HomeLatest Newsದಕ್ಷಿಣ ಆಫ್ರಿಕಾ ಸರಣಿಗೆ ಆಸ್ಟ್ರೇಲಿಯಾ ಟೆಸ್ಟ್ ಪಡೆ ಪ್ರಕಟ: ಫಾರ್ಮ್‌ನಲ್ಲಿ ಇಲ್ಲದಿದ್ದರೂ ಲಬುಶೇನ್‌ಗೆ ದಕ್ಕಿತು ಸ್ಥಾನ!

ದಕ್ಷಿಣ ಆಫ್ರಿಕಾ ಸರಣಿಗೆ ಆಸ್ಟ್ರೇಲಿಯಾ ಟೆಸ್ಟ್ ಪಡೆ ಪ್ರಕಟ: ಫಾರ್ಮ್‌ನಲ್ಲಿ ಇಲ್ಲದಿದ್ದರೂ ಲಬುಶೇನ್‌ಗೆ ದಕ್ಕಿತು ಸ್ಥಾನ!

ಮುಂದಿನ ತಿಂಗಳು ದಕ್ಷಿಣ ಆಫ್ರಿಕಾ ವಿರುದ್ಧ ನಡೆಯಲಿರುವ ಮೂರು ಪಂದ್ಯಗಳ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಸರಣಿಗಾಗಿ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿಯು 16 ಸದಸ್ಯರ ಬಲವಾದ ತಂಡವನ್ನು ಘೋಷಿಸಿದೆ. ವೇಗದ ಬೌಲಿಂಗ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿರುವ ಈ ತಂಡದಲ್ಲಿ, ದೀರ್ಘಕಾಲದಿಂದ ಬ್ಯಾಟಿಂಗ್ ಫಾರ್ಮ್ ಕೊರತೆಯಿಂದ ಬಳಲುತ್ತಿರುವ ಮಾರ್ನಸ್ ಲಬುಶೇನ್ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ವರ್ಷ ಲಾರ್ಡ್ಸ್‌ನಲ್ಲಿ ನಡೆದಿದ್ದ ವಿಶ್ವ ಟೆಸ್ಟ್ ಚಾಂಪಿಯನ್‍ಶಿಪ್ ಫೈನಲ್ ಪಂದ್ಯದ ನಂತರ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ತಂಡಗಳು ಮುಖಾಮುಖಿಯಾಗುತ್ತಿರುವುದು ಇದೇ ಮೊದಲ ಬಾರಿಯಾಗಿದೆ. ಮುಂದಿನ ವರ್ಷ ದಿ ಓವಲ್‌ನಲ್ಲಿ ನಡೆಯಲಿರುವ ಫೈನಲ್ ತಲುಪಲು ಈ ಸರಣಿಯ ಫಲಿತಾಂಶ ಎರಡೂ ತಂಡಗಳಿಗೆ ಅತ್ಯಂತ ನಿರ್ಣಾಯಕವಾಗಿದೆ.

ಲಬುಶೇನ್‌ಗೆ ಮತ್ತೊಂದು ಅವಕಾಶ

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಲಬುಶೇನ್ ಜುಲೈ 2023ರ ನಂತರ ಯಾವುದೇ ಶತಕ ಬಾರಿಸಿಲ್ಲ. ಕಳೆದ 22 ಟೆಸ್ಟ್ ಪಂದ್ಯಗಳಲ್ಲಿ ಅವರ ಬ್ಯಾಟಿಂಗ್ ಸರಾಸರಿ 30ಕ್ಕಿಂತ ಕಡಿಮೆಯಿದೆ. ಹೀಗಿದ್ದರೂ ಆಯ್ಕೆಗಾರರು ಅವರ ಅನುಭವದ ಮೇಲೆ ಭರವಸೆ ಇಟ್ಟು ತಂಡದಲ್ಲಿ ಕಾಯ್ದುಕೊಂಡಿದ್ದಾರೆ. ಸ್ಟೀವ್ ಸ್ಮಿತ್, ಟ್ರಾವಿಸ್ ಹೆಡ್, ಮ್ಯಾಥ್ಯೂ ರೇನ್‌ಶಾ ಹಾಗೂ ಆಲ್‌ರೌಂಡರ್‌ಗಳಾದ ಕ್ಯಾಮೆರಾನ್ ಗ್ರೀನ್ ಮತ್ತು ಬ್ಯೂ ವೆಬ್‌ಸ್ಟರ್ ಬ್ಯಾಟಿಂಗ್ ವಿಭಾಗವನ್ನು ಬಲಪಡಿಸಲಿದ್ದಾರೆ.

ದಕ್ಷಿಣ ಆಫ್ರಿಕಾದ ಪಿಚ್‌ಗಳ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮೈಕಲ್ ನೇಸರ್, ಮ್ಯಾಥ್ಯೂ ಕುಹ್ನೆಮನ್ ಮತ್ತು ಕೂಪರ್ ಕಾನೊಲಿ ಅವರನ್ನು ಹೊಸದಾಗಿ ತಂಡಕ್ಕೆ ಸೇರ್ಪಡೆಗೊಳಿಸಲಾಗಿದೆ.

ಆಸ್ಟ್ರೇಲಿಯಾ ತಂಡವು 2018ರ ನಂತರ ಮೊದಲ ಬಾರಿಗೆ ಟೆಸ್ಟ್ ಸರಣಿಗಾಗಿ ದಕ್ಷಿಣ ಆಫ್ರಿಕಾಕ್ಕೆ ಪ್ರವಾಸ ಬೆಳೆಸುತ್ತಿದೆ. ಪ್ರಸ್ತುತ ತಂಡದಲ್ಲಿರುವ ನಾಯಕ ಪ್ಯಾಟ್ ಕಮಿನ್ಸ್, ಜೋಶ್ ಹ್ಯಾಝಲ್‌ವುಡ್, ಮಿಚೆಲ್ ಸ್ಟಾರ್ಕ್, ಸ್ಟೀವ್ ಸ್ಮಿತ್ ಮತ್ತು ರೇನ್‌ಶಾ ಮಾತ್ರ ಈ ಹಿಂದೆ ದಕ್ಷಿಣ ಆಫ್ರಿಕಾ ಪ್ರವಾಸ ಮಾಡಿದ ಅನುಭವ ಹೊಂದಿದ್ದಾರೆ.

ತಂಡದ ಸಮತೋಲನಕ್ಕೆ ಆದ್ಯತೆ

ಕಡಿಮೆ ಅವಧಿಯಲ್ಲಿ ಮೂರು ಟೆಸ್ಟ್ ಪಂದ್ಯಗಳು ನಡೆಯಲಿದ್ದು, ಪ್ರತಿಯೊಂದು ಪಂದ್ಯಕ್ಕೂ ಅಗತ್ಯವಿರುವ ಬೌಲಿಂಗ್ ಮತ್ತು ಬ್ಯಾಟಿಂಗ್ ಸಮತೋಲನವನ್ನು ಕಾಯ್ದುಕೊಳ್ಳಲು ಈ 16 ಆಟಗಾರರ ಬಳಗ ನೆರವಾಗಲಿದೆ ಎಂದು ಆಯ್ಕೆ ಸಮಿತಿಯ ಅಧ್ಯಕ್ಷ ಜಾರ್ಜ್ ಬೈಲಿ ತಿಳಿಸಿದ್ದಾರೆ.

ಪ್ರಸ್ತುತ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿ ಯಲ್ಲಿ ಆಸ್ಟ್ರೇಲಿಯಾ ಮೊದಲ ಸ್ಥಾನದಲ್ಲಿದ್ದರೆ, ಹಾಲಿ ಚಾಂಪಿಯನ್ ದಕ್ಷಿಣ ಆಫ್ರಿಕಾ ಎರಡನೇ ಸ್ಥಾನದಲ್ಲಿದೆ.

ಆಸ್ಟ್ರೇಲಿಯಾ ತಂಡ

ಪ್ಯಾಟ್ ಕಮಿನ್ಸ್ (ನಾಯಕ), ಸ್ಕಾಟ್ ಬೋಲ್ಯಾಂಡ್, ಅಲೆಕ್ಸ್ ಕ್ಯಾರಿ, ಕೂಪರ್ ಕಾನೊಲಿ, ಕ್ಯಾಮೆರಾನ್ ಗ್ರೀನ್, ಜೋಶ್ ಹ್ಯಾಝಲ್‌ವುಡ್, ಟ್ರಾವಿಸ್ ಹೆಡ್, ಜೋಶ್ ಇಂಗ್ಲಿಷ್, ಮ್ಯಾಥ್ಯೂ ಕುಹ್ನೆಮನ್, ಮಾರ್ನಸ್ ಲಬುಶೇನ್, ನಾಥನ್ ಲಿಯಾನ್, ಮೈಕಲ್ ನೇಸರ್, ಮ್ಯಾಥ್ಯೂ ರೇನ್‌ಶಾ, ಸ್ಟೀವ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಬ್ಯೂ ವೆಬ್‌ಸ್ಟರ್.

ಪಂದ್ಯಗಳ ವೇಳಾಪಟ್ಟಿ

  • ಮೊದಲ ಟೆಸ್ಟ್: ಅಕ್ಟೋಬರ್ 9 ರಿಂದ 13 (ಡರ್ಬನ್)

  • ಎರಡನೇ ಟೆಸ್ಟ್: ಅಕ್ಟೋಬರ್ 18 ರಿಂದ 22 (ಗೆಬರ್ಹಾ)

  • ಮೂರನೇ ಟೆಸ್ಟ್: ಅಕ್ಟೋಬರ್ 27 ರಿಂದ 31 (ಜೋಹಾನ್ಸ್‌ಬರ್ಗ್)

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular