ಮನೆಯ ಮುಂಭಾಗದಲ್ಲೇ ಅಕ್ಕನೊಂದಿಗೆ ಆಟವಾಡುತ್ತಿದ್ದ ಕೇವಲ ಎರಡು ವರ್ಷದ ಮುಗ್ಧ ಹೆಣ್ಣು ಮಗುವಿನ ಮೇಲೆ ಅತಿವೇಗದಿಂದ ಬಂದ ಕಾರೊಂದು ಹರಿದ ಪರಿಣಾಮ, ಮಗು ಸ್ಥಳದಲ್ಲೇ ದಾರುಣವಾಗಿ ಮೃತಪಟ್ಟಿರುವ ಕರುಳುಹಿಂಡುವ ಘಟನೆ ಹರಿಯಾಣದ ಗುರುಗ್ರಾಮದ ಆರನೇ ಸೆಕ್ಟರ್‌ನಲ್ಲಿ ನಡೆದಿದೆ.
ಅದ್ರಿಜಾ ತಿವಾರಿ ಮೃತಪಟ್ಟ ಪುಟ್ಟ ಬಾಲಕಿ. ಮಗುವಿನ ನಾಲ್ಕು ವರ್ಷದ ಅಕ್ಕ ಸಣ್ಣಪುಟ್ಟ ಗಾಯಗಳೊಂದಿಗೆ ಪವಾಡಸದೃಶವಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಘಟನೆಗೆ ಕಾರಣನಾದ ಅದೇ ಬಡಾವಣೆಯ ಮೂವತ್ತು ವರ್ಷದ ಕಾರು ಚಾಲಕನನ್ನು ಪೊಲೀಸರು ಬಂಧಿಸಿದ್ದಾರೆ.
ಪೊಲೀಸರ ಮಾಹಿತಿ ಪ್ರಕಾರ, ಸೋಮವಾರ ರಾತ್ರಿ ಒಂಬತ್ತು ಗಂಟೆಯ ಸುಮಾರಿಗೆ ಇಬ್ಬರು ಪುಟ್ಟ ಹೆಣ್ಣುಮಕ್ಕಳು ತಮ್ಮ ಮನೆಯ ಎದುರಿನ ರಸ್ತೆಯಲ್ಲಿ ಆಟವಾಡುತ್ತಿದ್ದರು. ಮಕ್ಕಳ ತಾಯಿ ಪೂಜಾ ದುಬೆ ಅವರು ಕೇವಲ ಒಂದೆರಡು ಅಡಿ ದೂರದಲ್ಲೇ ನಿಂತು ನೆರೆಹೊರೆಯ ಮಹಿಳೆಯೊಂದಿಗೆ ಮಾತನಾಡುತ್ತಿದ್ದರು. ಈ ವೇಳೆ ರಸ್ತೆಯಲ್ಲಿ ವೇಗವಾಗಿ ಬಂದ ಕಾರು, ಬಲಕ್ಕೆ ತಿರುವು ತೆಗೆದುಕೊಳ್ಳುವ ಸಂದರ್ಭದಲ್ಲಿ ರಸ್ತೆಯಲ್ಲಿದ್ದ ಕಿರಿಯ ಬಾಲಕಿ ಅದ್ರಿಜಾ ಮೇಲೆ ನೇರವಾಗಿ ಹರಿದಿದೆ. ತಕ್ಷಣವೇ ಮಗುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ಕೊಂಡೊಯ್ಯಲಾಯಿತಾದರೂ, ಪರೀಕ್ಷಿಸಿದ ವೈದ್ಯರು ಮಗು ಅದಾಗಲೇ ಮೃತಪಟ್ಟಿದೆ ಎಂದು ಘೋಷಿಸಿದ್ದಾರೆ.
ಈ ಭೀಕರ ಅಪಘಾತದ ದೃಶ್ಯಗಳು ಸಮೀಪದ ವಿವಿಧ ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿವೆ. ಮಕ್ಕಳು ರಸ್ತೆಯಲ್ಲಿ ಆಡುತ್ತಿರುವುದು, ವೇಗವಾಗಿ ಬಂದ ಕಾರು ಮಗುವಿಗೆ ಡಿಕ್ಕಿ ಹೊಡೆದು ಮೇಲೆ ಹರಿಯುವುದು ಮತ್ತು ತಾಯಿ ಕಿರುಚುತ್ತಾ ಓಡಿಬಂದು ಮಗುವನ್ನು ಎತ್ತಿಕೊಳ್ಳುವ ದೃಶ್ಯಗಳು ಕ್ಯಾಮೆರಾದಲ್ಲಿ ದಾಖಲಾಗಿವೆ.
ಮಗುವಿನ ತಂದೆ ವೀರೇಂದ್ರ ತಿವಾರಿ ಅವರ ಪ್ರಕಾರ, ಅಪಘಾತ ನಡೆಯುವುದಕ್ಕೂ ಕೇವಲ ಐದು ನಿಮಿಷಗಳ ಹಿಂದಷ್ಟೇ ಇದೇ ಕಾರು ಆ ರಸ್ತೆಯಲ್ಲಿ ಹಾದುಹೋಗಿತ್ತು. ಆ ಸಂದರ್ಭದಲ್ಲಿ ತಾಯಿ ಮಕ್ಕಳನ್ನು ರಸ್ತೆಯಿಂದ ಪಕ್ಕಕ್ಕೆ ಎಳೆದುಕೊಂಡಿದ್ದರು. ಆ ತಿರುವಿನಲ್ಲಿ ಮಕ್ಕಳು ಆಡುತ್ತಿದ್ದಾರೆ ಎಂಬುದು ತಿಳಿದಿದ್ದರೂ ಚಾಲಕ ಎರಡನೇ ಬಾರಿ ಮತ್ತಷ್ಟು ವೇಗವಾಗಿ ಕಾರು ಚಲಾಯಿಸಿಕೊಂಡು ಬಂದಿದ್ದೇ ಈ ದುರಂತಕ್ಕೆ ಕಾರಣ ಎಂದು ತಂದೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಪಘಾತ ಸಂಭವಿಸಿದ ಕೇವಲ ಒಂದು ನಿಮಿಷದಲ್ಲೇ ಮಗು ಪ್ರಾಣ ಬಿಟ್ಟಿದೆ ಎಂದು ಅವರು ಕಣ್ಣೀರಿಟ್ಟಿದ್ದಾರೆ.
ಕಾರು ತಿರುವು ತೆಗೆದುಕೊಳ್ಳುವ ವೇಳೆ ಚಾಲಕ ಮೊಬೈಲ್ ನೋಡುತ್ತಿದ್ದನೋ ಅಥವಾ ಬೇರೆಡೆ ಗಮನ ಹರಿಸಿದ್ದನೋ ಎಂಬ ಸಂಶಯ ವ್ಯಕ್ತವಾಗಿದೆ. ಕತ್ತಲೆಯ ಕಾರಣದಿಂದ ಮಕ್ಕಳು ಕಾಣಿಸಲಿಲ್ಲ ಎಂದು ಆರೋಪಿ ಹೇಳಿಕೊಂಡಿದ್ದರೂ, ರಸ್ತೆಯಲ್ಲಿ ಬೀದಿ ದೀಪಗಳು ಸರಿಯಾಗಿದ್ದವು ಮತ್ತು ಸಿಸಿಟಿವಿಯಲ್ಲಿ ಎಲ್ಲವೂ ಸ್ಪಷ್ಟವಾಗಿ ಕಾಣುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ತಪಾಸಣೆಯ ವೇಳೆ ಚಾಲಕ ಮದ್ಯ ಸೇವಿಸಿರಲಿಲ್ಲ ಎಂಬುದು ದೃಢಪಟ್ಟಿದೆ.
ಗುರುಗ್ರಾಮದ ಐದನೇ ಸೆಕ್ಟರ್ ಪೊಲೀಸ್ ಠಾಣೆಯಲ್ಲಿ ಅತಿವೇಗ ಮತ್ತು ನಿರ್ಲಕ್ಷ್ಯದ ಚಾಲನೆಯ ಆರೋಪದಡಿ ಭಾರತೀಯ ನ್ಯಾಯ ಸಂಹಿತೆಯ ವಿವಿಧ ಸೆಕ್ಷನ್‌ಗಳ ಪ್ರಕಾರ ಪ್ರಕರಣ ದಾಖಲಾಗಿದ್ದು, ಕಾರನ್ನು ಜಪ್ತಿ ಮಾಡಿರುವ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

