ನವದೆಹಲಿ: ಗ್ರೇಟರ್ ನೋಯ್ಡಾದ ಕಲಾಧಾಮ್ ಸೊಸೈಟಿಯಲ್ಲಿ ಭೀಕರ ದುರಂತವೊಂದು ಸಂಭವಿಸಿದೆ. ಸೂಕ್ತ ತಡೆಗೋಡೆ ಅಥವಾ ಎಚ್ಚರಿಕೆ ಫಲಕಗಳಿಲ್ಲದೆ ಬಿಟ್ಟಿದ್ದ 15 ಅಡಿ ಆಳದ ನೀರು ತುಂಬಿದ ಗುಂಡಿಗೆ ಬಿದ್ದು ಆರು ವರ್ಷದ ಅವ್ಯಾನ್ ಸೂರ್ಯ ಮೃತಪಟ್ಟಿದ್ದಾನೆ. ಈ ಘಟನೆ ಅಧಿಕಾರಿಗಳ ನಿರ್ಲಕ್ಷ್ಯದ ಪರಿಣಾಮ ಎಂದು ಕುಟುಂಬಸ್ಥರು ಹಾಗೂ ಸ್ಥಳೀಯರು ಆರೋಪಿಸಿದ್ದಾರೆ.
ಶನಿವಾರ ಸಂಜೆ ಕೆಲಸ ಮುಗಿಸಿ ಮನೆಗೆ ಬಂದ ಸಿವಾನ್ ಯಾದವ್, ಸೊಸೈಟಿಯ ಉದ್ಯಾನವನದ ಬಳಿ ಜನಸಮೂಹ ಕಂಡರು. ಕೆಲವೇ ಕ್ಷಣಗಳಲ್ಲಿ, ಗುಂಡಿಯಿಂದ ಹೊರತೆಗೆದ ಬಾಲಕ ತನ್ನ ಮಗ ಅವ್ಯಾನ್ ಎಂಬುದನ್ನು ತಿಳಿದು ಅವರು ದುಃಖದಲ್ಲಿ ಮುಳುಗಿದರು.
ಅವ್ಯಾನ್ ತನ್ನ ಸ್ನೇಹಿತರೊಂದಿಗೆ ಕ್ರಿಕೆಟ್ ಆಡುತ್ತಿದ್ದ ವೇಳೆ, ಗ್ರೇಟರ್ ನೋಯ್ಡಾ ಪ್ರಾಧಿಕಾರ ಬೋರಿಂಗ್ ಕಾಮಗಾರಿಗಾಗಿ ಅಗೆದು ಸುರಕ್ಷತಾ ವ್ಯವಸ್ಥೆಯಿಲ್ಲದೆ ಬಿಟ್ಟಿದ್ದ ಗುಂಡಿಗೆ ಆಕಸ್ಮಿಕವಾಗಿ ಬಿದ್ದಿದ್ದಾನೆ ಎಂದು ನಿವಾಸಿಗಳು ತಿಳಿಸಿದ್ದಾರೆ.
ಸ್ಥಳೀಯರು ತಕ್ಷಣವೇ ಬಾಲಕನನ್ನು ರಕ್ಷಿಸಿ ಆಸ್ಪತ್ರೆಗೆ ಕರೆದೊಯ್ದರೂ, ವೈದ್ಯರು ಅವನು ಮೃತಪಟ್ಟಿರುವುದಾಗಿ ಘೋಷಿಸಿದರು.
ಮೃತ ಬಾಲಕನ ತಂದೆ ಸಿವಾನ್ ಯಾದವ್, “ಅಧಿಕಾರಿಗಳ ನಿರ್ಲಕ್ಷ್ಯವೇ ನನ್ನ ಮಗನ ಜೀವ ತೆಗೆದುಕೊಂಡಿದೆ. ಅವನು ಇನ್ನೂ ಜಗತ್ತನ್ನೇ ನೋಡಿರಲಿಲ್ಲ. ಇತರ ಮಕ್ಕಳಂತೆ ಹೊರಗೆ ಆಟವಾಡಲು ಅವನಿಗೆ ತುಂಬಾ ಇಷ್ಟವಾಗುತ್ತಿತ್ತು. ಕಣ್ಣು ಮುಚ್ಚಿದರೆ ಅವನ ಮುಖವೇ ಕಾಣಿಸುತ್ತದೆ. ನಮ್ಮ ದುಃಖವನ್ನು ಹೇಳಲು ಮಾತೇ ಇಲ್ಲ,” ಎಂದು ಕಣ್ಣೀರಿಟ್ಟರು.
ಘಟನೆಯನ್ನು ಕಣ್ಣಾರೆ ಕಂಡ ಪ್ರಾಂಜಲ್ ರಾಜ್‌ಪುತ್ ಮಾತನಾಡಿ, “ನಾನು ಕಾರು ತೊಳೆಯುತ್ತಿದ್ದಾಗ ಒಬ್ಬ ಬಾಲಕ ಓಡುತ್ತಾ ಬಂದು, ಮಗು ಗುಂಡಿಗೆ ಬಿದ್ದಿದೆ ಎಂದು ಕೂಗಿದ. ತಕ್ಷಣ ಭದ್ರತಾ ಸಿಬ್ಬಂದಿ ಗುಂಡಿಗೆ ಜಿಗಿದರು. ನಂತರ ಮೂವರು-ನಾಲ್ವರು ನಿವಾಸಿಗಳು ನೀರಿನೊಳಗೆ ಹುಡುಕಿ ಅವ್ಯಾನ್‌ನನ್ನು ಹೊರತೆಗೆದರು. ಆಸ್ಪತ್ರೆಗೆ ಕರೆದೊಯ್ದರೂ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದರು,” ಎಂದರು.
ಸ್ಥಳೀಯರು, ಆ ಸ್ಥಳದಲ್ಲಿ ಇಷ್ಟು ಆಳದ ಗುಂಡಿಯಿದೆ ಎಂಬ ಮಾಹಿತಿ ಯಾರಿಗೂ ಇರಲಿಲ್ಲ. ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದ ಗ್ರೇಟರ್ ನೋಯ್ಡಾ ಪ್ರಾಧಿಕಾರದ ಭಾರೀ ನಿರ್ಲಕ್ಷ್ಯವೇ ಈ ದುರಂತಕ್ಕೆ ಕಾರಣ ಎಂದು ಆರೋಪಿಸಿದ್ದಾರೆ.
ಈ ಘಟನೆ ನೋಯ್ಡಾ ಮತ್ತು ಗ್ರೇಟರ್ ನೋಯ್ಡಾದ ಸಾರ್ವಜನಿಕ ಸುರಕ್ಷತೆ ಕುರಿತು ಮತ್ತೊಮ್ಮೆ ಪ್ರಶ್ನೆಗಳನ್ನು ಎಬ್ಬಿಸಿದೆ. ಈ ವರ್ಷದ ಜನವರಿಯಲ್ಲಿ ನಿರ್ಮಾಣ ಕಾಮಗಾರಿ ಪ್ರದೇಶದ ಬಳಿ ನೀರು ತುಂಬಿದ ಗುಂಡಿಗೆ ಕಾರು ಬಿದ್ದು 27 ವರ್ಷದ ಸಾಫ್ಟ್‌ವೇರ್ ಎಂಜಿನಿಯರ್ ಯುವರಾಜ್ ಮೆಹ್ತಾ ಮೃತಪಟ್ಟಿದ್ದರು. ಆ ಘಟನೆಯ ಬಳಿಕ ತೆರೆದ ಗುಂಡಿಗಳನ್ನು ಸುರಕ್ಷಿತಗೊಳಿಸುವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದರೂ, ಅಗತ್ಯ ಕ್ರಮ ಕೈಗೊಳ್ಳಲಾಗಿಲ್ಲ ಎಂದು ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಗ್ರೇಟರ್ ನೋಯ್ಡಾ ಪ್ರಾಧಿಕಾರದ ಜನರಲ್ ಮ್ಯಾನೇಜರ್ ಎ.ಕೆ. ಸಿಂಗ್, “ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡದೆ ಗುತ್ತಿಗೆದಾರರು ಕಾಮಗಾರಿ ಆರಂಭಿಸಿದ್ದರಿಂದ ಈ ಲೋಪ ಸಂಭವಿಸಿದೆ” ಎಂದು ಒಪ್ಪಿಕೊಂಡಿದ್ದಾರೆ.

