ಮಂಗಳೂರು: ಸಮಾಜ ಸೇವೆ ಮಾಡುವುದಾಗಿ ಹೇಳಿ ವ್ಯಕ್ತಿರ್ವ ಆ್ಯಂಬುಲೆನ್ಸ್ನಲ್ಲೇ ಡ್ರಗ್ಸ್ ದಂಧೆ ನಡೆಸಿತ್ತಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ.
ಜಲೀಲ್ ಬಾಬಾ ಎಂಬಾತ ಆಂಬುಲೆನ್ಸ್ ನಲ್ಲಿಯೇ ಡ್ರಗ್ಸ್ ದಂಧೆ ನಡೆಸುತ್ತಿದ್ದು, ಅದರಲ್ಲಿಯೇ ಡ್ರಗ್ಸ್ ಸಂಗ್ರಹಿಸಿಟ್ಟುಕೊಂಡು ಡ್ರಗ್ಸ್ ಪೂರೈಕೆಯ ಅಡ್ಡೆ ಮಾಡಿಕೊಂಡಿದ್ದ. ಪೊಲೀಸರ ತನಿಖೆಯಲ್ಲಿ ಈ ವಿಚಾರ ಬಯಲಾಗಿದೆ.
ಜೂನ್ 25ರಂದು ಮಂಗಳೂರಿನಲ್ಲಿ ಅಣ್ಣಪ್ಪ ಸ್ವಾಮಿ ಆಲಿಯಾಸ್ ಮನು ಎಂಬಾತನನ್ನು ಎಂಡಿಎಂಎ ಸಹಿತ ಪೊಲೀಸರು ಬಂಧಿಸಿದ್ದರು. ಈ ವೇಳೆ ಪೊಲೀಸರಿಗೆ ಬಾಗಲಕೋಟೆಯ ಡ್ರಗ್ ಲಿಂಕ್ ಬಗ್ಗೆ ಮಾಹಿತಿ ದೊರೆತಿತ್ತು. ಹೀಗಾಗಿ ಜುಲೈ 15ರಂದು ಬಾಗಲಕೋಟೆಯ ಲಾಡ್ಜ್ ಮೇಲೆ ದಾಳಿ ನಡೆಸಿದ್ದ ಮಂಗಳೂರು ಸಿಸಿಬಿ ಪೊಲೀಸರು, ಅಲ್ಲಿ ಮೂವರನ್ನು ಬಂಧಿಸಿ ಐದು ಕೋಟಿ ಮೌಲ್ಯದ ಐದು ಕೆಜಿ ಡ್ರಗ್ಸ್ ವಶ ಪಡಿಸಿಕೊಂಡಿದ್ದರು. ಈ ವೇಳೆ ಬೆಳ್ತಂಗಡಿಯ ಮಹಮ್ಮದ್ ಅಲ್ಫಾಜ್, ಮಹಮ್ಮದ್ ಮುಸ್ತಾಫಾ ಅರೆಸ್ಟ್ ಆಗಿದ್ದರು. ಬಂಧಿತ ಮೂವರು ಲೋಕಲ್ ಪೆಡ್ಲರ್ ಜಲೀಲ್ ಬಾಬಾಗೆ ಡ್ರಗ್ಸ್ ಒದಗಿಸುತ್ತಿದ್ದ ಬಗ್ಗೆ ಸ್ಪೋಟಕ ಮಾಹಿತಿ ತನಿಖೆ ವೇಳೆ ಲಭ್ಯವಾಗಿದೆ.
ಸದ್ಯ ಬಂಧಿತರ ಬಗ್ಗೆ ಮಂಗಳೂರು ಕೋರ್ಟ್ಗೆ ಪೊಲೀಸರು ವರದಿ ನೀಡಿದ್ದಾರೆ. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಕಳೆದ ಎಂಟು ದಿನಗಳಿಂದ ಮೊಬೈಲ್ ಸ್ವಿಚ್ಚ್ ಆಫ್ ಮಾಡಿಕೊಂಡು ಆ್ಯಂಬುಲೆನ್ಸ್ ಚಾಲಕ ಜಲೀಲ್ ಬಾಬಾ ತಲೆಮರೆಸಿಕೊಂಡಿದ್ದಾನೆ. ಜಲೀಲ್ ಬಾಬಾ ಪತ್ತೆಗಾಗಿ ಶೋಧ ಕಾರ್ಯಾಚರಣೆ ನಡೆದಿದೆ.

