ಬೆಂಗಳೂರು: ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹಾಗೂ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬಗ್ಗೆ ಆಕ್ಷೇಪಾರ್ಹ ವಿಡಿಯೋ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಅರ್ಜಿದಾರ ಖಾಸಗಿ ಸುದ್ದಿವಾಹಿನಿಯ ವ್ಯವಸ್ಥಾಪಕ ನಿರ್ದೇಶಕ ಶಬ್ಬೀರ್ ಪಾಷಾನನ್ನು ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ.
ಡಿಸಿಎಂ ಪರಮೇಶ್ವರ್ ಹಾಗೂ ತುಮಕೂರು ಜಿಲ್ಲಾಧಿಕಾರಿ ಶುಭ ಕಲ್ಯಾಣ್ ನಡುವೆ ಪ್ರೇಮ ಸಂಬಂಧ ಬೆಸೆದು ವಿಡಿಯೊ ಮಾಡಿದ ಸಂಬಂಧ ದಾಖಲಾಗಿರುವ ಪ್ರಕರಣ ರದ್ದತಿ ಕೋರಿ ತುಮಕೂರಿನ ಶಬ್ಬೀರ್ ಪಾಷಾ ಮತ್ತು ವಿ. ಕುಸುಮಾ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಪೀಠ ಅರ್ಜಿದಾರರ ವಿರುದ್ಧ ಗರಂ ಆಗಿದೆ.
ನ್ಯಾ. ವಿ.ಶ್ರೀಶಾನಂದ ಅವರ ಏಕಸದಸ್ಯಪೀಠದಿಂದ ವಿ ಇಂದು ಅರ್ಜಿ ಚಾರಣೆ ನಡೆಯಿತು. ಈ ವೇಳೆ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಬಗ್ಗೆ ಆಕ್ಷೇಪಾರ್ಹವಾದ ಮಾತುಗಳನ್ನಾಡಿದ ಅರ್ಜಿದಾರ ಶಬ್ಬಿರ್ ಪಾಷಾ ವಿರುದ್ಧ ಕಿಡಿಕಾರಿದ ಹೈಕೋರ್ಟ್, ಹೆಣ್ಣುಮಕ್ಕಳಿಗೆ ಬೇರೊಬ್ಬರ ಜೊತೆ ಸಂಬಂಧ ತಳುಕು ಹಾಕುವಾಗ ನಮ್ಮ ಮನೆಯಲ್ಲಿಯೂ ಹೆಣ್ಣು ಮಕ್ಕಳು ಇರುತ್ತಾರೆ ಎಂಬ ಜ್ಞಾನ ಇರಬೇಕು ಎಂದ ಗುಡುಗಿದೆ.
ಇದೇ ವೇಳೆ ಒಂದೇ ಪ್ರಕರಣಕ್ಕೆ ಎರಡು ಎಫ್ಐಅರ್ ದಾಖಲಿಸಿರುವುದಕ್ಕೆ ತನಿಖಾಧಿಕಾರಿ ವಿರುದ್ಧವೂ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯ ಪೀಠ. ಒಮ್ಮೆ ಎಫ್ಐಆರ್ ಆದ ಮೇಲೆ ಆನಂತರ ದೂರುದಾರರು ಪ್ರಕರಣದಲ್ಲಿ ಸಾಕ್ಷಿದಾರರಾಗುತ್ತಾರೆ ಎಂದು ತಿಳಿಸಿದೆ.
ಈ ವೇಳೆ ಹೆಚ್ಚುವರಿ ರಾಜ್ಯ ಸರ್ಕಾರಿ ಅಭಿಯೋಜಕ ಸೂರ್ಯ ಮುಕುಂದರಾಜ್, ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿದ ಮೇಲೆ ಇನ್ನೊಂದು ಪ್ರಕರಣ ದಾಖಲಿಸುವ ಅಗತ್ಯವಿರಲಿಲ್ಲ ಎಂದರು. ಈ ವೇಳೆ ಹಾಗಾದರೆ ಆ ಅಯೋಗ್ಯ ತನಿಖಾಧಿಕಾರಿ ಹೇಗೆ ಪ್ರಕರಣ ದಾಖಲಿಸಿದ ಎಂದು ನ್ಯಾಯ ಪೀಠ ಪ್ರಶ್ನೆ ಮಾಡಿದೆ. ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಪೀಠ ಮಧ್ಯಾಹ್ನ ಮುಂದೂಡಿದೆ.
ತನ್ನ ವಿರುದ್ಧದ ಪ್ರಕರಣ ರದ್ದು ಮಾಡುವಂತೆ ಕೋರಿರುವ ಅರ್ಜಿದಾರ ಶಬ್ಬೀರ್ ಪಾಷಾ ಖಾಸಗಿ ನ್ಯೂಸ್ ಚಾನಲ್ ನ ವ್ಯವಸ್ಥಾಪಕ ನಿರ್ದೇಶಕರಾಗಿದ್ದು, ಇನ್ನೋರ್ವ ಅರ್ಜಿದಾರೆ ವಿ.ಕುಸುಮಾ ಚಾನಲ್ ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದಾರೆ.

