ಹಾಸನ: ಕೆಲ ದಿನಗಳ ಹಿಂದೆ ಬಾಲಕಿಯೊಬ್ಬಳು ಶಾಲೆಯಿಂದ ಮನೆಗೆ ಬರುತ್ತಿದ್ದ ವೇಳೆ ಅಪರಿಚಿತ ವ್ಯಕ್ತಿಯೊಬ್ಬ ಆಕೆಯನ್ನು ಹಿಂಬಾಲಿಸಿಕೊಂಡು ಬಂದಿದ್ದ. ಮನೆವರೆಗೂ ಬಂದು ಬೆದರಿಕೆ ಹಾಕಿದ್ದ. ಈ ಘಟನೆಗೆ ಸಂಬಂಧಿಸಿದಂತೆ ಆರೋಪಿಯನ್ನು ಹಾಸನ ಪೊಲೀಸರು ಬಂಧಿಸಿದ್ದಾರೆ.
ಹಾಸನದ 80 ಅಡಿ ರಸ್ತೆಯಲ್ಲಿ ಈ ಘಟನೆ ನಡೆದಿತ್ತು. ಶಾಲೆಯಿಂದ ಮನೆಗೆ ಬರುತ್ತಿದ್ದ ಬಾಲಕಿಯನ್ನು ರಸ್ತೆಯಲ್ಲಿ ಹಿಂಬಾಲಿಸಿಕೊಂಡು ವ್ಯಕ್ತಿ ಬಂದಿದ್ದ. ಆತಂಕಕ್ಕೊಳಗಾದ ಬಾಲಕಿ ಓಡಿ ಬಂದು ಮನೆಯ ಒಳಬಂದು ಬಾಗಿಲು ಹಾಕಿಕೊಂಡಿದ್ದಳು. ಮನೆಯೆ ಬಳಿ ಬಂದ ಅಪರಿಚಿತ ವ್ಯಕ್ತಿ ಮನೆಯ ಗೇಟ್ ಬಡಿದ್ದಾನೆ. ಬಾಗಿಲು ತೆರೆಯುವಂತೆ ಅವಾಜ್ ಹಾಕಿದ್ದ. ಬಾಲಕಿ ಬಾಗಿಲು ತೆಗೆಯದಿದ್ದಾಗ ಮನೆಯ ಹಿಂಬಾಗಿಲ ಬಳಿ ಹೋಗಿ ಅಲ್ಲಿಯೂ ಬಾಗಿಇಲು ಬಡಿದು ಹೆದರಿಸಿದ್ದ. ಈ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿತ್ತು.
ಅಲ್ಲದೇ ಬಾಲಕಿ ಹಾಗೂ ಆಕೆಯ ಪೋಷಕರು ಪೆನ್ ಶೆನ್ ಮೊಹಲ್ಲಾ ಠಾಣೆಯಲ್ಲಿ ದೂರು ದಾಖಲಿಸಿದ್ದರು. ತನಿಖೆ ನಡೆಸಿದ ಪೊಲೀಸರು ಅಪರಿಚಿತನನ್ನು ಬಂಧಿಸಿದ್ದಾರೆ. ಬಂಧಿತನನ್ನು ಕೋಲಾರ ಜಿಲ್ಲೆಯ ದಂಡಿಹಳ್ಳಿ ಹೋಬಳಿಯ ಪ್ರಸನ್ನ (38) ಎಂದು ಗುರುತಿಸಲಾಗಿದೆ. ಘಟನೆ ನಡೆದು ಮೂರು ದಿನಗಳ ಬಳಿಕ ಆಗಂತುಕನನ್ನು ಪೊಲೀಸರು ಬಂಧಿಸಿ ತನಿಖೆ ನಡೆಸಿದ್ದಾರೆ.

