HomeKarnatakaದಯವಿಟ್ಟು ಯಾರೂ ನೈಸ್ ಟೋಲ್ ಕಟ್ಟಬೇಡಿ: ವಾಹನ ಸವಾರರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮನವಿ

ದಯವಿಟ್ಟು ಯಾರೂ ನೈಸ್ ಟೋಲ್ ಕಟ್ಟಬೇಡಿ: ವಾಹನ ಸವಾರರಿಗೆ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಮನವಿ

ಬೆಂಗಳೂರು: ಹೈಕೋರ್ಟ್ ತನ್ನ ತೀರ್ಪಿನಲ್ಲಿ ನೈಸ್ ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ಹೇಳಿದೆ. ಹೀಗಾಗಿ ಸರ್ಕಾರ ನೈಸ್ ಟೋಲ್ ಸಂಗ್ರಹವನ್ನು ಈ ಕೂಡಲೇ ನಿಲ್ಲಿಸಬೇಕು. ನಾನು ಸಾರ್ವಜನಿಕರಲ್ಲಿ, ವಾಹನಸವಾರರಲ್ಲಿ ಮನವಿ ಮಡುತ್ತಿದ್ದೇನೆ. ದಯವಿಟ್ಟು ಯಾರೂ ನೈಸ್ ಟೋಲ್ ಕಟ್ಟಬೇಡಿ ಎಂದು ಕೇಂದ್ರ ಸಚಿವ ಹೆಚ್​.ಡಿ. ಕುಮಾರಸ್ವಾಮಿ ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಹೆಚ್.ಡಿ.ಕುಮಾರಸ್ವಾಮಿ, ಜುಲೈ 28ರಂದು ನೈಸ್ ಯೋಜನೆ ಅಕ್ರಮ ಸಂಬಂಧ ಹೈಕೋರ್ಟ್ ದ್ವಿಸದಸ್ಯ ಪೀಠ ತೀರ್ಪು ನೀಡಿದೆ.‌ ತೀರ್ಪಿನಲ್ಲಿ ನೈಸ್ ಅಕ್ರಮವಾಗಿ ಟೋಲ್ ಸಂಗ್ರಹ ಮಾಡುತ್ತಿದೆ ಎಂದು ಹೇಳಿದೆ. ಹೀಗಾಗಿ ಸರ್ಕಾರ ನೈಸ್ ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು. ಸರ್ಕಾರ ತೀರ್ಮಾನ ಕೈಗೊಳ್ಳದೇ ಇದ್ದರೆ ನಾವು ಹೋರಾಟ ಮಾಡಲಿದ್ದೇವೆ.‌ ಜನರ ರಕ್ಷಣೆ ಮಾಡಬೇಕಾದ ಸರ್ಕಾರ ಖಾಸಗಿ ಸಂಸ್ಥೆಯೊಂದು ಈ ರೀತಿ ಲೂಟಿ ಮಾಡುವಾಗಲೂ ಏಕೆ ಸುಮ್ಮನಿದೆ ಎಂದು ಕೋರ್ಟ್ ಖಾರವಾಗಿ ಪ್ರಶ್ನಿಸಿದೆ. ರಾಜ್ಯ ಸರ್ಕಾರ ಏಕೆ ಸುಮ್ಮನಿದೆ?. ತಕ್ಷಣ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

1997ರಲ್ಲಿ ಬೆಂಗಳೂರು ಮೈಸೂರು ನಡುವೆ ಹೆದ್ದಾರಿ ಮಾಡುವ ಯೋಜನೆ ಇದಾಗಿದೆ.‌ ದೇವೇಗೌಡರು ಸಿಎಂ ಆಗಿದ್ದಾಗ ಪ್ರಾಥಮಿಕ ಒಪ್ಪಂದ ಆಗಿತ್ತು.‌ ಬಳಿಕ ದೇವೇಗೌಡರು ಪ್ರಧಾನಿಯಾದರು. ಅದಾದ ಬಳಿಕ ಈ ವಿಚಾರವಾಗಿ ಹಲವು ಬೆಳವಣಿಗೆಗಳು ಆಯ್ತು.‌ ನೈಸ್ ಕಂಪನಿ ಅವರಿಗೆ ಬೇಕಾಬಿಟ್ಟಿ ರೀತಿಯಲ್ಲಿ ಅಧಿಕಾರಿಗಳು, ಸರ್ಕಾರದವರು ಹಣ ಮಾಡಲು, ರೈತರ ಭೂಮಿ ಲಪಾಟಾಯಿಸಲು, ಕೆರೆ ಕಟ್ಟೆ ನುಂಗಿ ಹಾಕಲು ಅನುವು ಮಾಡಿದ್ದಾರೆ. ನೈಸ್ ರಸ್ತೆ ಹೆಸರಲ್ಲಿ ಐದು ಟೌನ್ ಶಿಪ್, ಪೆರಿಫರೆಲ್ ರಿಂಗ್ ರಸ್ತೆಗಳು ಒಳಗೊಂಡಿದೆ. ನೈಸ್ ಯೋಜನೆ ವಿಚಾರವಾಗಿ ಹೈಕೋರ್ಟ್ ತೀರ್ಪು ನೀಡಿದೆ.‌ 150 ಅರ್ಜಿಗಳು ಈ ಪ್ರಕರಣ ಸಂಬಂಧ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿತ್ತು.‌ ನೈಸ್ ಸಂಸ್ಥೆ ಸಂವಿಧಾನದ ವ್ಯವಸ್ಥೆಯ ದಾರಿ ತಪ್ಪಿಸಿ, ಸುಳ್ಳು ದಾಖಲೆ ಸೃಷ್ಟಿಸಿ ಆರಂಭದಲ್ಲಿ ತೀರ್ಪುಗಳನ್ನು ತಮ್ಮ ಪರವಾಗಿ ಪಡೆದಿದ್ದರು ಎಂದು ವಿವರಿಸಿದರು.

ಫ್ರೇಮ್ ವರ್ಕ್ ಒಪ್ಪಂದ ಪ್ರಕಾರ ಕೆಲಸ ಮಾಡಿ ಅಂತ ಇದ್ದಿದ್ದು. ಆದರೆ ನೈಸ್ ಸಂಸ್ಥೆ ಅದನ್ನು ಪಾಲನೆ ಮಾಡಿಲ್ಲ. ಇದು ಕರ್ನಾಟಕ ರಾಜ್ಯದ ಇತಿಹಾಸದಲ್ಲಿ ದೊಡ್ಡ ಹಗರಣ ಎಂದು ಕೋರ್ಟ್ ಹೇಳಿದೆ.‌ ಯೋಜನೆ ಹೆಸರಲ್ಲಿ 20 ಸಾವಿರ ಎಕರೆ ಲ್ಯಾಂಡ್ ಬ್ಯಾಂಕ್ ಇಟ್ಟು ಕೊಳ್ಳಲಾಗಿದೆ. ಟೋಲ್ ಸಂಗ್ರಹ ಮಾಡಿದಾಗ ಯಾವುದೇ ಮಾನದಂಡವನ್ನು ಪಾಲನೆ ಮಾಡಿಲ್ಲ. ಇದೆಲ್ಲ ಕಾನೂನು ಬಾಹಿರ ಅಂದಿದೆ. ಆದರೆ ಈವರೆಗೆ ಸರ್ಕಾರ ಮೌನಕ್ಕೆ ಶರಣಾಗಿದೆ. ಯಾರಾದರೂ ಒಂದು ರೂಪಾಯಿ ಲಂಚ ಕೇಳಿದರೂ ಕರೆ ಮಾಡಿ ಎಂದು ಸಿಎಂ ಹೇಳಿದ್ದಾರೆ. ಈ ನೈಸ್ ಸಂಸ್ಥೆಯ ದರೋಡೆ ನಿಮಗೆ ಕಾಣಿಸುತ್ತಿಲ್ಲವೇ?. ಇದಕ್ಕಿಂತ ದೊಡ್ಡದು ಬೇಕಾ ಭ್ರಷ್ಟಾಚಾರ?. ಟೋಲ್ ಸಂಗ್ರಹವನ್ನು ನಿಲ್ಲಿಸಬೇಕು ಎಂದು ಹೈಕೋರ್ಟ್ ಹೇಳಿದೆ. ಈ ಸರ್ಕಾರಕ್ಕೆ ಒಂದು ಗಡುವು ಕೊಡಲು ನಾನು ತೀರ್ಮಾನ ಮಾಡಿದ್ದೇನೆ ಎಂದು ತಿಳಿಸಿದರು.

ನೈಸ್ ಟೋಲ್​​ನ್ನು ಇಂದಿನಿಂದಲೇ ಕಟ್ಟ ಬೇಡಿ.‌ ನಾನು ರಾಜ್ಯದ ಯುವ ಜನರಿಗೆ ಕರೆ ಕೊಡುತ್ತೇನೆ.‌ ಲೋಕಸಭೆಯಲ್ಲಿ ಕಾಂಗ್ರೆಸ್ ಕಲಾಪ ನಡೆಸಲು ಬಿಡುತ್ತಿಲ್ಲ. ಅದ್ಯಾವುದೋ ಜೆನ್ ಝೀ ಅಂತ ಯುವಕರು ಮುಷ್ಕರ ಮಾಡಿದ್ದಾರೆ ಅಂತ ಹೇಳಿ ಸದನ ನಡೆಯಲು ಬಿಡುತ್ತಿಲ್ಲ.‌ ಇಂದು ಇಲ್ಲಿ ಲೂಟಿ ಆಗುತ್ತಿದೆ.‌ ಇಂಥ ಹಗಲು ದರೋಡೆಗೆ ಮೌನಕ್ಕೆ ಶರಣಾಗಬೇಡಿ.‌ ಕೋರ್ಟ್ ಈ ಬಗ್ಗೆ ತೀರ್ಪು ಕೊಟ್ಟಿದೆ. ಇದರ ವಿರುದ್ಧ ದನಿ ಎತ್ತಬೇಕು. ಯುವಕರಿಗೆ, ರೈತರಿಗೆ ನಾನು ಕರೆ ಕೊಡುತ್ತಿದ್ದೇನೆ. ಎದ್ದು ಹೋರಾಟ ಮಾಡಿ.‌ ಇಂಥ ಅಕ್ರಮ‌ ನಿಲ್ಲಿಸದೇ ಇದ್ದರೆ ರಾಜ್ಯದ ಭವಿಷ್ಯ ಎಲ್ಲಿಗೆ ಹೋಗುತ್ತದೆ?. ಬೆಂಗಳೂರು ನಾಗರಿಕರಿಗೆ, ನಾಡಿನ‌ಯುವಕರಿಗೆ, ರೈತರಿಗೆ ನಾನು ಈ ಬಗ್ಗೆ ಮನವಿ ಮಾಡುತ್ತೇನೆ. ಈ ಸಂಬಂಧ ಸರ್ಕಾರಕ್ಕೆ ವಿಸ್ತೃತ ಪತ್ರವನ್ನೂ ಬರೆಯುತ್ತೇನೆ.‌ ಒಂದು ವಾರ ಕಾಯುತ್ತೇನೆ. ಆ ಮೇಲೆ ಯಾವ ರೀತಿ ಹೋರಾಟ ಮಾಡಬೇಕು ಎಂದು ತೀರ್ಮಾನಿಸುತ್ತೇವೆ ಎಂದರು.

ಟಿ.ಬಿ.ಜಯಚಂದ್ರ ಅವರೇ ನೈಸ್ ಮೇಲಿನ ಸದನ‌ ಸಮಿತಿ ಅಧ್ಯಕ್ಷರಾಗಿ ವರದಿ ಸಲ್ಲಿಸುತ್ತಾರೆ. ಆ ವರದಿಯಲ್ಲಿ ನೈಸ್ ಸಂಸ್ಥೆ ಹಗರಣದ ವರದಿ ನೀಡಿದ್ದಾರೆ. ಸಿಬಿಐ ತನಿಖೆಗೆ ಕೊಡಬೇಕು.‌ ನೈಸ್ ಸಂಸ್ಥೆ ಕೆಲಸ ರದ್ದು ಮಾಡಬೇಕು. ಭೂಮಿ ವಾಪಸ್​​ ಪಡೆಯಬೇಕು ಎಂದು ವರದಿ ನೀಡಿದ್ದರು. ಸಿಎಂ ಆಗಿ ವಿಧಾನಸೌಧಕ್ಕೆ ನಮಸ್ಕರಿಸಿ ಪ್ರವೇಶಿಸಿದ ಡಿ.ಕೆ.ಶಿವಕುಮಾರ್ ಅವರು ಈ ಹೈಕೋರ್ಟ್ ತೀರ್ಪಿನ ಬಗ್ಗೆ ಏನು ಹೇಳುತ್ತಾರೆ?. ರೈತರು ಭೂಮಿ ಕಳೆದುಕೊಂಡು 20 ವರ್ಷ ಕಳೆದಿದೆ. ಆದರೆ ಕೆಐಎಡಿಬಿ ಇನ್ನೂ ರೈತರಿಗೆ ಪರಿಹಾರ ಹಣ ನೀಡಿಲ್ಲ. ರೈತರು ನೈಸ್ ಸಂಸ್ಥೆಗೆ ತಮ್ಮ ಜಮೀನನ್ನು ಬರೆದುಕೊಟ್ಟಿದ್ದಾರೆ. ನೈಸ್ ಸಂಸ್ಥೆ ಭೂಮಿಗಳನ್ನು ಸಿಕ್ಕಸಿಕ್ಕವರಿಗೆ ಮಾರಾಟ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದರು.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular