ಕನ್ನಡ ಚಿತ್ರರಂಗದಲ್ಲಿ ಹೊಸ ಸಂಚಲನ ಮೂಡಿಸಲು ಸಜ್ಜಾಗುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ಶೀರ್ಷಿಕೆ ಟೀಸರ್ (Title Teaser) ಬಿಡುಗಡೆಯಾಗಿದ್ದು, ನೋಡುಗರ ಗಮನ ಸೆಳೆಯುತ್ತಿದೆ. ಹೌದು. ವೆನಿಲ್ಲಾ ಎಂಟರ್ಟೈನ್ಮೆಂಟ್ಸ್ ಲಾಂಛನದಲ್ಲಿ ಮೂಡಿಬರುತ್ತಿರುವ ‘ಪ್ರೇಮದ ಊರಲಿ’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಹಳ್ಳಿ ಸೊಗಡು, ತಂದೆ-ಮಗನ ಬಾಂಧವ್ಯ ಮತ್ತು ಅಪ್ಪಟ ಪ್ರೇಮಕಥೆಯ ಎಳೆಯನ್ನು ಈ ಟೀಸರ್ ಬಿಚ್ಚಿಟ್ಟಿದೆ.
ತಂದೆ-ಮಗನ ಸೆಂಟಿಮೆಂಟ್: ಖ್ಯಾತ ನಟ ರಂಗಾಯಣ ರಘು ಅವರು ಒಬ್ಬ ಜವಾಬ್ದಾರಿಯುತ ತಂದೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. “ನನ್ನ ಹೆಂಡತಿ ನನ್ನ ನಂಬಿ ಇವನನ್ನು ನನ್ನ ಕೈಗೆ ಕೊಟ್ಟು ಹೋಗಿದ್ದಾಳೆ, ಈ ನಂಬಿಕೆಯನ್ನು ನಾನು ಇನ್ನೊಬ್ಬರ ಕೈಗೆ ಕೊಡಲ್ಲ” ಎಂಬ ಭಾವುಕ ಸಂಭಾಷಣೆಯೊಂದಿಗೆ ಟೀಸರ್ ಆರಂಭವಾಗುತ್ತದೆ. ನೇಗಿಲು ಹಿಡಿದು ಹೊಲದಲ್ಲಿ ದುಡಿಯುವ ಮಗನಿಗೆ ಡಿಗ್ರಿ ಓದಿದ ಹುಡುಗಿಯನ್ನೇ ಮದುವೆ ಮಾಡಿಸಬೇಕು ಎಂಬ ಹಠಕ್ಕೆ ಬಿದ್ದ ತಂದೆಯ ಪಾತ್ರದಲ್ಲಿ ರಂಗಾಯಣ ರಘು ಮಿಂಚಿದ್ದಾರೆ . ರೈತ ನಾಯಕನಾಗಿ ನಟ ಶ್ರೀರಾಮ್ ಕಾಣಿಸಿಕೊಂಡಿದ್ದಾರೆ.
ತಾಂತ್ರಿಕ ಶ್ರೀಮಂತಿಕೆ: ಮನಸ್ಸಿಗೆ ಮುದ ನೀಡುವ ಸಂಗೀತ ಮತ್ತು ಹಳ್ಳಿಯ ಸೌಂದರ್ಯವನ್ನು ಸೆರೆಹಿಡಿದಿರುವ ಛಾಯಾಗ್ರಹಣ ಟೀಸರ್‌ನ ಪ್ಲಸ್ ಪಾಯಿಂಟ್. “ಪ್ರೇಮದ ಊರಲಿ ಹೃದಯದ ತೇರಲಿ ಒಲವಿನ ಮಳೆಯಾಗಿದೆ” ಎಂಬ ಹಾಡಿನ ಸಾಲುಗಳು ಕೇಳುಗರ ಮನ ಗೆಲ್ಲುತ್ತಿವೆ .ಈ ಚಿತ್ರದಲ್ಲಿ ಶ್ರೀರಾಮ್, ತಪಸ್ವಿನಿ, ರಮಿಕಾ ಮತ್ತು ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಮನೋಜ್ ಕುಮಾರ್ ಅವರ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬರುತ್ತಿದೆ.
“ಇದು ನಮ್ಮ ಕಥೆ, ನಿಮ್ಮ ಕಥೆ, ಮನಸ್ಸುಗಳು ಮಗುವಾಗುವ ಕಥೆ” ಎಂಬ ಅಡಿಬರಹದೊಂದಿಗೆ ಬಂದಿರುವ ಈ ಚಿತ್ರವು ಕೌಟುಂಬಿಕ ಪ್ರೇಕ್ಷಕರನ್ನು ಚಿತ್ರಮಂದಿರಕ್ಕೆ ಸೆಳೆಯುವ ಭರವಸೆ ನೀಡಿದೆ .

