ಹಾಸನ: ಹಾಸನದ ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಶುಭನ್ವಿತಾ ನಡುವಿನ ಸಂಘರ್ಷ ಕೊನೆಗೊಂಡಿದೆ. ಇಬ್ಬರು ಅಧಿಕಾರಿಗಳು ಭಿನ್ನಾಭಿಪ್ರಾಯ, ವಿವಾದಗಳನ್ನು ಮರೆತು ಒಗ್ಗಟ್ಟಾಗಿ ಬಂದು ಹಾಸನಾಂಬೆ ದೇವಿ ದರ್ಶನ ಪಡೆದಿದ್ದಾರೆ.
ಇಂದು ಹಾಸನಾಂಬೆ ದೇವಾಲಯಕ್ಕೆ ಡಿಸಿ ಲತಾಕುಮಾರಿ ಹಾಗೂ ಎಸ್ ಪಿ ಶುಭನ್ವಿತಾ ಒಟ್ಟಿಗೆ ಆಗಮಿಸಿದ್ದು, ಇಬ್ಬರೂ ಅಧಿಕಾರಿಗಳು ಹಾಸನಾಂಬೆ ದೇವಿ ದರ್ಶನ ಪಡೆದು, ಪೂಜೆ ಸಲ್ಲಿಸಿದರು.
ಈ ವೇಳೆ ಇಬ್ಬರೂ ಪರಸ್ಪರ ಕುಶಲೋಪರಿ ವಿಚಾರಿಸುವ ಮೂಲಕ ಸೌಹಾರ್ದದ ಸಂದೇಶ ಸಾರಿದರು. ಹಾಸನಾಂಬೆ ದರ್ಶನೋತ್ಸವದ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಎಸ್ಪಿ ಶುಭನ್ವಿತಾ ಒಟ್ಟಿಗೆ ಪೂಜೆ ಸಲ್ಲಿಸಿದರು. ಈ ವೇಳೆ ಡಿಸಿ, ಎಸ್ಪಿಗೆ ಹಾಸನಾಂಬೆ ದರ್ಶನೋತ್ಸವದ ವ್ಯವಸ್ಥೆಗಳು ಹಾಗೂ ಉತ್ಸವದ ಕುರಿತು ಮಾಹಿತಿ ಹಂಚಿಕೊಂಡರು. ಮಂಗಳಾರತಿ ತಟ್ಟೆಗೆ ಕಾಣಿಕೆ ಸಲ್ಲಿಸಲು ಜಿಲ್ಲಾಧಿಕಾರಿಗೆ ಎಸ್ಪಿ ಹಣ ನೀಡಿದ ಪ್ರಸಂಗವೂ ಗಮನ ಸೆಳೆಯಿತು.
ದೇವಾಲಯದ ಬಳಿ ಜಿಲ್ಲಾಧಿಕಾರಿ ಲತಾಕುಮಾರಿ ಹಾಗೂ ಎಸ್ಪಿ ಶುಭನ್ವಿತಾ ಪರಸ್ಪರ ಹಸ್ತಲಾಘವ ಮಾಡಿ ಕುಶಲೋಪರಿ ವಿಚಾರಿಸಿದರು. ಬಳಿಕ ಆತ್ಮೀಯವಾಗಿ ಆಲಿಂಗಿಸಿಕೊಳ್ಳುವ ಮೂಲಕ ಇಬ್ಬರೂ ಅಧಿಕಾರಿಗಳು ಒಟ್ಟಾಗಿರುವ ಸಂದೇಶ ನೀಡಿದರು. ಇತ್ತೀಚೆ ನಡೆದ ವಿವಾದದ ಬಳಿಕ ಇಂದು ಇಬ್ಬರು ಅಧಿಕಾರಿಗಳು ಒಟ್ಟಾಗಿ ದೇವಸ್ಥಾನಕ್ಕೆ ಭೇಟಿ ನೀಡುವ ಮೂಲಕ ಗಮನ ಸೆಳೆದರು.
ಗಣಪತಿ ವಿಸರ್ಜನೆ ವಿಚಾರವಾಗಿ ಎಸ್ಪಿ ಶುಭನ್ವಿತಾ ಅವರಿಗೆ ಜಿಲ್ಲಾಧಿಕಾರಿ ಲತಾಕುಮಾರಿ ನೋಟಿಸ್ ನೀಡಿದ್ದರು. ಈ ಘಟನೆ ಬಳಿಕ ಜಿಲ್ಲಾಧಿಕಾರಿ ವಿರುದ್ಧ ಜೆಡಿಎಸ್ ಪ್ರತಿಭಟನೆ ನಡೆಸಿತ್ತು. ಇಬ್ಬರು ಅಧಿಕಾರಿಗಳ ನಡುವಿನ ಭಿನ್ನಾಭಿಪ್ರಾಯದ ವಿಚಾರ ವಿವಾದದ ಸ್ವರೂಪ ಪಡೆದುಕೊಂಡಿತ್ತು. ವಿವಾದ ತೀವ್ರಗೊಂಡ ಹಿನ್ನೆಲೆಯಲ್ಲಿ ಸಚಿವ ಕೆ.ಎಂ. ಶಿವಲಿಂಗೇಗೌಡ ಅವರ ಸಮ್ಮುಖದಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿ (ಸಿಎಸ್) ಇಬ್ಬರು ಅಧಿಕಾರಿಗಳ ಸಭೆ ನಡೆಸಿದ್ದರು. ಅಧಿಕಾರಿಗಳ ನಡುವೆ ಸಮನ್ವಯ ಇರಬೇಕು ಎಂಬ ಸಂದೇಶವನ್ನು ನೀಡಿದ್ದ ಸಿಎಸ್, ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದ್ದರು. ಈ ಬೆಳವಣಿಗೆ ಬೆನ್ನಲ್ಲೇ ಇಂದು ಇಬ್ಬರು ಅಧಿಕಾರಿಗಳು ಹಾಸನಾಂಬೆ ದೇವಸ್ಥಾನಕ್ಕೆ ಒಟ್ಟಾಗಿ ಬಂದು ಪೂಜೆ ಸಲ್ಲಿಸಿದ್ದಾರೆ.
ಸ್ಟಿಂಗ್ ಆಪರೇಷನ್ ಪ್ರಕರಣ: ಪ್ರಮುಖ ಆರೋಪಿಯ ಬಂಧನಕ್ಕೆ ಎರಡು ದಿನಗಳ ಡೆಡ್ ಲೈನ್ ನೀಡಿದ ಕೇಂದ್ರ ಸಚಿವ ಕುಮಾರಸ್ವಾಮಿ
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿರುವ ಸ್ಟಿಂಗ್ ಆಪರೇಷನ್ ವಿವಾದ ದಿನದಿಂದ ದಿನಕ್ಕೆ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿದೆ. ಪ್ರಕರಣದ ಪ್ರಮುಖ ಆರೋಪಿಯ ಬಂಧನಕ್ಕೆ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಪೊಲೀಸರಿಗೆ ಡೆಡ್ ಲೈನ್ ನೀಡಿದ್ದಾರೆ.
ಎರಡು ದಿನಗಳಲ್ಲಿ ಆರೋಪಿಯನ್ನು ಬಂಧಿಸಬೇಕು ಎಂದು ಗಡುವು ನೀಡಿದ್ದಾರೆ. ಇಲ್ಲವಾದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಶನಿವಾರ ಜೆಡಿಎಸ್ ಶಾಸಕರು ಮತ್ತು ಮುಖಂಡರ ಸಭೆ ಕರೆದಿರುವ ಕುಮಾರಸ್ವಾಮಿ, ಹೋರಾಟದ ರೂಪುರೇಷೆ ಸಿದ್ಧಪಡಿಸಲು ಮುಂದಾಗಿದ್ದಾರೆ.
ಸ್ಟಿಂಗ್ ಆಪರೇಷನ್ ಪ್ರಕರಣದ ತನಿಖೆಗೆ ಆಗ್ರಹಿಸಿ ಅಕ್ಟೋಬರ್ 15ರಂದು ಹೆಚ್.ಡಿ. ಕುಮಾರಸ್ವಾಮಿ ಬೆಂಗಳೂರಿನ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿ ಧರಣಿ ನಡೆಸಿದ್ದರು. ಪ್ರಕರಣದ ಪ್ರಮುಖ ವ್ಯಕ್ತಿ ರಾಕೇಶ್ ಶೆಟ್ಟಿ ಎಂಬವರ ವಿರುದ್ಧ ಆರೋಪ ಮಾಡಿದ್ದರಲ್ಲದೇ, ಆತನನ್ನು ಬಂಧಿಸಬೇಕು ಎಂಬುದು ಆಗ್ರಹಿಸಿದ್ದರು. ತಮ್ಮನ್ನು ಮತ್ತು ಜೆಡಿಎಸ್ ಕಾರ್ಯಕರ್ತರನ್ನು ವಿಚಾರಣೆಗೆ ಒಳಪಡಿಸುವುದಕ್ಕೆ ಆಕ್ಷೇಪವಿಲ್ಲ, ಆದರೆ ಪ್ರಕರಣದ ಮೂಲ ವ್ಯಕ್ತಿಯ ವಿರುದ್ಧವೂ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದರು.
ಪೊಲೀಸ್ ಆಯುಕ್ತರು ಪ್ರಕರಣದಲ್ಲಿ ಶಾಮೀಲಾಗಿರುವ ಎಲ್ಲರನ್ನೂ ತನಿಖೆಗೆ ಒಳಪಡಿಸುವ ಭರವಸೆ ನೀಡಿದ ಹಿನ್ನೆಲೆಯಲ್ಲಿ ಕುಮಾರಸ್ವಾಮಿ ಧರಣಿ ಹಿಂಪಡೆದಿದ್ದರು. ಆದರೆ, ಪ್ರಮುಖ ಆರೋಪಿಯ ಬಂಧನವಾಗದಿದ್ದರೆ ಹೋರಾಟ ಮುಂದುವರಿಸುವುದಾಗಿ ಎಚ್ಚರಿಕೆ ನೀಡಿದ್ದರು.
ಸ್ಟಿಂಗ್ ಆಪರೇಷನ್ ಹಿಂದೆ ರಾಜಕೀಯ ಷಡ್ಯಂತ್ರವಿದೆ ಎಂದು ಕುಮಾರಸ್ವಾಮಿ ಆರೋಪಿಸಿದ್ದಾರೆ. ಸ್ಟಿಂಗ್ ನಡೆಸಿದ ವ್ಯಕ್ತಿಗಳಿಗೆ ಕಾಂಗ್ರೆಸ್ ಹೈಕಮಾಂಡ್ ಜೊತೆ ಸಂಪರ್ಕವಿದೆ ಮತ್ತು ಅವರಿಗೆ ರಕ್ಷಣೆ ನೀಡಲಾಗುತ್ತಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದ್ದಾರೆ. ಈ ಸಂಬಂಧ ಬಾಗೇಪಲ್ಲಿ ಮೂಲದ ಪ್ರಶಾಂತ್ ಎಂಬ ವ್ಯಕ್ತಿಯ ಫೋಟೋವನ್ನು ಬಿಡುಗಡೆ ಮಾಡಿ, ಕಾಂಗ್ರೆಸ್ ನಾಯಕ ರಣದೀಪ್ ಸಿಂಗ್ ಸುರ್ಜೇವಾಲಾ ಅವರೊಂದಿಗಿನ ಫೋಟೋವನ್ನು ಉಲ್ಲೇಖಿಸಿದ್ದಾರೆ. ಸ್ಟಿಂಗ್ ಆಪರೇಷನ್ ಮೂಲಕ ತಮ್ಮನ್ನು ಸಿಲುಕಿಸಲು ಪ್ರಯತ್ನಿಸಲಾಗುತ್ತಿದೆ ಎಂಬುದು ಕುಮಾರಸ್ವಾಮಿ ಅವರ ಆರೋಪವಾಗಿದೆ.
ಸ್ಟಿಂಗ್ ಆಪರೇಷನ್ ಪ್ರಕರಣದ ಪ್ರಮುಖ ಆರೋಪಿಯ ಬಂಧನಕ್ಕೆ ಕುಮಾರಸ್ವಾಮಿ ನೀಡಿರುವ ಗಡುವು ಮುಗಿಯುವ ಮುನ್ನವೇ ಜೆಡಿಎಸ್ನಲ್ಲಿ ಹೋರಾಟದ ಸಿದ್ಧತೆ ಆರಂಭವಾಗಿದೆ. ನಾಳೆ ನಡೆಯಲಿರುವ ಜೆಡಿಎಸ್ ಶಾಸಕರು ಮತ್ತು ಮುಖಂಡರ ಸಭೆಯಲ್ಲಿ ಮುಂದಿನ ಕಾರ್ಯತಂತ್ರದ ಬಗ್ಗೆ ಚರ್ಚೆ ನಡೆಯಲಿದೆ.
ಬಂಧನವಾಗದಿದ್ದರೆ ಯಾವ ರೀತಿಯಲ್ಲಿ ಹೋರಾಟ ನಡೆಸಬೇಕು, ರಾಜ್ಯಾದ್ಯಂತ ಪ್ರತಿಭಟನೆಗಳನ್ನು ಹೇಗೆ ಸಂಘಟಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ.
ಸ್ಟಿಂಗ್ ಆಪರೇಷನ್ ಪ್ರಕರಣದ ಕುರಿತು ಅಕ್ಟೋಬರ್ 15ರಂದು ನಡೆದ ಸಚಿವ ಸಂಪುಟ ಸಭೆಯಲ್ಲೂ ಚರ್ಚೆ ನಡೆದಿದೆ. ಪ್ರತ್ಯೇಕ ಉನ್ನತ ಮಟ್ಟದ ತನಿಖೆ ನಡೆಸುವ ಬದಲು, ಈಗಾಗಲೇ ನಡೆಯುತ್ತಿರುವ ತನಿಖೆಯನ್ನೇ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ. ಅಗತ್ಯ ದಾಖಲೆಗಳನ್ನು ಸಂಗ್ರಹಿಸಿ, ಅವುಗಳ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ನಿಲುವನ್ನು ಸರ್ಕಾರ ಹೊಂದಿದೆ ಎನ್ನಲಾಗಿದೆ.

