HomeKarnatakaBIG NEWS: ಗ್ಯಾರಂಟಿ ಯೋಜನೆ ನಿರ್ವಹಣೆಯಲ್ಲಿ ಗೊಂದಲ: ಕರ್ನಾಟಕಕ್ಕೂ ಹಿಮಾಚಲ ಪ್ರದೇಶದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ:...

BIG NEWS: ಗ್ಯಾರಂಟಿ ಯೋಜನೆ ನಿರ್ವಹಣೆಯಲ್ಲಿ ಗೊಂದಲ: ಕರ್ನಾಟಕಕ್ಕೂ ಹಿಮಾಚಲ ಪ್ರದೇಶದ ಸ್ಥಿತಿ ಬಂದರೂ ಆಶ್ಚರ್ಯವಿಲ್ಲ: ಬಿ.ವೈ.ವಿಜಯೇಂದ್ರ ವಾಗ್ದಾಳಿ

ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳ ವಿರುದ್ಧ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ರಾಜ್ಯಕ್ಕೂ ಹಿಮಾಚಲ ಪ್ರದೇಶ ಸರ್ಕಾರದ ಸ್ಥಿತಿ ಬಂದರೆ ಅಚ್ಚರಿಯಿಲ್ಲ ಎಂದು ಟೀಕಿಸಿದ್ದಾರೆ.

ಸರ್ಕಾರದ ಆರ್ಥಿಕ ಸಂಪನ್ಮೂಲವನ್ನು ಆಧರಿಸಿ ಸಮತೋಲನ ಕಾಯ್ದುಕೊಳ್ಳುವಲ್ಲಿ ವಿಫಲರಾಗಿ ತಾವು ನೀಡುವ ಪೊಳ್ಳು ಭರವಸೆಗಳಿಗೆ ಹಣ ಒದಗಿಸಲಾಗದೇ ಯೋಜನೆಗಳು ಹೇಗೆ ವೈಫಲ್ಯ ಸಾಧಿಸುತ್ತವೆ ಎನ್ನುವುದಕ್ಕೆ ಕಾಂಗ್ರೆಸ್ ಆಡಳಿತದ ಹಿಮಾಚಲ ಪ್ರದೇಶ ಸರ್ಕಾರ ಸಾಕ್ಷಿ ಒದಗಿಸಿದೆ. ಕರ್ನಾಟಕದಲ್ಲೂ ಸಹ ಪಂಚ ಗ್ಯಾರಂಟಿಗಳನ್ನು ನಿರ್ವಹಿಸುವಲ್ಲಿ ಗೊಂದಲಗಳನ್ನು ಸೃಷ್ಟಿಸಿಕೊಳ್ಳುತ್ತಿರುವ ಕಾಂಗ್ರೆಸ್ ಸರ್ಕಾರ ಶಕ್ತಿ ಯೋಜನೆಯಲ್ಲಿ ಈಗಾಗಲೇ ನಷ್ಟವನ್ನು ಅನುಭವಿಸಿದ್ದು, ಸಾರಿಗೆ ಇಲಾಖೆಯ ನಾಲ್ಕೂ ನಿಗಮಗಳಿಗೆ ಬಡ್ಡಿರಹಿತವಾಗಿ 2 ಸಾವಿರ ಕೋಟಿ ರೂ ಸಾಲ ನೀಡಲು ಮುಂದಾಗಿದೆ. ಗೃಹ ಜ್ಯೋತಿ ಯೋಜನೆಯ ನಷ್ಟವನ್ನು ಸರಿದೂಗಿಸಲು ವಾಣಿಜ್ಯ ಹಾಗೂ ಉತ್ಪಾದಕ ವಲಯದ ಮೇಲೆ ವಿದ್ಯುತ್ ದರ ಹೆಚ್ಚಿಸಿರುವುದರ ಪರಿಣಾಮ, ಪರೋಕ್ಷವಾಗಿ ಜನ ಸಾಮಾನ್ಯರು ಇದರ ಬಿಸಿ ಅನುಭವಿಸುವಂತಾಗಿದೆ ಎಂದು ಗುಡುಗಿದ್ದಾರೆ.

ಗೃಹ ಲಕ್ಷ್ಮಿ ಯೋಜನೆಗೆ ಹಣ ಹೊಂದಿಸಲಾಗದೆ ಚುನಾವಣಾ ಸಂದರ್ಭದಲ್ಲಿ ಮಾತ್ರ ಉಳಿಸಿಕೊಂಡಿರುವ ಬಾಕಿ ಕಂತುಗಳನ್ನು ಪಾವತಿಸಿ ಯೋಜನೆಯನ್ನು ಮತಬ್ಯಾಂಕ್ ಸೃಷ್ಟಿಸಿಕೊಳ್ಳಲು ಮಾತ್ರ ಬಳಸಿಕೊಳ್ಳಲಾಗುತ್ತಿದೆ. ಯುವನಿಧಿ ಯೋಜನೆ ಯುವ ಜನರ ಪಾಲಿಗೆ ಗಗನಕುಸುಮವಾಗಿಯೇ ಉಳಿದಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಮಾಜ ಹಾಗೂ ನಾಡನ್ನು ಕಟ್ಟುವ ಮಾನವ ಸಂಪನ್ಮೂಲದ ಪ್ರಮುಖ ಭಾಗವಾಗಿರುವ ರೈತಾಪಿ ವರ್ಗ, ಶ್ರಮಿಕರು,ಯುವ ಜನರು, ವಿದ್ಯಾರ್ಥಿಗಳ ಹಾಗೂ ಮಹಿಳೆಯರ ಭವಿಷ್ಯಕ್ಕಾಗಿ ಯಾವುದೇ ಯೋಜನೆ ರೂಪಿಸದೇ ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಅಭಿವೃದ್ಧಿ ಶೂನ್ಯ ಆಡಳಿತ ನೀಡುವ ಮೂಲಕ ತನ್ನ ಖಜಾನೆ ಬರಿದು ಮಾಡಿಕೊಂಡಿದೆ,ಇದು ನಾಡಿನ ಜನರಿಗೆ ತಿಳಿಯದ ವಿಷಯವೇನಲ್ಲ, ಏಕೆಂದರೆ ಇದರ ಪರಿಣಾಮವನ್ನು ತೆರಿಗೆದಾರರು ನಿತ್ಯ ಅನುಭವಿಸುತ್ತಲೇ ಇದ್ದಾರೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಗ್ಯಾರಂಟಿ ಯೋಜನೆಗಳನ್ನು ಹಿಂತೆಗೆದುಕೊಳ್ಳುತ್ತಿರುವ ಹಿಮಾಚಲ ಪ್ರದೇಶ ಕಾಂಗ್ರೆಸ್ ಸರ್ಕಾರದ ಸ್ಥಿತಿ ಕರ್ನಾಟಕಕ್ಕೆ ಬಂದರೂ ಅದರಲ್ಲಿ ಆಶ್ಚರ್ಯವೇನಿಲ್ಲ, ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಕಾಂಗ್ರೆಸ್ ಸರ್ಕಾರಕ್ಕೆ ಜನತೆಗೆ ನೀಡಿರುವ ವಚನ ಪಾಲನೆ ಹಾಗೂ ಜಾರಿಗೊಳಿಸಿರುವ ಯೋಜನೆಯನ್ನು ಸರಿದೂಗಿಸುವ ಬದ್ಧತೆ ಇದ್ದರೆ ಈ ಕೂಡಲೇ ಗ್ಯಾರಂಟಿ ಯೋಜನೆಗಳನ್ನು ಸರಿದೂಗಿಸಲು ರಾಜ್ಯದ ಆರ್ಥಿಕ ಸಂಪನ್ಮೂಲವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಅಭಿವೃದ್ಧಿ ಯೋಜನೆಗಳನ್ನು ಪರಿಚಯಿಸುವ ಬದ್ಧತೆ ಪ್ರದರ್ಶಿಸಲಿ ಎಂದು ಆಗ್ರಹಿಸಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular