ಕನ್ನಡ ಚಿತ್ರರಂಗದ ಭರವಸೆಯ ನಟಿ ಅಮೃತಾ ಅಯ್ಯಂಗಾರ್ ಇಂದು ತಮ್ಮ ಜನ್ಮದಿನದ ಸಂಭ್ರಮದಲ್ಲಿದ್ದಾರೆ. ‘ಲವ್ ಮಾಕ್‌ಟೇಲ್’ ಮತ್ತು ‘ಬಡವ ರಾಸ್ಕಲ್’ಂತಹ ಸೂಪರ್ ಹಿಟ್ ಸಿನಿಮಾಗಳ ಮೂಲಕ ಕನ್ನಡಿಗರ ಮನಗೆದ್ದಿರುವ ಈ ನಟಿಗೆ ಅಭಿಮಾನಿಗಳು ಹಾಗೂ ಚಿತ್ರರಂಗದ ಗಣ್ಯರು ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಳೆ ಹರಿಸುತ್ತಿದ್ದಾರೆ.
2017ರಲ್ಲಿ ತೆರೆಕಂಡ ‘ಸಿಂಹ ಹಾಕಿದ ಹೆಜ್ಜೆ’ ಚಿತ್ರದ ಮೂಲಕ ಬಣ್ಣದ ಲೋಕಕ್ಕೆ ಕಾಲಿಟ್ಟ ಅಮೃತಾ, ಆರಂಭದಲ್ಲೇ ತಮ್ಮ ನಟನಾ ಕೌಶಲದಿಂದ ಗಮನ ಸೆಳೆದರು. ಆದರೆ ಅವರ ವೃತ್ತಿಜೀವನಕ್ಕೆ ಬಿಗ್ ಬ್ರೇಕ್ ಸಿಕ್ಕಿದ್ದು 2020ರಲ್ಲಿ ತೆರೆಗೆ ಬಂದ ‘ಲವ್ ಮಾಕ್‌ಟೇಲ್’ ಸಿನಿಮಾದಿಂದ. ಈ ಚಿತ್ರದಲ್ಲಿ ಜೋಶಿತಾ ಅಲಿಯಾಸ್ ಜೋ ಪಾತ್ರದಲ್ಲಿ ಅದ್ಭುತವಾಗಿ ನಟಿಸಿ ಸೈ ಎನಿಸಿಕೊಂಡರು. ಅದೇ ವರ್ಷ ಬಿಡುಗಡೆಯಾದ ‘ಪಾಪ್‌ಕಾರ್ನ್ ಮಂಕಿ ಟೈಗರ್’ ಸಿನಿಮಾ ಅವರ ಜನಪ್ರಿಯತೆಯನ್ನು ಮತ್ತಷ್ಟು ಹೆಚ್ಚಿಸಿತು.
ಡಾಲಿ ಧನಂಜಯ್ ಜೊತೆಗಿನ ಕಾಂಬಿನೇಷನ್ ಅಮೃತಾ ಅಯ್ಯಂಗಾರ್ ಅವರ ವೃತ್ತಿಬದುಕಿಗೆ ದೊಡ್ಡ ಪ್ಲಸ್ ಪಾಯಿಂಟ್ ಆಯಿತು. ‘ಪಾಪ್‌ಕಾರ್ನ್ ಮಂಕಿ ಟೈಗರ್’, ‘ಬಡವ ರಾಸ್ಕಲ್’ ಹಾಗೂ ‘ಗುರುದೇವ್ ಹೊಯ್ಸಳ’ ಚಿತ್ರಗಳಲ್ಲಿ ಈ ಜೋಡಿ ಪ್ರೇಕ್ಷಕರನ್ನು ಮೋಡಿ ಮಾಡಿದೆ. ‘ಬಡವ ರಾಸ್ಕಲ್’ ಸಿನಿಮಾದ ನಟನೆಗೆ ಅತ್ಯುತ್ತಮ ನಟಿ ವಿಮರ್ಶಕರ ಫಿಲ್ಮ್ ಫೇರ್ ಪ್ರಶಸ್ತಿ ಹಾಗೂ ಸೀಮಾ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.
ತಮ್ಮ ವೈವಿಧ್ಯಮಯ ಪಾತ್ರಗಳ ಮೂಲಕ ಸ್ಯಾಂಡಲ್‌ವುಡ್‌ನಲ್ಲಿ ನೆಲೆ ಕಂಡುಕೊಂಡಿರುವ ಅಮೃತಾ, ವಿಂಡೋ ಸೀಟ್, ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ ಸಿನಿಮಾಗಳಲ್ಲೂ ಸೈ ಎನಿಸಿಕೊಂಡಿದ್ದಾರೆ. ತೆಲುಗಿನ ‘ಜೀಬ್ರಾ’ ಚಿತ್ರದ ಮೂಲಕ ಅಕ್ಕಪಕ್ಕದ ಚಿತ್ರರಂಗಕ್ಕೂ ಕಾಲಿಟ್ಟಿರುವ ಇವರು, ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಅಪಾರ ಅಭಿಮಾನಿ ಬಳಗವನ್ನು ಹೊಂದಿರುವ ಈ ಪ್ರತಿಭಾವಂತ ನಟಿಗೆ ಮುಂಬರುವ ದಿನಗಳಲ್ಲಿ ಇನ್ನಷ್ಟು ಯಶಸ್ಸು ಸಿಗಲಿ ಎಂಬುದೇ ಅಭಿಮಾನಿಗಳ ಹಾರೈಕೆ.

