ಬಾಲಿವುಡ್ ನಟಿ ಅಮೀಷಾ ಪಟೇಲ್ ಹಾಗೂ ಭಾರತೀಯ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಅವರ ಇತ್ತೀಚಿನ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು. ಮುಂಬೈನ ತಾಜ್ ಮಹಲ್ ಪ್ಯಾಲೇಸ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಅಮೀಷಾ, ಹಾರ್ದಿಕ್ ಪಾಂಡ್ಯ ಅವರ ಹೆಗಲ ಮೇಲೆ ಕೈಯಿಟ್ಟು ತಮ್ಮ ಸ್ನೇಹಿತರಿಗೆ ಪರಿಚಯಿಸುತ್ತಿರುವ ದೃಶ್ಯ ಕಂಡುಬಂದಿತ್ತು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅವರಿಬ್ಬರ ನಡುವೆ ಪ್ರೇಮಾಂಕುರವಾಗಿದೆ ಎಂದು ನೆಟ್ಟಿಗರು ವದಂತಿಗಳನ್ನು ಹಬ್ಬಿಸಲು ಪ್ರಾರಂಭಿಸಿದ್ದರು.
ಈ ಡೇಟಿಂಗ್ ವದಂತಿಗಳಿಗೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಪ್ರತಿಕ್ರಿಯಿಸಿರುವ 51 ವರ್ಷದ ಅಮೀಷಾ ಪಟೇಲ್, ನೆಟ್ಟಿಗನೊಬ್ಬನ ಕಮೆಂಟ್‌ಗೆ ವ್ಯಂಗ್ಯಾತ್ಮಕವಾಗಿ ತಿರುಗೇಟು ನೀಡಿದ್ದಾರೆ. ‘ನಿಮ್ಮ ಮಾತು ನಿಜ, ನಾನು ಬಹಳ ರೊಮ್ಯಾಂಟಿಕ್ ಆಗಿಯೇ ಅವರ ಹೆಗಲ ಮೇಲೆ ಕೈಯಿಟ್ಟಿದ್ದೆ. ನಿಮ್ಮ ಬಗ್ಗೆ ನನಗೆ ತಿಳಿಯದು, ಆದರೆ ಖಂಡಿತವಾಗಿಯೂ ನಿಮಗಿನ್ನೂ ಯಾವುದೇ ಹುಡುಗಿ ಸ್ನೇಹಿತೆಯಾಗಿ ಸಿಕ್ಕಿಲ್ಲ ಅನಿಸುತ್ತದೆ. ಇಂತಹ ಪೋಸ್ಟ್ ಮಾಡುವ ಮುನ್ನ ಕನಿಷ್ಠ ಒಬ್ಬ ಹುಡುಗಿಯನ್ನು ಸ್ನೇಹಿತೆಯನ್ನಾಗಿ ಮಾಡಿಕೊಳ್ಳಿ’ ಎಂದು ಖಾರವಾಗಿ ಉತ್ತರಿಸಿದ್ದಾರೆ.
ಮಾಡೆಲ್ ಮಹಿಕಾ ಶರ್ಮಾ ಜೊತೆ ಹಾರ್ದಿಕ್ ಡೇಟಿಂಗ್
ಪ್ರಸ್ತುತ ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಮಾಡೆಲ್ ಮಹಿಕಾ ಶರ್ಮಾ ಅವರೊಂದಿಗೆ ಪ್ರೀತಿಯಲ್ಲಿದ್ದು, ಇಬ್ಬರ ಸಂಬಂಧದ ಸುದ್ದಿಗಳು ಆಗಾಗ ಮುಖ್ಯಾಂಶಗಳಲ್ಲಿ ಕಾಣಿಸಿಕೊಳ್ಳುತ್ತಿವೆ. ಹೀಗಾಗಿ ಅಮೀಷಾ ಪಟೇಲ್ ತಮ್ಮ ಮತ್ತು ಹಾರ್ದಿಕ್ ನಡುವಿನ ವದಂತಿಗಳನ್ನು ಗಂಭೀರವಾಗಿ ಪರಿಗಣಿಸದೆ ತಮಾಷೆಯಾಗಿ ತಳ್ಳಿಹಾಕಿದ್ದಾರೆ.
2000ದಲ್ಲಿ ಹೃತಿಕ್ ರೋಶನ್ ಜೊತೆ ‘ಕಹೋ ನಾ ಪ್ಯಾರ್ ಹೈ’ ಚಿತ್ರದ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದ ಅಮೀಷಾ ಪಟೇಲ್, ನಂತರ ‘ಗದರ್: ಏಕ್ ಪ್ರೇಮ್ ಕಥಾ’ ಚಿತ್ರದ ಮೂಲಕ ಅಪಾರ ಜನಪ್ರಿಯತೆ ಗಳಿಸಿದ್ದರು. ಇತ್ತೀಚೆಗೆ ಸನ್ನಿ ಡಿಯೋಲ್ ಜೊತೆ ಅಭಿನಯಿಸಿದ್ದ ‘ಗದರ್ 2’ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಭಾರಿ ಯಶಸ್ಸು ಕಾಣುವ ಮೂಲಕ ಅಮೀಷಾ ಮತ್ತೆ ಚಿತ್ರರಂಗದಲ್ಲಿ ಮಿಂಚುತ್ತಿದ್ದಾರೆ.

