ಗೃಹಲಕ್ಷ್ಮಿ ಯೋಜನೆ 33 ನೇ ಕಂತಿನ ಹಣ ರಾಜ್ಯ ಸರ್ಕಾರದಿಂದ ಬಿಡುಗಡೆಯಾಗಿದ್ದು ಎಲ್ಲಾ ಅರ್ಹ ಫಲಾನುಭವಿಗಳಿಗೂ ತಲಾ 2000 ರೂಪಾಯಿಯಂತೆ ಫಲಾನುಭವಿ ಗಳ ಬ್ಯಾಂಕ್ ಖಾತೆಗೆ ನೇರವಾಗಿ ಡಿ.ಬಿ.ಟಿ. ಮೂಲಕ ಜಮೆ ಆಗಿದೆ ಎಂದು ಶಿವಮೊಗ್ಗ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ಸಿ.ಎಸ್. ಚಂದ್ರಭೂಪಾಲ ಅವರು ತಿಳಿಸಿದ್ದಾರೆ.
ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷಿಯ ಪಂಚ ಗ್ಯಾರೆಂಟಿ ಯೋಜನೆಗಲ್ಲಿ ಒಂದಾದ ಗೃಹಲಕ್ಷ್ಮಿ ಯೋಜನೆಯು ಪರಿಣಾಮಕಾರಿ ಯಾಗಿ ಅನುಷ್ಠಾನಗೊಂಡಿದ್ದು ಇಲ್ಲಿಯವರೆಗೆ 32 ಕಂತುಗಳಲ್ಲಿ ಒಬ್ಬರಿಗೆ ಎರಡು ಸಾವಿರ ರೂಪಾಯಿಗಳಂತೆ ಒಟ್ಟು ರೂ. 64 ಸಾವಿರ ರೂಪಾಯಿಗಳು ಫಲಾನುಭವಿಗಳ ಬ್ಯಾಂಕ್ ಖಾತೆಗೆ ಪಾವತಿ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯಲ್ಲಿ 33 ನೇ ಕಂತಿನಲ್ಲಿ 3,78,031 ಅರ್ಹ ಮಹಿಳಾ ಫಲಾನುಭವಿಗಳಿದ್ದು ರೂ 756,062,000 ಕೋಟಿ ರೂಪಾಯಿ ಸಂದಾಯವಾಗಿದ್ದು, ಕರ್ನಾಟಕ ಸರ್ಕಾರದ ಸಾಧನೆಯಿಂದಾಗಿ ಗೃಹಲಕ್ಷ್ಮಿ ಫಲಾನುಭವಿ ಮನೆ ಒಡತಿಗೆ ನೀಡುತ್ತಿರುವ ಗೃಹಲಕ್ಷ್ಮಿ ಹಣ ಅವರಿಗೆ ವಿವಿಧರೀತಿಯಲ್ಲಿ ಸಹಕಾರಿಯಾಗಿದೆ. ಮಹಿಳೆಯರ ಆರ್ಥಿಕ ಸ್ವಾತಂತ್ರ್ಯ ಮತ್ತು ಸಬಲೀಕರಣವನ್ನು ಉತ್ತೇಜಿಸುವ ಉದ್ದೇಶದಿಂದ ಸರ್ಕಾರ ಈ ಯೋಜನೆಯನ್ನು ಜಾರಿಗೆ ತಂದಿದೆ ಎಂದು ಸಿ. ಎಸ್. ಚಂದ್ರಭೂಪಾಲ ತಿಳಿಸಿದ್ದಾರೆ.
ಆಯುಧಪೂಜೆ, ವಿಜಯದಶಮಿ ಹಬ್ಬದ ಸಂಭ್ರಮ: ಖರೀದಿ ಭರಾಟೆ
ನಾಡಿನೆಲ್ಲೆಡೆ ಆಯುಧ ಪೂಜೆ ಮತ್ತು ವಿಜಯದಶಮಿ ಹಬ್ಬದ ಸಂಭ್ರಮ ಗರಿಗೆದರಿದ್ದು, ಪೂಜೆಗೆ ಅಗತ್ಯ ಹೂವು-ಹಣ್ಣು, ಬೂದುಗುಂಬಳ ಖರೀದಿಯ ಭರಾಟೆ ಮಾರುಕಟ್ಟೆಯಲ್ಲಿ ಜೋರಾಗಿ ಸಾಗಿದೆ.
ನವರಾತ್ರಿ ಆಚರಣೆಯ ವೇಳೆ ಪ್ರತಿ ವರ್ಷ ಹೂವುಗಳ ದರ ಏರಿಕೆ ಆಗುತ್ತದೆ. ಆದರೆ, ಕೆಲ ದಿನಗಳ ಹಿಂದೆ ಹೂವಿನ ದರ ಕುಸಿದಿತ್ತು. ಹಬ್ಬದ ವೇಳೆಗೆ ಮತ್ತೆ ಹೂವಿನ ದರ ಹೆಚ್ಚಾಗಿದೆ. ಎರಡು ವಾರಗಳವರೆಗೆ ಧಾರ್ಮಿಕ ಆಚರಣೆಗಳು ನಡೆಯುವುದರಿಂದ ಈ ಸಮಯದಲ್ಲಿ ಹೂವಿಗೆ ಹೆಚ್ಚಿನ ಬೇಡಿಕೆ ಬಂದಿದೆ.
ದಸರಾ ಹಬ್ಬದಲ್ಲಿ ಚೆಂಡು ಹೂ, ಸೇವಂತಿಗೆ, ಕನಕಾಂಬರ, ಗುಲಾಬಿ ಹೂವುಗಳಿಗೆ ಹೆಚ್ಚಿನ ಬೇಡಿಕೆ ಇದೆ. ಆಯುಧ ಪೂಜೆ ದಿನ ವಾಹನ, ಕಚೇರಿ, ಮನೆಯಲ್ಲಿರುವ ವಸ್ತುಗಳನ್ನು ಅಲಂಕರಿಸಿ ಪೂಜೆ ಮಾಡಲಾಗುತ್ತದೆ. ವಾಹನಗಳ ಅಲಂಕಾರಕ್ಕೆ ಹೂವು ಹೆಚ್ಚಾಗಿ ಮಾರಾಟವಾಗುವುದರಿಂದ ಹೂವಿನ ಬೇಡಿಕೆಯೂ ಹೆಚ್ಚಾಗಿದೆ.
ಪ್ರತಿ ಕೆ.ಜಿ ಕನಕಾಂಬರ 800 ರೂ, ಮಲ್ಲಿಗೆ 800, ಗುಲಾಬಿ 400, ಸೇವಂತಿಗೆ 400 ರು.ನಂತೆ ಮಾರಾಟವಾಗುತ್ತಿವೆ. ಆಯುಧ ಪೂಜೆಯ ದಿನ ಬಳಕೆಗೆ ಬೂದುಗುಂಬಳ ಪ್ರತಿ ಕೆ.ಜಿಗೆ 40ರಿಂದ ಆರಂಭಗೊಂಡು ಗಾತ್ರದ ಆಧಾರದ ಮೇಲೆ ಒಂದಕ್ಕೆ 100- 200 ರೂ. ವರೆಗೆ ಮಾರಾಟವಾಗಿವೆ.
ನಿಂಬೆ ಹಣ್ಣು ಹಾಗೂ ಇತರ ಹೂ, ಹಣ್ಣುಗಳ ಬೆಲೆ ಈ ಬಾರಿ ಹೆಚ್ಚಳವಾಗಿದ್ದು, ಚೆಂಡು ಹೂವಿಗೆ ಮಾರಿಗೆ 60 ರಿಂದ 100 ರವರೆಗೆ ಇದೆ. ಇತರ ಸೇವಂತಿಗೆ, ಜಾಜಿ, ಮತ್ತು ಕಾಕಡ ಮಾರಿಗೆ 150 ರಿಂದ 250 ರವರೆಗೆ ಇದೆ. ಬಿಡಿ ಹೂವುಗಳು ಕೆಜಿ.400 ರೂ. ಗಡಿ ದಾಟಿದೆ. ಸೇಬು, ಬಾಳೆಹಣ್ಣು, ಮುಸುಂಬಿ ಎಲ್ಲಾ ರೀತಿಯ ಹಣ್ಣುಗಳು ಕೂಡ ಏರಿಕೆಯಾಗಿವೆ.
ಶಿವಮೊಗ್ಗ ನಗರದ ಗಾಂಧಿ ಬಜಾರ್, ದುರ್ಗಿಗುಡಿ, ನೆಹರು ರಸ್ತೆ, ಬಿ.ಎಚ್. ರಸ್ತೆ, ಪೊಲೀಸ್ ಚೌಕಿ, ಗೋಪಾಳ, ವಿನೋಬನಗರ ಮಾರುಕಟ್ಟೆ ಜನಜಂಗುಳಿಯಿಂದ ಕೂಡಿದ್ದವು. ತರಕಾರಿ, ದಿನಸಿ, ಆಲಂಕಾರಿಕ ವಸ್ತುಗಳು ಮತ್ತು ಪೂಜೆಗೆ ಬೇಕಾಗುವ ಬೂದುಗುಂಬಳ, ಬಾಳೆಕಂದು, ಎಲೆ, ತೆಂಗಿನಕಾಯಿಯ ಖರೀದಿ ಜೋರಾಗಿತ್ತು.

