ಬೆಂಗಳೂರು: ಕರ್ನಾಟಕ ಸರ್ಕಾರವು ಬುಧವಾರ (ಆಗಸ್ಟ್ 12) ಮೂವರು ಹಿರಿಯ ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಹಾಗೂ ಹೆಚ್ಚುವರಿ ಹೊಣೆಗಾರಿಕೆ ನೀಡಿ ಅಧಿಕೃತ ಆದೇಶ ಹೊರಡಿಸಿದೆ. ಪ್ರಮುಖವಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA), ಕರ್ನಾಟಕ ಲೋಕಸೇವಾ ಆಯೋಗ (KPSC) ಹಾಗೂ ಪಂಚಾಯತ್ ರಾಜ್ ಇಲಾಖೆಗಳಲ್ಲಿ ಆಡಳಿತಾತ್ಮಕ ಪುನರ್ರಚನೆ ಮಾಡಲಾಗಿದೆ.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (DPAR) ಹೊರಡಿಸಿರುವ ಈ ಆದೇಶವು ಕೆಪಿಎಸ್ಸಿ ಪರೀಕ್ಷೆಗಳ ನಿರೀಕ್ಷೆಯಲ್ಲಿದ್ದ ಲಕ್ಷಾಂತರ ಉದ್ಯೋಗ ಆಕಾಂಕ್ಷಿಗಳಲ್ಲಿ ಹೊಸ ಭರವಸೆ ಮೂಡಿಸಿದೆ.
IAS ಅಧಿಕಾರಿಗಳ ವರ್ಗಾವಣೆ ಪಟ್ಟಿ
ಎಚ್. ಪ್ರಸನ್ನ : ಪ್ರಸ್ತುತ ಕರ್ನಾಟಕ ಪರೀಕ್ಷಾ ಪ್ರಾಧಿಕಾರದ (KEA) ಕಾರ್ಯನಿರ್ವಾಹಕ ನಿರ್ದೇಶಕರಾಗಿರುವ ಎಚ್. ಪ್ರಸನ್ನ ಅವರಿಗೆ ತಕ್ಷಣದಿಂದ ಜಾರಿಗೆ ಬರುವಂತೆ ಕರ್ನಾಟಕ ಲೋಕಸೇವಾ ಆಯೋಗದ (KPSC) ಪರೀಕ್ಷಾ ನಿಯಂತ್ರಕರ ಹುದ್ದೆಯ ಹೆಚ್ಚುವರಿ ಪ್ರಭಾರ ನೀಡಲಾಗಿದೆ.
ಲವಿಶ್ ಓರ್ಡಿಯಾ ;ಯಾದಗಿರಿ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ (CEO) ಲವಿಶ್ ಓರ್ಡಿಯಾ ಅವರನ್ನು ಕೆಪಿಎಸ್ಸಿಯ ಜಂಟಿ ಪರೀಕ್ಷಾ ನಿಯಂತ್ರಕರಾಗಿ ವರ್ಗಾಯಿಸಲಾಗಿದೆ.
ಡಾ. ಅರುಂಧತಿ ಚಂದ್ರಶೇಖರ್ : ಪಂಚಾಯತ್ ರಾಜ್ ಆಯುಕ್ತರಾಗಿರುವ ಡಾ. ಅರುಂಧತಿ ಚಂದ್ರಶೇಖರ್ ಅವರಿಗೆ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ (RDPR) ಇಲಾಖೆಯ ಇ-ಆಡಳಿತ ನಿರ್ದೇಶಕರ ಹುದ್ದೆಯ ಹೆಚ್ಚುವರಿ ಹೊಣೆಯನ್ನು ವಹಿಸಲಾಗಿದೆ
ಇತ್ತೀಚಿನ ದಿನಗಳಲ್ಲಿ ಕೆಪಿಎಸ್ಸಿ ನಡೆಸುತ್ತಿದ್ದ ವಿವಿಧ ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಪ್ರಮುಖವಾಗಿ ಅಧ್ಯಕ್ಷರ ಸಂಬಂಧಿಕರಿಗೆ ಹುದ್ದೆ ನೀಡಲಾದ ಪ್ರಕರಣದ ಉನ್ನತ ಮಟ್ಟದ ತನಿಖೆ ಮುಂದುವರಿದಿದೆ. ಇದರಿಂದಾಗಿ ಕೆಪಿಎಸ್ಸಿ ಪರೀಕ್ಷಾ ವ್ಯವಸ್ಥೆಯ ಮೇಲಿನ ನಂಬಿಕೆ ಕ್ಷೀಣಿಸಿತ್ತು.ಆದರೆ, ಕೆಇಎಯಲ್ಲಿ ಕಟ್ಟುನಿಟ್ಟಿನ ಕ್ರಮಗಳ ಮೂಲಕ ಪಾರದರ್ಶಕ ಪರೀಕ್ಷಾ ಪದ್ಧತಿ ತಂದು ಯಶಸ್ವಿಯಾಗಿದ್ದ ಎಚ್. ಪ್ರಸನ್ನ ಅವರಿಗೆ ಕೆಪಿಎಸ್ಸಿ ಪರೀಕ್ಷಾ ನಿಯಂತ್ರಣದ ಜವಾಬ್ದಾರಿ ನೀಡಿರುವುದು ಉದ್ಯೋಗ ಆಕಾಂಕ್ಷಿಗಳಿಗೆ ಸಮಾಧಾನ ತಂದಿದ್ದು, ಮುಂಬರುವ ಪರೀಕ್ಷೆಗಳು ನ್ಯಾಯಸಮ್ಮತವಾಗಿ ನಡೆಯಲಿವೆ ಎಂಬ ಆಶಯ ವ್ಯಕ್ತವಾಗಿದೆ.

