿದ್ದನು. ಆದರೆ, ಆಸ್ತಿ ದಾಖಲೆಗಳು ತಾಯಿಯ ಹೆಸರಿನಲ್ಲೇ ಇರುವುದರಿಂದ ಮತ್ತು ಆಕೆ ಈಗ ವೃದ್ಧಾಶ್ರಮದಲ್ಲಿ ಇರುವುದರಿಂದ ಮಗನ ವಾದದಲ್ಲಿ ಹುರುಳಿಲ್ಲ ಎಂದು ನ್ಯಾಯಾಲಯ ಹೇಳಿದೆ. ಅಲ್ಲದೆ, ತಾಯಿಯನ್ನು ಮನೆಯಿಂದ ಹೊರಹಾಕಿ ಆಕೆಗೆ ಕಿರುಕುಳ ನೀಡಿರುವುದು ಸಾಬೀತಾಗಿರುವುದರಿಂದ, ಆಕೆ ತನ್ನ ಮನೆಯಲ್ಲಿ ಸ್ವತಂತ್ರವಾಗಿ ಮತ್ತು ನೆಮ್ಮದಿಯಿಂದ ಬದುಕಲು ಅವಕಾಶ ಮಾಡಿಕೊಡುವುದು ಅನಿವಾರ್ಯ ಎಂದು ಕೋರ್ಟ್ ಹೇಳಿದೆ.
ಮೂರು ವಾರಗಳ ಗಡುವು ನ್ಯಾಯಮಂಡಳಿಯ ಆದೇಶವನ್ನು ಎತ್ತಿ ಹಿಡಿದಿರುವ ಹೈಕೋರ್ಟ್, ಮಾರ್ಚ್ 5 ರಂದು ನೀಡಿದ ತೀರ್ಪಿನಲ್ಲಿ ಮಗ ಮತ್ತು ಸೊಸೆಗೆ ಮನೆ ಖಾಲಿ ಮಾಡಲು ಮೂರು ವಾರಗಳ ಕಾಲಾವಕಾಶ ನೀಡಿದೆ. ಈ ಮೂಲಕ ವಯಸ್ಸಾದ ಪೋಷಕರಿಗೆ ಕಿರುಕುಳ ನೀಡುವ ಮಕ್ಕಳಿಗೆ ಕಾನೂನು ಬಲವಾದ ಸಂದೇಶ ರವಾನಿಸಿದೆ.

