HomeIndiaSHOCKING: ಶಾಲಾ ಬಾಲಕಿಯರಿಗೆ ಮೂತ್ರ ಕುಡಿಸಿದ ಪುಂಡ ವಿದ್ಯಾರ್ಥಿ ; ದೂರು ಕೊಟ್ಟವರಿಗೆ ಚಾಕೋಲೆಟ್‌ ತಿನ್ನಿ...

SHOCKING: ಶಾಲಾ ಬಾಲಕಿಯರಿಗೆ ಮೂತ್ರ ಕುಡಿಸಿದ ಪುಂಡ ವಿದ್ಯಾರ್ಥಿ ; ದೂರು ಕೊಟ್ಟವರಿಗೆ ಚಾಕೋಲೆಟ್‌ ತಿನ್ನಿ ಎಂದ ಶಿಕ್ಷಕ !

ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದೆ. ಸರ್ಕಾರಿ ಪ್ರಾಥಮಿಕ ಶಾಲೆಯೊಂದರಲ್ಲಿ ಐದನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನೊಬ್ಬ, ತನ್ನ ಸಹಪಾಠಿಯಾದ ಇಬ್ಬರು ಬಾಲಕಿಯರಿಗೆ ನೀರಿನ ಬಾಟಲಿಯಲ್ಲಿ ಮೂತ್ರ ತುಂಬಿ ಕುಡಿಸಿರುವ ಅಮಾನವೀಯ ಕೃತ್ಯ ಎಸಗಿದ್ದಾನೆ. ಅಷ್ಟೇ ಅಲ್ಲದೆ, ಈ ಬಗ್ಗೆ ಅಳುತ್ತಾ ದೂರು ನೀಡಲು ಹೋದ ವಿದ್ಯಾರ್ಥಿನಿಯರಿಗೆ ಶಾಲೆಯ ಮುಖ್ಯೋಪಾಧ್ಯಾಯರು “ಬಾಯಿ ಕೆಟ್ಟಿದ್ರೆ ಚಾಕೋಲೇಟ್ ತಿನ್ರಿ” ಎಂದು ಜವಾಬ್ದಾರಿಯಿಲ್ಲದೆ ವರ್ತಿಸಿರುವುದು ಪೋಷಕರ ಹಾಗೂ ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

ಅರೋನ್ ವಲಯದ ಗುಣಾ ಜಿಲ್ಲೆಯಲ್ಲಿರುವ ಸರ್ಕಾರಿ ಶಾಲೆಯಲ್ಲಿ ಸೋಮವಾರ ಈ ಘಟನೆ ನಡೆದಿದೆ. ತರಗತಿಯಲ್ಲಿ ಕುಡಿಯುವ ನೀರಿನ ಬಾಟಲಿ ವಿಚಾರವಾಗಿ ನಡೆದ ಈ ಕೃತ್ಯದ ಬಗ್ಗೆ ಸಂತ್ರಸ್ತ ಬಾಲಕಿಯರು ತಕ್ಷಣವೇ ಶಾಲೆಯ ಮುಖ್ಯೋಪಾಧ್ಯಾಯರ ಬಳಿ ತೆರಳಿ ಗೋಳು ತೋಡಿಕೊಂಡಿದ್ದಾರೆ. ಆದರೆ ಮಕ್ಕಳ ಅಳಲಿಗೆ ಸ್ಪಂದಿಸಬೇಕಿದ್ದ ಮುಖ್ಯೋಪಾಧ್ಯಾಯರು, ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸದೆ ಅತ್ಯಂತ ನಿರ್ಲಕ್ಷ್ಯದಿಂದ ಮಾತನಾಡಿದ್ದಾರೆ. ಇದರಿಂದ ನೊಂದ ವಿದ್ಯಾರ್ಥಿನಿಯರು ತಮ್ಮ ಮನೆಯಲ್ಲಿ ಈ ವಿಷಯ ತಿಳಿಸಿದ್ದು, ಮಂಗಳವಾರ ಬೆಳಗ್ಗೆ ಆಕ್ರೋಶಗೊಂಡ ಪೋಷಕರು ಹಾಗೂ ಸ್ಥಳೀಯ ಗ್ರಾಮಸ್ಥರು ಶಾಲೆಗೆ ಮುತ್ತಿಗೆ ಹಾಕಿ ಭಾರೀ ಪ್ರತಿಭಟನೆ ನಡೆಸಿದ್ದಾರೆ.

ಘಟನೆಯ ಗಂಭೀರತೆಯನ್ನು ಪರಿಗಣಿಸಿರುವ ಜಿಲ್ಲಾಧಿಕಾರಿ ಕಿಶೋರ್ ಕುಮಾರ್ ಕನ್ಯಾಲ್ ಅವರು ತಕ್ಷಣವೇ ತನಿಖೆಗೆ ಆದೇಶಿಸಿದ್ದು, ಬ್ಲಾಕ್ ಶಿಕ್ಷಣಾಧಿಕಾರಿ (BEO) ಹಾಗೂ ತಹಶೀಲ್ದಾರ್ ಅವರನ್ನು ಶಾಲೆಗೆ ಕಳುಹಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕೃತ್ಯದಲ್ಲಿ ಕೇವಲ ಒಬ್ಬನೇ ಅಲ್ಲದೆ ಇನ್ನೂ ಕೆಲ ವಿದ್ಯಾರ್ಥಿಗಳು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದ್ದು, ಆ ಬಾಲಕ ಹಾಗೂ ಆತನ ಪೋಷಕರನ್ನು ಶಾಲೆಗೆ ಕರೆಸಲಾಗಿದೆ. ಕರ್ತವ್ಯಲೋಪವೆಂದು ಪರಿಗಣಿಸಿ ಮುಖ್ಯೋಪಾಧ್ಯಾಯರಿಗೆ ಅಧಿಕೃತ ನೋಟಿಸ್ ಜಾರಿ ಮಾಡಲಾಗಿದ್ದು, ಎರಡು ದಿನದೊಳಗೆ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಂಗಳವಾರ ಮಧ್ಯಾಹ್ನದ ವೇಳೆಗೆ ಶಾಲೆಯ ಮುಂದೆ ಸೇರಿದ್ದ ಗ್ರಾಮಸ್ಥರು ತಪ್ಪಿತಸ್ಥ ವಿದ್ಯಾರ್ಥಿಗಳ ವಿರುದ್ಧ ಮತ್ತು ಬೇಜವಾಬ್ದಾರಿಯಿಂದ ವರ್ತಿಸಿದ ಮುಖ್ಯೋಪಾಧ್ಯಾಯರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಘೋಷಣೆಗಳನ್ನು ಕೂಗಿದರು. ಪರಿಸ್ಥಿತಿ ವಿಕೋಪಕ್ಕೆ ತಿರುಗುತ್ತಿದ್ದಂತೆ ಸ್ಥಳಕ್ಕೆ ಭಾರಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಯಿತು. ಆಡಳಿತಾಧಿಕಾರಿಗಳು ನೇರವಾಗಿ ಸಂತ್ರಸ್ತ ಬಾಲಕಿಯರು, ಅವರ ಪೋಷಕರು ಹಾಗೂ ಆರೋಪಿ ವಿದ್ಯಾರ್ಥಿಗಳಿಂದ ಪ್ರತ್ಯೇಕವಾಗಿ ಹೇಳಿಕೆಗಳನ್ನು ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮಕ್ಕೆ ಸಿದ್ಧತೆ ನಡೆಸಿದ್ದಾರೆ. ಶಾಲಾ ಮಕ್ಕಳ ಸುರಕ್ಷತೆಯ ಮೇಲೆಯೇ ದೊಡ್ಡ ಪ್ರಶ್ನೆ ಹುಟ್ಟುಹಾಕಿರುವ ಈ ಘಟನೆ ಸ್ಥಳೀಯವಾಗಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular