ತಮಿಳುನಾಡು ರಾಜಕಾರಣದಲ್ಲಿ ಸದ್ಯ ಮಹತ್ವದ ಬೆಳವಣಿಗೆಗಳು ನಡೆಯುತ್ತಿದ್ದು, ಎಲ್ಲರ ಚಿತ್ತ ಟಿವಿಕೆ ಯಾವಾಗ ಸ್ಪಷ್ಟ ಬಹುಮತ ಸಾಬೀತುಪಡಿಸಿ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎನ್ನುವುದರತ್ತ ಇದೆ.
ಫಲಿತಾಂಶ ಹೊರಬಿದ್ದು ಮೂರು ದಿನಗಳಾದರೂ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿದ ಟಿವಿಕೆಗೆ ಇನ್ನೂ ಸಹ ಬಹುಮತ ಸಾಬೀತುಪಡಿಸಲು ಸಾಧ್ಯವಾಗದೇ ಇದ್ದು, ಭಾರೀ ಕುತೂಹಲ ಮೂಡಿಸಿದೆ.
ಇನ್ನು ಟಿವಿಕೆಗೆ 5 ಕ್ಷೇತ್ರಗಳಲ್ಲಿ ಗೆದ್ದಿರುವ ಕಾಂಗ್ರೆಸ್ ಬೆಂಬಲ ಸೂಚಿಸಿ ಕೈ ಜೋಡಿಸಿದ್ದು, ಉಳಿದ ಸ್ಥಾನಗಳಿಗೆ ಸಣ್ಣ ಪಕ್ಷಗಳ ಮೊರೆ ಹೋಗಬೇಕಿದೆ. ಹೀಗೆ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೂ ಸರ್ಕಾರ ರಚಿಸಲು ಪರದಾಡುತ್ತಿರುವ ಟಿವಿಕೆ ಕಂಡು ಬಿಜೆಪಿ ಬೆಂಬಲಿಗರು ತಮ್ಮ ಪಕ್ಷ ಹೆಚ್ಚು ಸೀಟುಗಳನ್ನು ಗೆದ್ದಿದ್ದರೆ ಇದೊಂದು ಸುವರ್ಣಾವಕಾಶವಾಗಿರುತ್ತಿತ್ತು ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಈ ಸಮಯದಲ್ಲಿ ಇದೇ ಸನ್ನಿವೇಶದ ಕುರಿತು ಎರಡು ವರ್ಷಗಳ ಹಿಂದೆಯೇ ಭವಿಷ್ಯ ನುಡಿದಿದ್ದ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ನೆನಪಿಗೆ ಬಂದಿದ್ದಾರೆ. ಹೌದು, ತಮಿಳುನಾಡಿನಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಲಿದೆ ಬಿಜೆಪಿ ಬಲಪಡಿಸಿ ಎಂದು ಅಣ್ಣಾಮಲೈ ಸಲಹೆ ನೀಡಿದ್ದರು.
2024ರಲ್ಲಿ ವೇದಿಕೆಯೊಂದರಲ್ಲಿ ಮಾತನಾಡಿದ್ದ ಅಣ್ಣಾಮಲೈ ‘100% 2026ರಲ್ಲಿ ಯಾವ ಪಕ್ಷವೂ ಸ್ಪಷ್ಟ ಬಹುಮತ ಪಡೆಯುವುದಿಲ್ಲ. ತಮಿಳುನಾಡು 2026ರಲ್ಲಿ ಇದೇ ಮೊದಲ ಬಾರಿಗೆ ನೈಜ ಮೈತ್ರಿಯನ್ನು ನೋಡಲಿದೆ. ಹೀಗಾಗಿ ನಮ್ಮ ಪಕ್ಷ ಬಿಜೆಪಿ 2024ರಿಂದ 2026ರ ಅವಧಿಯನ್ನು ಸರಿಯಾಗಿ ಬಳಸಿಕೊಂಡು, ಶ್ರಮವಹಿಸಿ, ಸ್ಥಳೀಯ ನಾಯಕರನ್ನು ಬೆಂಬಲಿಸಿ, ಎಲ್ಲ 234 ಕ್ಷೇತ್ರಗಳಿಗೂ ಚುನಾವಣೆಗೆ 500 ದಿನಗಳಿಗೂ ಮುನ್ನ ಅಭ್ಯರ್ಥಿಗಳನ್ನು ಸಿದ್ಧಪಡಿಸಿದರೆ 2026 ಭಾರತೀಯ ಜನತಾ ಪಕ್ಷದ ಕಾಲವಾಗಲಿದೆ’ ಎಂದಿದ್ದರು.
ಅಣ್ಣಾಮಲೈ ಅಂದು ಹೇಳಿದ ಹಾಗೆ ಬಿಜೆಪಿ ಹೈಕಮಾಂಡ್ ತುಸು ಕಾಳಜಿವಹಿಸಿ ಕೆಲಸ ಮಾಡಿದ್ದರೆ ಇಂದು ಮೈತ್ರಿಗೆ ಕೈ ಜೋಡಿಸುವಷ್ಟು ಸೀಟುಗಳನ್ನು ಗೆಲ್ಲುವ ಪ್ರಯತ್ನ ಮಾಡಬಹುದಿತ್ತು. ಆದರೆ ಬಿಜೆಪಿ ಈ ಬಾರಿಯ ಚುನಾವಣೆಯಲ್ಲಿ ಕೇವಲ ಒಂದು ಸೀಟನ್ನು ಮಾತ್ರ ಗೆದ್ದಿದೆ. ಅದೂ ಸಹ 900 ಮತಗಳ ಅಂತರದಲ್ಲಿ.

