ಬೆಂಗಳೂರು: ತರಗತಿ ನಡೆಯುತ್ತಿದ್ದಾಗಲೇ ಸರ್ಕಾಅರಿ ಶಾಲೆಯೊಂದರಲ್ಲಿ ಕೊಠಡಿಯ ಮೇಲ್ಛಾವಣಿ ಕುಸಿದುಬಿದ್ದು, 8 ಮಕ್ಕಳು ಗಾಯಗೊಂಡ ಘಟನೆ ಬಾಲಕಲೋಟೆಯ ಮುಗಳೊಳ್ಳಿಯಲ್ಲಿ ನಡೆದಿದೆ. ಈ ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಲೋಕಾಯುಕ್ತ ನ್ಯಾ.ಬಿ.ಎಸ್.ಪಾಟೀಲ್ ಅವರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ.
ಘಟನೆ ಸಂಬಂಧ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತ, ಹೆಚ್ಚುವರಿ ಆಯುಕ್ತ, ಬಾಗಲಕೋಟೆ ಜಿಲ್ಲಾಧಿಕಾರಿ, ಬಾಗಲಕೋಟೆ ಜಿಲ್ಲಾ ಪಂಚಾಯತ್‌ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಮತ್ತು ಕ್ಷೇತ್ರ ಶಿಕ್ಷಣಾಧಿಕಾರಿಗಳನ್ನ (ಬಿಇಒ) ಪ್ರತಿವಾದಿಯನ್ನಾಗಿ ಲೋಕಾಯುಕ್ತರು ನೋಟಿಸ್ ಜಾರಿ ಮಾಡಿದ್ಧಾರೆ.
ಈ ಸಂಬಂಧ ಅ.7 ರಂದು ಖುದ್ದು ಹಾಜರಾಗಿ ವರದಿ ಸಲ್ಲಿಸುವಂತೆ ಧಾರವಾಡದ ಹೆಚ್ಚುವರಿ ಆಯುಕ್ತರು, ಶಿಕ್ಷಣ ಇಲಾಖೆಯ ಅಧಿಕಾರಿಗಳು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಉಪ ನಿರ್ದೇಶಕರು ಹಾಗೂ ಬಿಇಒಗೆ ನಿರ್ದೇಶಿಸಿದ್ದಾರೆ.
ಘಟನೆಯ ಬಗ್ಗೆ ಬಾಗಲಕೋಟೆ ಜಿಲ್ಲೆಯ ಶಾಲೆಗಳಿಗೆ ಭೇಟಿ ನೀಡಿ, ಕಟ್ಟಡಗಳ ಸ್ಥಿತಿಗತಿ, ಸುರಕ್ಷತಾ ಮಾನದಂಡಗಳು ಮತ್ತು ಮೂಲಸೌಕರ್ಯಗಳನ್ನು ಸುರಕ್ಷತಾ ಪರಿಶೀಲನೆ ನಡೆಸಲು ಹಾಗೂ ವರದಿ ಸಲ್ಲಿಸಲು ಲೋಕಾಯುಕ್ತರು ಪೊಲೀಸರಿಗೆ ಸೂಚಿಸಿದ್ದಾರೆ.
ಬುಧವಾರ ಶಾಲಾ ಮೇಲ್ಛಾವಣಿ ಕುಸಿದ ಘಟನೆ ನಡೆದ ಬಳಿಕ ಬಾಗಲಕೋಟೆ ಜಿಲ್ಲಾಡಳಿತವು ದೀರ್ಘಕಾಲೀನ ಕ್ರಮ ನಡೆಸಿದ್ದು, ಘಟನೆಯಲ್ಲಿ ಗಾಯಗೊಂಡಿದ್ದ 8 ಮಕ್ಕಳಿಗೆ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನಿಡಿ, ಡಿಸ್ಚಾರ್ಜ್ ಮಾಡಲಾಗಿದೆ. ಶಾಲೆಯ ಮುಖ್ಯೋಪಾಧ್ಯಾಯರು ಮತ್ತು ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಕಿರಿಯ ಎಂಜಿನಿಯರ್ ಅಮಾನತುಗೊಳಿಸಲಾಗಿದೆ. ಹಾಗೆಯೇ, ಅದೇ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಅವರನ್ನು ಅಮಾನತುಗೊಳಿಸಲು ಸಂಬಂಧಪಟ್ಟ ಪ್ರಾಧಿಕಾರಕ್ಕೆ ಶಿಫಾರಸು ಮಾಡಲಾಗಿದೆ.
ಡಿಡಿಪಿಐ, ಬಿಇಒ ಮತ್ತು ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗೆ ಶೋಕಾಸ್ ನೋಟಿಸ್‌ಗಳನ್ನು ನೀಡಲಾಗಿದೆ. ತಕ್ಷಣದ ಸುರಕ್ಷತಾ ಕ್ರಮವಾಗಿ, 4 ರಿಂದ 6ನೇ ತರಗತಿಯ ವಿದ್ಯಾರ್ಥಿಗಳನ್ನು ಸಮೀಪದ ಕೆಪಿಎಸ್ ಶಾಲೆಗೆ ಸ್ಥಳಾಂತರಿಸಲಾಗುತ್ತಿದೆ. ಸಾರಿಗೆ ವೆಚ್ಚವನ್ನು ಶಿಕ್ಷಣ ಇಲಾಖೆ ಭರಿಸಲಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.
ಘಟನೆ ಬೆನ್ನಲ್ಲೇ ಶಾಲೆಯ ಪ್ರಭಾರಿ ಮುಖ್ಯ ಶಿಕ್ಷಕ ಸಿ.ಬಿ.ಹೆಳವರ ಅವರನ್ನು ಅಮಾನತ್ತುಗೊಳಿಸಿ ಶಾಲಾಶಿಕ್ಷಣ ಇಲಾಖೆಯ ಉಪನಿರ್ದೇಶಕ ಆರ್.ಎಸ್.ಸೀತಾರಾಮು ಆದೇಶಿಸಿದ್ದಾರೆ. ಕೊಠಡಿಯ ಮೆಲ್ಛಾವಣಿ ದುರಸ್ತಿ ಹಂತದಲ್ಲಿದ್ದರೂ ಇಲಾಖೆಗೆ ತಿಳಿಸದೆ ಕರ್ತವ್ಯ ಲೋಪ ಎಸಗಿರುವ ಆರೋಪದ ಹಿನ್ನೆಲೆ ಕರ್ನಾಟಕ ನಾಗರಿಕ ಸೇವೆ 1957ರ ನಿಯಮ 10 (1) ರ ಅನ್ವಯ ಅವರನ್ನು ಅಮಾನತು ಮಾಡಲಾಗಿದೆ.
ಶಾಲಾ ಕಟ್ಟಡದ ಫಿಟ್ನೆಸ್ ಸಂಬಂಧ ಸರಿಯಾದ ಪ್ರಮಾಣಪತ್ರ ಕೊಡುವಲ್ಲಿ ವಿಫಲವಾದ ಹಿನ್ನೆಲೆ ಪಿಆರ್ಇಡಿ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಎಸ್.ಎಂ.ರೇವಡಿ ಮತ್ತು ಜ್ಯೂನಿಯರ್ ಇಂಜಿನಿಯರ್ ಎಸ್.ಎಂ.ಸಂಗನಾಳ ಅವರನ್ನು ಕೂಡ ಕೂಡ ಅಮಾನತು ಮಾಡಿ ಬಾಗಲಕೋಟೆ ಜಿಲ್ಲಾಪಂಚಾಯಿತಿ ಸಿಇಓ ಗಜಾನನ ಬಾಲೆ ಆದೇಶ ಹೊರಡಿಸಿದ್ದಾರೆ.
ಶಾಲೆಯಲ್ಲಿ ತರಗತಿ ನಡೆಯುತ್ತಿದ್ದ ವೇಳೆಯೇ ಸೆಪ್ಟೆಂಬರ್ 2ರಂದು ಕೊಠಡಿಯ ಮೇಲ್ಛಾವಣಿಯ ಒಂದು ಭಾಗ ಕುಸಿದು ಬಿದ್ದಿತ್ತು. ಎಂಟು ಮಕ್ಕಳು ಗಾಯಗೊಂಡಿದ್ದರು. ಶಾಲಾ ಆರಂಭದ ವೇಳೆ ಜಿಲ್ಲೆಯಾದ್ಯಂತ ಕಟ್ಟಡ ಸ್ಥಿತಿಗತಿ ಬಗ್ಗೆ ಪರಿಶೀಲನೆ ನಡೆಸಲಾಗಿತ್ತು. ಈ ವೇಳೆ 628 ಶಾಲಾ ಕಟ್ಟಡಗಳು ಅನ್ಫಿಟ್ ಎಂದು ವರದಿ ನೀಡಲಾಗಿತ್ತು. ಆದರೆ ಈ ಶಾಲೆಯ ಹೆಸರು ಆ ಲಿಸ್ಟ್ನಲ್ಲಿ ಇರಲಿಲ್ಲ. ಹೀಗಾಗಿ ಮೇಲ್ನೋಟಕ್ಕೆ ಎಂಜಿನಿಯರ್ ಶಾಲೆಯ ಕಟ್ಟಡವನ್ನು ಸರಿಯಾಗಿ ಪರಿಶೀಲನೆ ನಡೆಸದಿರೋದು ಸಾಬೀತಾಗಿದ್ದ ಕಾರಣ ಇಂಜಿನಿಯರ್ ಗಳನ್ನು ಸಸ್ಪೆಂಡ್ ಮಾಡಲಾಗಿದೆ.

