ಹಾವೇರಿ: ಅನಾರೋಗ್ಯದಿಂದಾಗಿ ಮಹಿಳೆ ಮೃತಪಟ್ಟಿದ್ದಾರೆಂದು ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದ್ದಾಗಲೇ ಅಚ್ಚರಿ ರೀತಿಯಲ್ಲಿ ಬದುಕುಳಿದ ಘಟನೆ ಹಾವೇರಿ ಜಿಲ್ಲೆಯಲ್ಲಿ ನಡೆದಿದೆ.
ಹಾವೇರಿ ಜಿಲ್ಲೆಯ ಹಿರೇಕೆರೂರು ತಾಲೂಕಿನ ಗೊಡಚಿಕೊಂಡ ಗ್ರಾಮದಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ಮಹಿಳೆ ಮೃತಪಟ್ಟಿದ್ದಾರೆ ಎಂದು ತಿಳಿದ ಕುಟುಂಬದವರು ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಂಡಿದ್ದಾರೆ. ಈ ವೇಳೆ ಅಚ್ಚರಿಯ ರೀತಿಯಲ್ಲಿ ಮರು ಜೀವ ದೊರೆತಿದೆ.
ಸೋಮವಾರ ರಾತ್ರಿ ರೇಣುಕಮ್ಮ ಸಂಕಳ್ಳಿ ತೀವ್ರ ಅಸ್ವಸ್ಥರಾಗಿದ್ದರು. ಅವರು ಮೃತಪಟ್ಟಿದ್ದಾರೆ ತಿಳಿದ ಕುಟುಂಬದವರು ಅಂತ್ಯಕ್ರಿಯೆಗೆ ಸಿದ್ಧತೆ ವೇಳೆ ಘಟನೆ ನಡೆದಿದೆ. ರಕ್ತದೊತ್ತಡ ಮತ್ತು ರಕ್ತದಲ್ಲಿ ಸಕ್ಕರೆ ಪ್ರಮಾಣ ತೀವ್ರ ಏರುಪೇರು ಆಗಿದ್ದರಿಂದ ರೇಣುಕಮ್ಮ ಪ್ರಜ್ಞಾಹೀನರಾಗಿದ್ದರು, ಕುಟುಂಬದವರು ಸ್ಥಳೀಯ ವೈದ್ಯರ ಬಳಿಗೆ ಅವರನ್ನು ಕರೆದುಕೊಂಡು ಹೋಗಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದ್ದು ಉಸಿರಾಟ ಕ್ಷೀಣಿಸಿದೆ. ರೇಣುಕಮ್ಮ ಮೃತಪಟ್ಟಿದ್ದಾರೆಂದು ಭಾವಿಸಿದ ಕುಟುಂಬದವರು ಅಂತ್ಯಕ್ರಿಯೆಗೆ ಸಿದ್ಧತೆ ಮಾಡಿಕೊಂಡಿದ್ದಾರೆ. ನಂತರ ಉಸಿರಾಟದ ಚಲನೆ ಗಮನಿಸಿದ ಕುಟುಂಬದವರು ಹಿರೇಕೆರೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಅವರಿಗೆ ವೈದ್ಯರು ತುರ್ತು ಚಿಕಿತ್ಸೆ ನೀಡಿದ್ದು ನಂತರದಲ್ಲಿ ರೇಣುಕಮ್ಮ ಆರೋಗ್ಯ ಸುಧಾರಿಸುತ್ತಿದೆ ಎಂದು ಹೇಳಲಾಗಿದೆ.
ಪೌರಕಾರ್ಮಿಕರು ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ: ಜಿಲ್ಲಾಧಿಕಾರಿ
ಹಾಸನ: ಪೌರಕಾರ್ಮಿಕರು ತಮ್ಮ ಆರೋಗ್ಯದ ಕಡೆ ನಿಗಾವಹಿಸುವುದರ ಜೊತೆಗೆ ಮತ್ತು ತಮ್ಮ ಮಕ್ಕಳ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡುವಂತೆ ಎಂದು ಜಿಲ್ಲಾಧಿಕಾರಿ ಕೆ. ಎಸ್. ಲತಾಕುಮಾರಿ ಅವರು ತಿಳಿಸಿದ್ದಾರೆ.
ಪೌರಕಾರ್ಮಿಕರ ದಿನಾಚರಣೆ ಅಂಗವಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ. ಆರ್ ಅಂಬೇಡ್ಕರ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ನಮ್ಮ ನಗರದ ಸ್ವಚ್ಛ-ಸುಂದರ, ಆರೋಗ್ಯಕರವಾಗಿರಲು ಮೂಲ ಕಾರಣಕರ್ತರು ಪೌರಕಾರ್ಮಿಕರ, ಅವರ ಸುಭದ್ರತೆಗೆ ನಾವೆಲ್ಲರೂ ಕೈ ಜೋಡಿಸೋಣ ಎಂದು ತಿಳಿಸಿದರು.
ಪೌರಕಾರ್ಮಿಕರು ತಮ್ಮ ದಿನವನ್ನು ನಗರ ಸ್ವಚ್ಛಗೊಳಿಸುವ ಮೂಲಕ ಪ್ರಾರಂಭಿಸುತ್ತಾರೆ, ಸಮಾಜ ಮತ್ತು ನಗರದ ಉತ್ತಮ ಆರೋಗ್ಯವನ್ನು ಕಾಪಾಡುವಲ್ಲಿ ಅವರ ಬದ್ಧತೆಯನ್ನು ಮೆಚ್ಚಲೇಬೇಕು ಎಂದು ಹೇಳಿದರು.
ಪೌರ ಕಾರ್ಮಿಕರ ಸೇವೆಯನ್ನು ಸ್ಮರಿಸುತ್ತಾ ಅವರ ನಿಸ್ವಾರ್ಥ ಸೇವೆಗೆ ಅಭಿನಂದನೆ ಹೇಳುತ್ತಾ ಅವರ ಅಮೂಲ್ಯವಾದ ಸೇವೆಯನ್ನು ನೆನಪು ಮಾಡಿಕೊಳ್ಳೋಣ ಎಂದ ಅವರು ಸ್ವಚ್ಛತಕಾರರಾಗಿ ಹೆಚ್ಚಾಗಿ ಮಹಿಳೆಯರು ಕೆಲಸ ಮಾಡುತ್ತಿದ್ದಾರೆ. ಪೌರಕಾರ್ಮಿಕರ ಆರ್ಥಿಕ, ಸಾಮಾಜಿಕ ಸಬಲತೆಗೆ ಹೆಚ್ಚಿನ ಒತ್ತು ನೀಡಬೇಕಾಗಿದೆ ಈ ನಿಟ್ಟಿನಲ್ಲಿ ಸರ್ಕಾರ ಈಗಾಗಲೇ ವಿವಿಧ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದೆ, ಅದರ ಉಪಯೋಗವನ್ನು ಪೌರಕಾರ್ಮಿಕರು ಪಡೆದುಕೊಳ್ಳುವಂತೆ ತಿಳಿಸಿದರು.
ಮಹಾನಗರ ಪಾಲಿಕೆಯ ಆಯುಕ್ತ ಆರ್. ಕೃಷ್ಣಮೂರ್ತಿ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ರುದ್ರಮುನಿ ಹಾಗೂ ಮತ್ತಿತರರು ಹಾಜರಿದ್ದರು.
ಅಕ್ಟೋಬರ್ 23 ರಂದು ಪಶ್ಚಿಮ ಪದವೀಧರ ಕ್ಷೇತ್ರ ಚುನಾವಣೆ
ಧಾರವಾಡ: ಚುನಾವಣಾ ಆಯೋಗವು ಪಶ್ಚಿಮ ಪದವೀಧರರ ಕ್ಷೇತ್ರದ ಚುನಾವಣೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ಸೆಪ್ಟೆಂಬರ್ 22 ರಿಂದ ಚುನಾವಣೆ ನೀತಿ ಸಂಹಿತೆ ಜಾರಿಯಾಗಿದ್ದು, ಧಾರವಾಡ, ಗದಗ, ಹಾವೇರಿ ಮತ್ತು ಉತ್ತರ ಕನ್ನಡ ಜಿಲ್ಲೆ ವ್ಯಾಪ್ತಿಯಲ್ಲಿ ನೀತಿ ಸಂಹಿತೆ ಜಾರಿಯಲ್ಲಿದೆ.
ಚುನಾವಣಾಧಿಕಾರಿಗಳು ಸೆಪ್ಟೆಂಬರ್ 29 ರಂದು ಅಧಿಸೂಚನೆ ಪ್ರಕಟಿಸುವರು. ನಾಮಪತ್ರ ಸಲ್ಲಿಕೆಗೆ ಅಕ್ಟೋಬರ್ 6 ಕೊನೆಯ ದಿನವಾಗಿರುತ್ತದೆ. ಅಕ್ಟೋಬರ್ 7 ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ಹಿಂಪಡೆಯಲು ಅಕ್ಟೋಬರ್ 9 ಕೊನೆ ದಿನ. ಅಕ್ಟೋಬರ್ 23 ರಂದು ಬೆಳಿಗ್ಗೆ 8 ರಿಂದ ಮಧ್ಯಾಹ್ನ 4 ಗಂಟೆವರೆಗೆ ಮತದಾನ ನಡೆಯಲಿದ್ದು, ಅಕ್ಟೋಬರ್ 27ರಂದು ಮತ ಎಣಿಕೆ ನಡೆಯುತ್ತದೆ ಹಾಗೂ ಅಕ್ಟೋಬರ್ 31 ರಂದು ಚುನಾವಣೆ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಚುನಾವಣಾಧಿಕಾರಿ ಆಗಿರುವ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತ ಕೆ.ಎಂ.ಜಾನಕಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

