ಚಾಮರಾಜನಗರ: ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಶಾಗ್ಯ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಗಳ ಗುಂಡೇಟಿಗೆ ಮೂವರು ಸಾವನ್ನಪ್ಪಿರುವ ಪ್ರಕರಣದ ತನಿಖೆ ಚುರುಕುಗೊಂಡಿದೆ. ಈ ಎನ್‌ಕೌಂಟರ್ ಪ್ರಕರಣದಲ್ಲಿ ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿದ ಫೋಟೋಗಳು ತೀವ್ರ ಅನುಮಾನಕ್ಕೆ ಕಾರಣವಾಗಿವೆ.
ಮೃತರ ಬಳಿಯಿಂದ ವಶಪಡಿಸಿಕೊಂಡ ವಸ್ತುಗಳಲ್ಲಿ ಸ್ಟಿಕ್ಕರ್ ತೆಗೆಯದ ಹೊಸ ಚಪ್ಪಲಿ ಇರುವುದು ಸಾಕ್ಷಿ ಸೃಷ್ಟಿಯ ಆಕ್ಷೇಪಕ್ಕೆ ಎಡೆಮಾಡಿಕೊಟ್ಟಿದೆ. ಕೊಳ್ಳೇಗಾಲ ಡಿವೈಎಸ್ ಪಿ ಮೋಹನ್ ನೇತೃತ್ವದ ಎಫ್ ಎಸ್ ಎಲ್ ಮತ್ತು ಬ್ಯಾಲೆಸ್ಟಿಕ್ ತಜ್ಞರ ತಂಡ ಘಟನಾ ಸ್ಥಳದಿಂದ ಗುಂಡಿನ ಚೂರು ಹಾಗೂ ರಕ್ತದ ಮಾದರಿ ಸಂಗ್ರಹಿಸಿದೆ.
ಹನೂರಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ನಡೆಸಿದ ಗುಂಡೇಟಿಗೆ ಮೂವರು ಬಲಿಯಾದ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಕುಟುಂಬಸ್ಥರ ಪ್ರತಿಭಟನೆ ಬಳಿಕ ಇದೀಗ ಮೃತ ಪೀಟರ್, ಆಂಥೋನಿ ಹಾಗೂ ಕುಮಾರ್ ಅವರ ಅಂತ್ಯಕ್ರಿಯೆ ನೆರವೇರಿದೆ. ಸರ್ಕಾರ ಮತ್ತು ಶಾಸಕರು ನೀಡಿದ ತಲಾ 15 ಲಕ್ಷ ರೂ. ಪರಿಹಾರದ ಭರವಸೆಯಿಂದಾಗಿ ಪ್ರತಿಭಟನೆ ಶಮನಗೊಂಡಿದೆಯಾದರೂ ಅರಣ್ಯ ಇಲಾಖೆ ಸಿಬ್ಬಮ್ದಿ ಬಿಡಿಗಡೆ ಮಾಡಿರುವ ಫೋಟ್ ಭಾರಿ ಚರ್ಚೆಗೆ ಕಾರಣವಾಗಿದೆ.
ಅರಣ್ಯಾಧಿಕಾರಿಗಳು ಬಿಡುಗಡೆ ಮಾಡಿದ ಫೋಟೋದಲ್ಲಿ ಜಿಂಕೆ ಮಾಂಸ, ಬಂದೂಕು, ಚಾಕು ಹಾಗೂ ಅಡುಗೆ ಸಾಮಾನಿನ ಜೊತೆಗಿದ್ದ ಹೊಸ ಚಪ್ಪಲಿಯ ಮೇಲಿನ ಸ್ಟಿಕ್ಕರ್ ಕೂಡ ತೆಗೆಯದಿರುವುದು ಸಾರ್ವಜನಿಕರಲ್ಲಿ ಮತ್ತು ತನಿಖಾಧಿಕಾರಿಗಳಲ್ಲಿ ತೀವ್ರ ಅನುಮಾನ ಮೂಡಿಸಿದೆ. ಅಧಿಕಾರಿಗಳು ನಕಲಿ ಸಾಕ್ಷಿ ಸೃಷ್ಟಿಸಲು ಹೊಸ ಚಪ್ಪಲಿ ತಂದಿಟ್ಟಿದ್ದಾರೆಯೇ ಎಂಬ ಆಕ್ಷೇಪ ವ್ಯಕ್ತವಾಗಿದೆ.
ಈ ಅನುಮಾನಗಳ ಬೆನ್ನಲ್ಲೇ ತನಿಖೆ ಚುರುಕುಗೊಂಡಿದ್ದು, ಕೊಳ್ಳೇಗಾಲ ಡಿವೈಎಸ್ಪಿ ಮೋಹನ್ ಅವರ ನೇತೃತ್ವದಲ್ಲಿ ಎಫ್ಎಸ್ಎಲ್ ಹಾಗೂ ಬ್ಯಾಲೆಸ್ಟಿಕ್ ತಜ್ಞರನ್ನೊಳಗೊಂಡ 15 ಮಂದಿಯ ವಿಶೇಷ ತಂಡ ಕಾವೇರಿ ವನ್ಯಜೀವಿಧಾಮದ ಶಾಗ್ಯ ಬೀಟ್ ಅರಣ್ಯಕ್ಕೆ ಭೇಟಿ ನೀಡಿದೆ. ಘಟನಾ ಸ್ಥಳದಲ್ಲಿ ಬಿದ್ದಿದ್ದ ಗುಂಡಿನ ಚೂರುಗಳು, ಪೆಲೆಟ್ಸ್ ಮತ್ತು ರಕ್ತದ ಕಲೆಯ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಣೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಲಾಗಿದೆ.

