HomeCrimeವಿಚ್ಛೇದನ ಕೇಸ್ ವಾಪಸ್ ಪಡೆಯಲು ಪತ್ನಿ ಮೇಲೆ ಹಲ್ಲೆ? ಮಾಜಿ ಶಾಸಕನ ಅಮಾನವೀಯ ಕೃತ್ಯ ಕ್ಯಾಮೆರಾದಲ್ಲಿ...

ವಿಚ್ಛೇದನ ಕೇಸ್ ವಾಪಸ್ ಪಡೆಯಲು ಪತ್ನಿ ಮೇಲೆ ಹಲ್ಲೆ? ಮಾಜಿ ಶಾಸಕನ ಅಮಾನವೀಯ ಕೃತ್ಯ ಕ್ಯಾಮೆರಾದಲ್ಲಿ ಸೆರೆ | Watch

ಸಮಾಜವಾದಿ ಪಕ್ಷದ ಮಾಜಿ ಶಾಸಕ ಹಾಗೂ ವಿವಾದಿತ ನಾಯಕ ಶ್ರೀಭಗವಾನ್ ಶರ್ಮಾ ಅಲಿಯಾಸ್ ಗುಡ್ಡು ಪಂಡಿತ್, ತಮ್ಮ ಮೂರನೇ ಪತ್ನಿ ಹಾಗೂ ಕಾಂಗ್ರೆಸ್ ಮಹಿಳಾ ಸಭಾದ ರಾಜ್ಯ ಉಪಾಧ್ಯಕ್ಷೆ ಅರ್ಚನಾ ಪಂಡಿತ್ ಅವರ ಮೇಲೆ ಮನೆಯೊಳಗೆ ನುಗ್ಗಿ ಅಮಾನವೀಯವಾಗಿ ಹಲ್ಲೆ ನಡೆಸಿರುವ ಆಘಾತಕಾರಿ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದೆ.

ಪತ್ನಿಯ ತಲೆಕೂದಲು ಹಿಡಿದು ನೆಲದ ಮೇಲೆ ಎಳೆದೊಯ್ದು ಹಲ್ಲೆ ನಡೆಸಿದ ಈ ಭೀಕರ ಘಟನೆ ಬುಲಂದ್‌ಶಹರ್ ಜಿಲ್ಲಾಧಿಕಾರಿಗಳ ಕಚೇರಿಯಿಂದ ಕೇವಲ ಒಂದು ಕಿಲೋಮೀಟರ್ ದೂರದಲ್ಲಿರುವ ಅರ್ಚನಾ ಅವರ ಮನೆಯಲ್ಲೇ ನಡೆದಿದ್ದು, ರಾಜಕೀಯ ವಲಯದಲ್ಲಿ ಭಾರಿ ಸಂಚಲನ ಸೃಷ್ಟಿಸಿದೆ.

ಕ್ಯಾಮೆರಾದಲ್ಲಿ ಸೆರೆಯಾಯ್ತು ಅಮಾನವೀಯ ಕೃತ್ಯ:

ಸೆಪ್ಟೆಂಬರ್ 2 ರಂದು ನಡೆದ ಈ ಘಟನೆಯ ವಿಡಿಯೋ ಇದೀಗ ಬಹಿರಂಗಗೊಂಡಿದೆ. ವಿಡಿಯೋದಲ್ಲಿ ಗುಡ್ಡು ಪಂಡಿತ್ ಅರ್ಚನಾ ಅವರ ಕೂದಲನ್ನು ಬಲವಂತವಾಗಿ ಹಿಡಿದು ನೆಲದ ಮೇಲೆ ಎಳೆದೊಯ್ಯುತ್ತಿರುವುದು ಸ್ಪಷ್ಟವಾಗಿ ಕಾಣಿಸುತ್ತದೆ. ಈ ವೇಳೆ ಅರ್ಚನಾ ಕಿರುಚಾಡುತ್ತಾ, ತನ್ನ ರಕ್ಷಣೆಗಾಗಿ ಕೈಯಲ್ಲಿದ್ದ ಪೊರಕೆಯಿಂದ ಆತನ ಮೇಲೆ ಹಲ್ಲೆ ಮಾಡಲು ಯತ್ನಿಸುತ್ತಾರೆ. ಆದರೂ ಬಿಡದ ಮಾಜಿ ಶಾಸಕ, ಪೊರಕೆಯ ಸಮೇತ ಆಕೆಯನ್ನು ಎಳೆದೊಯ್ಯುತ್ತಾನೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮನೆಯಲ್ಲಿದ್ದ ಕೆಲಸದಾಕೆ ಈ ಕೃತ್ಯವನ್ನು ತನ್ನ ಮೊಬೈಲ್ ಕ್ಯಾಮೆರಾದಲ್ಲಿ ರೆಕಾರ್ಡ್ ಮಾಡುತ್ತಿರುವುದನ್ನು ಗಮನಿಸಿದ ಗುಡ್ಡು ಪಂಡಿತ್ ತಕ್ಷಣವೇ ಆಕೆಯನ್ನು ಬಿಟ್ಟು ಹಿಂದಕ್ಕೆ ಸರಿದಿದ್ದಾನೆ. ಆ ತಕ್ಷಣವೇ ಜೀವ ಉಳಿಸಿಕೊಳ್ಳಲು ರಸ್ತೆಗೆ ಓಡಿಬಂದ ಅರ್ಚನಾ, “ಆತನೊಬ್ಬ ಗೂಂಡಾ, ಅಪರಾಧಿ. ನನ್ನ ಜೀವಕ್ಕೆ ಆತನಿಂದ ಅಪಾಯವಿದೆ” ಎಂದು ಕೂಗಾಡಿ ನೆರವಿಗಾಗಿ ಅಂಗಲಾಚಿದ್ದಾರೆ.

ಪೊಲೀಸ್ ಠಾಣೆಗೆ ದೂರು, ಭದ್ರತೆಗೆ ಮನವಿ:

ಘಟನೆ ಸಂಬಂಧ ಅರ್ಚನಾ ಪಂಡಿತ್ ಅವರು ಶಿಕಾರ್‌ಪುರ ಪೊಲೀಸ್ ಠಾಣೆಗೆ ತೆರಳಿ ಗುಡ್ಡು ಪಂಡಿತ್ ವಿರುದ್ಧ ಅಧಿಕೃತ ದೂರು ದಾಖಲಿಸಿದ್ದಾರೆ.

ದೂರಿನ ಪ್ರಕಾರ, ಗುರುವಾರ ಮಧ್ಯಾಹ್ನ ಅರ್ಚನಾ ತಮ್ಮ ಮಗ ಸಮರ್ ಪಂಡಿತ್ ಜೊತೆ ಮನೆಯಲ್ಲಿದ್ದಾಗ ಗುಡ್ಡು ಪಂಡಿತ್ ಮನೆಗೆ ಬಂದು ಬಾಗಿಲನ್ನು ಬಲವಾಗಿ ಬಡಿದು ಕೂಗಾಡಿದ್ದಾನೆ. ಬಾಗಿಲು ತೆರೆಯುತ್ತಿದ್ದಂತೆ ಆಕೆಯನ್ನು ತಳ್ಳಿ ನೆಲಕ್ಕೆ ಬೀಳಿಸಿ, ಹಿಗ್ಗಾಮುಗ್ಗಾ ಹಲ್ಲೆ ನಡೆಸಿದ್ದಾನೆ. ತನ್ನ ಹಾಗೂ ತನ್ನ ಮಗನ ಜೀವಕ್ಕೆ ಗುಡ್ಡು ಪಂಡಿತ್‌ನಿಂದ ನಿರಂತರ ಪ್ರಾಣ ಬೆದರಿಕೆ ಇರುವುದರಿಂದ ತಮ್ಮ ನಿವಾಸಕ್ಕೆ 24 ಗಂಟೆಯೂ ಮಹಿಳಾ ಪೊಲೀಸ್ ಸಿಬ್ಬಂದಿಯ ಭದ್ರತೆ ನಿಯೋಜಿಸಬೇಕೆಂದು ಅರ್ಚನಾ ಒತ್ತಾಯಿಸಿದ್ದಾರೆ.

ವಿಚ್ಛೇದನ ಪ್ರಕರಣ ಹಿಂಪಡೆಯಲು ಬೆದರಿಕೆ:

ಗುಡ್ಡು ಪಂಡಿತ್ ವಿರುದ್ಧ ನ್ಯಾಯಾಲಯದಲ್ಲಿ ತಾನು ದಾಖಲಿಸಿರುವ ವಿಚ್ಛೇದನ (Divorce) ಅರ್ಜಿಯನ್ನು ವಾಪಸ್ ಪಡೆಯುವಂತೆ ಆತ ಮತ್ತು ಆತನ ಕುಟುಂಬಸ್ಥರು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದಾರೆ ಎಂದು ಅರ್ಚನಾ ಆರೋಪಿಸಿದ್ದಾರೆ. “ಕೇಸ್ ವಾಪಸ್ ಪಡೆಯದಿದ್ದರೆ ನನ್ನನ್ನು ಮತ್ತು ನನ್ನ ಮಗನನ್ನು ಜೀವಸಹಿತ ಬಿಡುವುದಿಲ್ಲ ಎಂದು ಬೆದರಿಸುತ್ತಿದ್ದಾರೆ, ಈ ಕಾರಣಕ್ಕಾಗಿಯೇ ನನ್ನ ಮೇಲೆ ಹಲ್ಲೆ ನಡೆದಿದೆ” ಎಂದು ಆಕೆ ಕಣ್ಣೀರಿಟ್ಟಿದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಇಬ್ಬರ ನಡುವೆ ಕೌಟುಂಬಿಕ ಕಲಹ ಮುಂದುವರಿದಿದೆ.

ಪೊಲೀಸ್ ತನಿಖೆ ಚುರುಕು:

ನಗರ ಸಿಒ ಪ್ರಖರ್ ಪಾಂಡೆ ಈ ಕುರಿತು ಪ್ರತಿಕ್ರಿಯಿಸಿದ್ದು, “ಕಾಂಗ್ರೆಸ್ ನಾಯಕಿ ಅರ್ಚನಾ ಪಂಡಿತ್ ಅವರು ಮಾಜಿ ಶಾಸಕ ಗುಡ್ಡು ಪಂಡಿತ್ ವಿರುದ್ಧ ದೂರು ದಾಖಲಿಸಿದ್ದಾರೆ. ಹಲ್ಲೆಯ ವಿಡಿಯೋ ಕೂಡ ಲಭ್ಯವಾಗಿದೆ. ವಿಡಿಯೋ ಮತ್ತು ದೂರಿನಲ್ಲಿರುವ ಅಂಶಗಳ ಬಗ್ಗೆ ಆಳವಾದ ತನಿಖೆ ನಡೆಸಲಾಗುತ್ತಿದೆ. ತನಿಖೆಯಲ್ಲಿ ಹೊರಬರುವ ಸತ್ಯಾಸತ್ಯತೆಗಳ ಆಧಾರದ ಮೇಲೆ ಆರೋಪಿಯ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು” ಎಂದು ಸ್ಪಷ್ಟಪಡಿಸಿದ್ದಾರೆ.

ಯಾರಿದು ಗುಡ್ಡು ಪಂಡಿತ್?

ಶ್ರೀಭಗವಾನ್ ಶರ್ಮಾ ಅಲಿಯಾಸ್ ಗುಡ್ಡು ಪಂಡಿತ್ ಉತ್ತರ ಪ್ರದೇಶ ರಾಜಕಾರಣದಲ್ಲಿ ವಿವಾದಿತ ನಾಯಕ.

  • 2007ರಲ್ಲಿ ಬಿಎಸ್‌ಪಿ (BSP) ಟಿಕೆಟ್‌ನಿಂದ ದಿಬಾಯಿ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ಅವರ ಪುತ್ರ ರಾಜ್‌ವೀರ್ ಸಿಂಗ್ ಅವರನ್ನು ಸೋಲಿಸಿ ಮೊದಲ ಬಾರಿಗೆ ಶಾಸಕರಾಗಿದ್ದರು.

  • 2012ರಲ್ಲಿ ಸಮಾಜವಾದಿ ಪಕ್ಷಕ್ಕೆ (SP) ಸೇರಿ ದಿಬಾಯಿ ಕ್ಷೇತ್ರದಿಂದಲೇ ಎರಡನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದರು.

  • ನಂತರ ಬಿಎಸ್‌ಪಿ, ಆರ್‌ಎಲ್‌ಡಿ, ಶಿವಸೇನೆ ಪಕ್ಷಗಳನ್ನು ಸುತ್ತಿ 2023ರಲ್ಲಿ ಮತ್ತೆ ಎಸ್ಪಿಗೆ ಮರಳಿದ್ದರು.

ಇತ್ತ ಸಂತ್ರಸ್ತೆ ಅರ್ಚನಾ ಪಂಡಿತ್ ಕೂಡ ಈ ಹಿಂದೆ ಸಮಾಜವಾದಿ ಪಕ್ಷದ ಮಹಿಳಾ ಘಟಕದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದು, ಇತ್ತೀಚೆಗಷ್ಟೇ ಲಖನೌದಲ್ಲಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಗೊಂಡಿದ್ದರು. ಸದ್ಯ ಪತ್ನಿಯ ಮೇಲೆಯೇ ಮಾಜಿ ಜನಪ್ರತಿನಿಧಿ ನಡೆಸಿರುವ ಈ ಗೂಂಡಾಗಿರಿ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular