ಪನೀರ್ ಪ್ರಿಯರಿಗಾಗಿ ಸದಾ ಹೊಸ ಬಗೆಯ ಖಾದ್ಯಗಳ ಹುಡುಕಾಟ ನಡೆಯುತ್ತಲೇ ಇರುತ್ತದೆ. ಮಸಾಲೆ ಭರಿತ ಹಾಗೂ ಬಾಯಲ್ಲಿ ನೀರೂರಿಸುವ ‘ಹಾಂಡಿ ಪನೀರ್’ ಅಂತಹ ಒಂದು ವಿಶಿಷ್ಟ ಖಾದ್ಯ. ಇದನ್ನು ತಯಾರಿಸುವುದು ಬಹಳ ಸುಲಭ ಮತ್ತು ಇದು ಮಧ್ಯಾಹ್ನದ ಊಟ ಅಥವಾ ರಾತ್ರಿಯ ಭೋಜನಕ್ಕೆ ಪರೋಟಗಳೊಂದಿಗೆ ಸವಿಯಲು ಅತ್ಯುತ್ತಮ ಕಾಂಬಿನೇಷನ್ ಆಗಿದೆ.
ಬೇಕಾಗುವ ಪದಾರ್ಥಗಳು: ಪನೀರ್ – 200 ಗ್ರಾಂ, ಈರುಳ್ಳಿ – 3 (ಸಣ್ಣಗೆ ಹೆಚ್ಚಿದ್ದು), ಟೊಮೆಟೊ – 1, ಮೊಸರು – ಅರ್ಧ ಕಪ್ (ಚೆನ್ನಾಗಿ ಫೆಟ್ ಮಾಡಿದ್ದು), ಶುಂಠಿ – ಸ್ವಲ್ಪ (ತುರಿದಿದ್ದು), ಅರಿಶಿನ ಪುಡಿ – ಅರ್ಧ ಚಮಚ, ಕೆಂಪು ಮೆಣಸಿನಕಾಯಿ ಪುಡಿ – ಅರ್ಧ ಚಮಚ, ಗರಂ ಮಸಾಲ – ಅರ್ಧ ಚಮಚ, ಕಾಳುಮೆಣಸಿನ ಪುಡಿ – ಸ್ವಲ್ಪ, ಎಣ್ಣೆ – 4 ಚಮಚ, ಕೊತ್ತಂಬರಿ ಸೊಪ್ಪು ಮತ್ತು ರುಚಿಗೆ ತಕ್ಕಷ್ಟು ಉಪ್ಪು.
ತಯಾರಿಸುವ ವಿಧಾನ: ಮೊದಲು ಒಂದು ಹಾಂಡಿ ಅಥವಾ ಆಳವಾದ ಪಾತ್ರೆಗೆ ಎಣ್ಣೆ ಹಾಕಿ ಬಿಸಿ ಮಾಡಿ. ಇದಕ್ಕೆ ಹೆಚ್ಚಿದ ಈರುಳ್ಳಿ ಹಾಕಿ ಮಧ್ಯಮ ಉರಿಯಲ್ಲಿ ಚೆನ್ನಾಗಿ ಹುರಿಯಿರಿ. ಈರುಳ್ಳಿ ಬೆಂದ ನಂತರ ಉರಿಯನ್ನು ಕಡಿಮೆ ಮಾಡಿ, ತುರಿದ ಶುಂಠಿ, ಅರಿಶಿನ, ಮೆಣಸಿನ ಪುಡಿ ಮತ್ತು ಗರಂ ಮಸಾಲ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ.
ನಂತರ ಇದಕ್ಕೆ ಸಣ್ಣಗೆ ಹೆಚ್ಚಿದ ಟೊಮೆಟೊ ಮತ್ತು ಹಸಿಮೆಣಸಿನಕಾಯಿ ಸೇರಿಸಿ ಸುಮಾರು 10 ನಿಮಿಷಗಳ ಕಾಲ ಕಡಿಮೆ ಉರಿಯಲ್ಲಿ ಬೇಯಿಸಿ. ಮಸಾಲೆ ಹದವಾಗಿ ಬೆಂದ ನಂತರ ಅರ್ಧ ಕಪ್ ಮೊಸರು ಸೇರಿಸಿ, ಮಿಶ್ರಣವು ಸ್ವಲ್ಪ ಗಟ್ಟಿಯಾಗುವವರೆಗೆ ಬೇಯಿಸಿ. ಈಗ ರುಚಿಗೆ ತಕ್ಕಷ್ಟು ಉಪ್ಪು ಮತ್ತು ಅರ್ಧ ಕಪ್ ನೀರು ಸೇರಿಸಿ ಕುದಿಯಲು ಬಿಡಿ.
ಮಿಶ್ರಣವು ಕುದಿಯಲು ಆರಂಭಿಸಿದಾಗ ಪನೀರ್ ತುಂಡುಗಳು ಮತ್ತು ಹೆಚ್ಚಿದ ಕೊತ್ತಂಬರಿ ಸೊಪ್ಪನ್ನು ಸೇರಿಸಿ. ಮಸಾಲೆ ಪನೀರ್‌ಗೆ ಸರಿಯಾಗಿ ಅಂಟಿಕೊಳ್ಳುವವರೆಗೆ ಬೇಯಿಸಿ. ಕೊನೆಯದಾಗಿ ಸ್ವಲ್ಪ ಕಾಳುಮೆಣಸಿನ ಪುಡಿಯನ್ನು ಉದುರಿಸಿ ಒಲೆಯಿಂದ ಕೆಳಗಿಳಿಸಿ. ಬಿಸಿಬಿಸಿಯಾದ ಪರೋಟ ಅಥವಾ ಕುಲ್ಚಾ ಜೊತೆ ಈ ಹಾಂಡಿ ಪನೀರ್ ಸವಿಯಲು ಸಿದ್ಧ.

