ಹಾಸನ : ಭಕ್ತಾಧಿಗಳಿಗೆ ತಾಯಿ ಹಾಸನಾಂಬ ದೇವಿಯ ಸುಗಮ ದರ್ಶನಕ್ಕೆ ಅವಕಾಶ ಕಲ್ಪಿಸಲು ಅಗತ್ಯ ಸಿದ್ಧತೆಗೆ ಕ್ರಮಕೈಗೊಳ್ಳುವಂತೆ ಜಿಲ್ಲಾಧಿಕಾರಿ ಲತಾಕುಮಾರಿ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶ್ರೀ ಹಾಸನಾಂಬ ದೇವಿ ಹಾಗೂ ಶ್ರೀ ಸಿದ್ದೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಕುರಿತು ಸಿದ್ದತೆ ಹಾಗೂ ಪೂರ್ವಭಾವಿ ಸಭೆ ನಡೆಸಿ ಮಾತನಾಡಿದ ಅವರು ಹಾಸನಾಂಬ ಜಾತ್ರಾ ಮಹೋತ್ಸವದ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ತಿಳಿಸಿದರು.
ಬ್ಯಾರಿಕೇಡ್ ಹಾಕುವಾಗ ಭಕ್ತಾದಿಗಳ ಸುರಕ್ಷತೆ ಬಗ್ಗೆ ಹೆಚ್ಚಿನ ಗಮನಹರಿಸಿ, ಕಳೆದ ಬಾರಿ ಭಕ್ತಾದಿಗಳು ಸರತಿ ಸಾಲಿನಲ್ಲಿ ಸಾಗುವ ಸಂದರ್ಭದಲ್ಲಿ ಕಾಲಿಗೆ ಕಬ್ಬಿಣದ ರಾಡ್ ತಗುಲಿ ಪೆಟ್ಟು ಆಗುತ್ತಿತ್ತು. ಈ ಬಾರಿ ಮರುಕಳಿಸದಂತೆ ಎಚ್ಚರಿಕೆವಹಿಸಿ ಬ್ಯಾರಿಕೇಡ್ ಅಳವಡಿಕೆ ಕಾರ್ಯವನ್ನು ವ್ಯವಸ್ಥಿತವಾಗಿ ಮಾಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜನದಟ್ಟಣೆ ನಿರ್ವಹಣೆಗೆ ಹಾಗೂ ಸಂದರ್ಭಕ್ಕೆ ತಕ್ಕಂತೆ ತಕ್ಷಣ ನಿರ್ಧಾರ ತೆಗೆದುಕೊಳ್ಳಲು ಅಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು.ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಅತ್ಯಂತ ಜಾಗರೂಕತೆಯಿಂದ ನಿರ್ವಹಿಸುವ ಮೂಲಕ ಸುಸೂತ್ರವಾಗಿ ಜಾತ್ರಾ ಮಹೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ತಿಳಿಸಿದರು.
ಹಾಸನಾಂಬ ಜಾತ್ರಾ ಮಹೋತ್ಸವ ಕರ್ತವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುವ ನಿಟ್ಟಿನಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ರಜೆ ತೆಗೆದುಕೊಳ್ಳಬಾರದು ಎಂದು ತಿಳಿಸಿದರು.ಜಂಟಿ ಕೃಷಿ ನಿರ್ದೇಶಕರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕಳೆದ ಬಾರಿ ಬಹಳ ಚೆನ್ನಾಗಿ ಕೆಲಸ ನಿರ್ವಹಿಸಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿದರು.
ಸಾಂಸ್ಕೃತಿಕ ಕಾರ್ಯಕ್ರಮ, ಸಿರಿಧಾನ್ಯ ಮತ್ತು ಸಾವಯವ ಮೇಳ, ಶ್ವಾನ ಪ್ರದರ್ಶನ, ಹಾಸನಾಂಬ ಹಾಸ್ಯ ಹೊನಲು, ಕ್ರೀಡಾಕೂಟ, ಆಹಾರ ಮೇಳ, ಮರಳು ಕಲಾಕೃತಿ, ಹಾಸನ ಚಿತ್ರಸಂತೆ, ಟೂರ್ ಪ್ಯಾಕೇಜ್ ಮತ್ತಿತರ ಕಾರ್ಯಕ್ರಮಗಳನ್ನು ಆಯೋಜಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ದೇವಾಲಯದ ಆವರಣ ಹಾಗೂ ಭಕ್ತಾದಿಗಳು ಸರತಿ ಸಾಲಿನಲ್ಲಿ ಸಾಗುವ ಸ್ಥಳಗಳ ಹಾಗೂ ಶೌಚಾಲಯಗಳನ್ನು ಅತ್ಯಂತ ಸ್ವಚ್ಛವಾಗಿಡಬೇಕು ಈ ನಿಟ್ಟಿನಲ್ಲಿ ಮೂರು ತಂಡಗಳನ್ನು ರಚಿಸಿ ಪಾಳಿಯಲ್ಲಿ ಕೆಲಸ ಮಾಡಬೇಕು ಎಂದು ತಿಳಿಸಿದರು.
ದೇವಾಲಯದ ಸುತ್ತ ಮುತ್ತ ನಾಯಿಗಳಿರದಂತೆ ನೋಡಿಕೊಳ್ಳಬೇಕು ಕಳೆದ ಬಾರಿ ಒಬ್ಬ ಭಕ್ತರಿಗೆ ನಾಯಿ ಕಡಿದಿರುವುದನ್ನು ಉದಾಹರಣೆ ನೀಡಿದ ಅವರು ನಾಯಿಗಳನ್ನು ಹಿಡಿದು ಒಂದು ಶೆಲ್ಟರ್ ಗೆ ಸ್ಥಳಾಂತರ ಮಾಡಲು ಕ್ರಮವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ದೇವಿ ದರ್ಶನಕ್ಕೆ ಆಗಮಿಸುವ ಭಕ್ತರಿಗೆ ಯಾವುದೇ ಆರೋಗ್ಯ ಸಮಸ್ಯೆಗಳು ಕಂಡು ಬಂದಲ್ಲಿ ತಕ್ಷಣ ತಪಾಸಣೆ ಮಾಡಿ ಅವರಿಗೆ ಪ್ರಾಥಮಿಕ ಚಿಕಿತ್ಸೆ ನೀಡಿ ಉಪಚಾರ ಮಾಡಲು ಕ್ರಮ ಕೈಗೊಳ್ಳುವಂತೆ ಹಾಗೂ 24 ಗಂಟೆ ಕರ್ತವ್ಯ ನಿರ್ವಹಿಸಲು ಸಿದ್ದತೆ ಮಾಡಿಕೊಳ್ಳಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಅವರಿಗೆ ಸೂಚನೆ ನೀಡಿದರು.
ವಿಕಲಚೇತನರು ಹಾಗೂ 80 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ವೀಲ್ ಚೇರ್ ನಲ್ಲಿ ಪ್ರತ್ಯೇಕ ಸರದಿಯಲ್ಲಿ ಸಾಗಿ ದೇವಿ ದರ್ಶನ ಪಡೆದುಕೊಂಡು ಬಂದು ಅವರ ಕಡೆಯವರು ದೇವಿ ದರ್ಶನ ಮುಗಿಸಿಕೊಂಡು ಬರುವವರೆಗೆ ಇವರು ಕುಳಿತುಕೊಳ್ಳಲು ಒಂದು ಪ್ರತ್ಯೇಕ ವೈಟಿಂಗ್ ಹಾಲ್ ವ್ಯವಸ್ಥೆ ಮಾಡಬೇಕು ಎಂದು ತಿಳಿಸಿದರು.
ಜಾತ್ರಾ ಮಹೋತ್ಸವಕ್ಕೆ ಸಂಬಂಧಿಸಿದಂತೆ ರಚಿಸಿರುವ ಎಲ್ಲಾ ತಂಡಗಳು ತಮ್ಮ ತಮ್ಮ ಕರ್ತವ್ಯಗಳನ್ನು ಎಚ್ಚರಿಕೆಯಿಂದ ನಿರ್ವಹಿಸುವಂತೆ ನಿರ್ದೇಶನ ನೀಡಿದರಲ್ಲದೆ, ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದ ಅವರು ಎಲ್ಲಾ ತಂಡಗಳು ಯಾವುದೇ ಗೊಂದಲಕ್ಕೆ ಆಸ್ಪದ ನೀಡದೆ ಸರಿಯಾದ ರೀತಿಯಲ್ಲಿ ನಿರ್ವಹಣೆ ಮಾಡಬೇಕು ಎಂದು ನಿರ್ದೇಶನ ನೀಡಿದರು.
ದಾನಿಗಳು ನೀಡುವ ಅಕ್ಕಿ, ಬೆಳೆ, ಬೆಲ್ಲ ಸಂಗ್ರಹಿಸಲು ಟಿಕೇಟ್ ಕೌಂಟರ್ ಬಳಿ ಒಂದು ಪ್ರತ್ಯೇಕ ಕೌಂಟರ್ ಮಾಡುವಂತೆ ತಿಳಿಸಿದರಲ್ಲದೆ, ಹೊರ ಕಾಣಿಕೆ (ಮಡ್ಲಕ್ಕಿ) ಸಲ್ಲಿಸುವ ಭಕ್ತಾದಿಗಳು ನೀಡುವ ಪದಾರ್ಥಗಳನ್ನು ಸ್ವೀಕರಿಸಲು ದೇವಾಲಯದ ಆವರಣದಲ್ಲಿ ಒಂದು ಪ್ರತ್ಯೇಕ ಕೌಂಟರ್ ಮಾಡುವಂತೆ ಹೇಳಿದರು.
ದೇವಿ ದರ್ಶನಕ್ಕೆ ಆಗಮಿಸುವ ಭಕ್ತಾದಿಗಳು ಬಸ್ ನಿಲ್ದಾಣ, ರೈಲ್ವೆ ನಿಲ್ದಾಣದಲ್ಲಿ ಪಾದರಕ್ಷೆಗಳನ್ನು ಬಿಟ್ಟು ಬರಬೇಕು ಹಾಗೂ ಸ್ವಂತ ವಾಹನದಲ್ಲಿ ಆಗಮಿಸುವವರು ತಮ್ಮ ತಮ್ಮ ವಾಹನಗಳಲ್ಲಿಯೇ ಪಾದರಕ್ಷೆಗಳನ್ನು ಬಿಟ್ಟು ಬರಬೇಕು ಎಂದ ಅವರು ದೇವಸ್ಥಾನದ ಬಳಿ ಪಾದರಕ್ಷೆಗಳನ್ನು ಬಿಡಲು ಅವಕಾಶ ಇರುವುದಿಲ್ಲ ಎಂದು ತಿಳಿಸಿದರು.
ಲಕ್ಷಾಂತರ ಭಕ್ತಾದಿಗಳು ದೇವಿ ದರ್ಶನಕ್ಕೆ ಆಗಮಿಸುವುದರಿಂದ ದರ್ಶನಕ್ಕೆ ಕೆಲವೇ ಸೆಕೆಂಡುಗಳು ಭಕ್ತರಿಗೆ ಅವಕಾಶ ದೊರೆಯುತ್ತದೆ. ಭಕ್ತಾದಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡು ದೇವಿ ದರ್ಶನ ಪಡೆಯಬೇಕಾಗುತ್ತದೆ ಎಂದು ತಿಳಿಸಿದರು. ಅಪರ ಜಿಲ್ಲಾಧಿಕಾರಿ ಕೃಷ್ಣಮೂರ್ತಿ, ಉಪವಿಭಾಗಾಧಿಕಾರಿ ಹಾಗೂ ದೇವಾಲಯದ ಆಡಳಿತಾಧಿಕಾರಿ ಜಗದೀಶ್ ಗಂಗಣ್ಣನವರ್ ಹಾಗೂ ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.

