ಬೆಂಗಳೂರು: ಆರೋಗ್ಯ ಇಲಾಖೆಯ ವಿರುದ್ಧ 108 ಆಂಬುಲೆನ್ಸ್ ನೌಕರರು ಮತ್ತೆ ಪ್ರತಿಭಟನೆ ಆರಂಭಿಸಿದ್ದಾರೆ. ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ 108 ಆ್ಯಂಬುಲೆನ್ಸ್ ನೌಕರರು ಸಮರ ಸಾರಿದ್ದು, 15 ದಿನದೊಳಗೆ ಬೇಡಿಕೆ ಈಡೇರದೆ ಇದ್ದರೆ ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡಿದ್ದಾರೆ.
ಪ್ರತಿ ವರ್ಷ 108 ಆ್ಯಂಬುಲೆನ್ಸ್ ನೌಕರರ ವೇತನ ಪರಿಷ್ಕರಣೆ ಮಾಡಬೇಕು ಎಂದು ಆಗ್ರಹಿಸಿ ಪ್ರತಿಭಟನೆ ನಡೆಸುತ್ತಾರೆ. ಅದೇ ರೀತಿ ಈಬಾರಿಯೂ ಪ್ರತಿಭಟನೆ ಆರಮ್ಭಿಸಿದ್ದು, 3 ಪಾಳಿಯಲ್ಲಿ ಆ್ಯಂಬುಲೆನ್ಸ್ ವಾಹನದ ಸೌಕರ್ಯ ಮಾಡಬೇಕು ಮತ್ತು ವಲಯವಾರು ವಿಂಗಡಣೆ ಮಾಡಿ ನಿಗದಿ ಮಾಡಿರೋ ವೇತನ ರದ್ದು ಪಡಿಸಿ ಏಕರೂಪ ವಲಯವಾಗಿ ಬದಲಾವಣೆ ಮಾಡಬೇಕೆಂಬುದು ನೌಕರರು ಆಗ್ರಹಿಸಿದ್ದಾರೆ.
108 ಆ್ಯಂಬುಲೆನ್ಸ್ ನೌಕರರ ಪ್ರಮುಖ ಬೇಡಿಕೆಗಳು:
ಅಪಘಾತದಲ್ಲಿ ಮೃತಪಟ್ಟವರ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ
ಜೇಷ್ಠತೆ ಆಧಾರದ ಮೇಲೆ ಸಿಬ್ಬಂದಿಗೆ ವೇತನ ನಿಗದಿ
ಕಾರ್ಮಿಕ ಇಲಾಖೆ ಪ್ರಕಾರ ಪ್ರತಿ ತಿಂಗಳು 7ರ ಒಳಗೆ ವೇತನ ನೀಡಬೇಕು
ಸಿಬ್ಬಂದಿಗೆ ವಿಶ್ರಾಂತಿ ಕೊಠಡಿ ನೀಡಬೇಕು
15 ದಿನಗಳಲ್ಲಿ ನಮ್ಮ ಬೇಡಿಕೆ ಈಡೇರಿಸದಿದ್ದರೆ ಆಂಬುಲೆನ್ಸ್ ನೌಕರರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಸಚಿವ ಯು.ಟಿ.ಖಾದರ್ ಎಚ್ಚರಿಕೆ:
108 ಆ್ಯಂಬುಲೆನ್ಸ್ ಸಿಬ್ಬಂದಿ ಸಾಮೂಹಿಕ ರಾಜೀನಾಮೆ ಎಚ್ಚರಿಕೆ ನೀಡಿರುವ ವಿಚಾರವಾಗಿ ಮಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಸಿಬ್ಬಂದಿ ಮುಷ್ಕರ ಮಾಡಲಿ. ಆದರೆ ರೋಗಿಗಳಿಗೆ ಸಮಸ್ಯೆಯಾದರೆ ಕಠಿಣ ಕ್ರಮಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಸಿದ್ದಾರೆ.
108 ಆ್ಯಂಬುಲೆನ್ಸ್ ವಾಹನಗಳ ನಿರ್ವಹಣೆ ಮಾಡೋಡದು ಸರ್ಕಾರ ಅಥವಾ ಆರೋಗ್ಯ ಇಲಾಖೆಯಲ್ಲ. ಅದು ಬೇರೆ ಕಂಪನಿಗೆ ಸಂಬಂಧಿಸಿದ ವಿಚಾರ. ಕಂಪನಿಯು ಸಿಬ್ಬಂದಿಯ ವೇತನ ಸೇರಿ ಎಲ್ಲಾ ಕೆಲಸ ಮಾಡುತ್ತೆ. ಚಾಲಕರಿಗೆ ಸಮಸ್ಯೆ ಇದ್ದರೆ ಕಂಪನಿ ಜೊತೆ ಮಾತನಾಡಬೇಕು. ಅವರು ಸಮಸ್ಯೆ ಬಗೆಹರಿಸದಿದ್ದರೆ ನಮ್ಮ ಬಳಿ ಮಾತನಾಡಲಿ ಎಂದರು.
ಈ ವಿಚಾರದಲ್ಲಿ ನಮಗೂ, ಕಂಪನಿಗೂ ಯಾವುದೇ ಸಂಬಂಧ ಇರುವುದಿಲ್ಲ. ಹೀಗಾಗಿ ನಮಗೆ ಆ್ಯಂಬುಲೆನ್ಸ್ ಸಿಬ್ಬಂದಿ ಮುಷ್ಕರ ನಡೆಸಿ ಸಮಸ್ಯೆ ಮಾಡಬಾರದು. ಸಿಬ್ಬಂದಿ ಮುಷ್ಕರ ಅಲ್ಲ ಏನೇ ಮಾಡಿದರೂ ನಾವು ಜವಾಬ್ದಾರಿ ಅಲ್ಲ. ಸಿಬ್ಬಂದಿಯನ್ನು ನಿಭಾಯಿಸಲು ಆಗದಿದ್ದರೆ ಕಂಪನಿಯು ಬಿಟ್ಟುಹೋಗಲಿ. ನಾವು ಬೇರೆ ಕಂಪನಿಗೆ ಟೆಂಡರ್ ಕೊಡುತ್ತೇವೆ. ಆ್ಯಂಬುಲೆನ್ಸ್ ಸಿಬ್ಬಂದಿ ವರ್ಗದವರು ನಮ್ಮ ಸಹೋದರರು ಇದ್ದಂತೆ. ಆದರೆ ಅವರಿಗಿಂತ ನಮಗೆ ರೋಗಿಗಳ ಆರೋಗ್ಯ ಮುಖ್ಯ. ಮುಷ್ಕರದ ವೇಳೆ ರೋಗಿಗೆ ಸಮಸ್ಯೆಯಾದರೆ ನಾವು ಸುಮ್ಮನಿರಲ್ಲ. ಮುಷ್ಕರದಲ್ಲಿ ಭಾಗಿಯಾಗುವ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕಾಗುತ್ತೆ. ರೋಗಿಗಳ ನೆರವಿಗೆ ಬರದಿದ್ದರೆ ಸಿಬ್ಬಂದಿ ವಿರುದ್ಧ ಯಾವುದೇ ಮುಲಾಜಿಲ್ಲದೆ ಕ್ರಮಕೈಗೊಳ್ಳಬೇಕಾಗುತ್ತೆ ಎಂದು ಎಚ್ಚರಿಕೆ ನೀಡಿದರು.

