ಸಾಮಾನ್ಯವಾಗಿ ಖಾಸಗಿ ಸಂಸ್ಥೆಗಳಲ್ಲಿ ಕೆಲಸ ಮಾಡುವವರು ಆಗಾಗ್ಗೆ ಕಂಪನಿ ಬದಲಾಯಿಸುವುದರಿಂದ ಗ್ರಾಚ್ಯುಟಿ (Gratuity) ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ನೀವು ಒಂದೇ ಸಂಸ್ಥೆಯಲ್ಲಿ ಸತತವಾಗಿ 5 ಅಥವಾ ಅದಕ್ಕಿಂತ ಹೆಚ್ಚು ವರ್ಷಗಳ ಕಾಲ ಕೆಲಸ ಮಾಡಿದ್ದರೆ ಕಂಪನಿಯಿಂದ ದೊಡ್ಡ ಮೊತ್ತದ ಹಣವನ್ನು ಪಡೆಯುವ ಹಕ್ಕನ್ನು ಹೊಂದಿರುತ್ತೀರಿ ಎಂಬುದನ್ನು ಮರೆಯಬೇಡಿ.ಚ್ಯುಟಿ ಅಧಿನಿಯಮದ ಪ್ರಕಾರ ಉದ್ಯೋಗಿ ನಿವೃತ್ತಿ ಹೊಂದಿದ 1 ತಿಂಗಳ ಒಳಗಾಗಿ ಕಡ್ಡಾಯವಾಗಿ ಗ್ರಾಚ್ಯುಟಿ ಹಣವನ್ನು ಪಾವತಿಸಬೇಕಾಗುತ್ತದೆ
ಏನಿದು ಗ್ರಾಚ್ಯುಟಿ?
ಉದ್ಯೋಗದಾತ ಕಂಪನಿಯು ತನ್ನಲ್ಲಿ ದೀರ್ಘಕಾಲ ಸೇವೆ ಸಲ್ಲಿಸಿದ ನೌಕರರಿಗೆ ನೀಡುವ ಒಂದು ರೀತಿಯ ‘ಗೌರವಧನ’ವೇ ಈ ಗ್ರಾಚ್ಯುಟಿ. ಒಬ್ಬ ಉದ್ಯೋಗಿ ಕಂಪನಿಯಿಂದ ನಿವೃತ್ತನಾದಾಗ ಅಥವಾ ಕೆಲಸಕ್ಕೆ ರಾಜಿನಾಮೆ ನೀಡಿದಾಗ ಆತನ ಒಟ್ಟು ಸೇವಾವಧಿಯನ್ನು ಮಾನದಂಡವಾಗಿಟ್ಟುಕೊಂಡು ಈ ಮೊತ್ತವನ್ನು ಪಾವತಿಸಲಾಗುತ್ತದೆ.
ಯಾರಿಗೆಲ್ಲ ಅನ್ವಯ? ನೌಕರರ ಹಿತದೃಷ್ಟಿಯಿಂದ ಜಾರಿಗೆ ತರಲಾದ ‘ಗ್ರಾಚ್ಯುಟಿ ಪಾವತಿ ಕಾಯ್ದೆ 1972 ರ ಅಡಿಯಲ್ಲಿ ಗಣಿ, ತೈಲಕ್ಷೇತ್ರ, ಫ್ಯಾಕ್ಟರಿಗಳು, ಬಂದರುಗಳು ರೈಲ್ವೇ ಸೇರಿದಂತೆ ಬಹುತೇಕ ಖಾಸಗಿ ಮತ್ತು ಸರ್ಕಾರಿ ಸಂಸ್ಥೆಗಳು ಈ ನಿಯಮಕ್ಕೆ ಒಳಪಡುತ್ತವೆ. ಈ ಕಾಯ್ದೆಯಡಿ ನಿಮ್ಮ ಹೆಸರು ನಮೂದಾಗಿದ್ದರೆ ನಿಮ್ಮ ಔದ್ಯೋಗಿಕ ಅನುಭವ ಮತ್ತು ಸಂಬಳದ ಆಧಾರದ ಮೇಲೆ ಗ್ರಾಚ್ಯುಟಿಯನ್ನು ಲೆಕ್ಕ ಹಾಕಿ ನೀಡಲಾಗುತ್ತದೆ.
ಯಾವ ಸಂದರ್ಭಗಳಲ್ಲಿ ನೀವು ಗ್ರಾಚ್ಯುಟಿ ಹಣವನ್ನು ಪಡೆಯಬಹುದು?
ಗ್ರಾಚ್ಯುಟಿ ಎಂಬುದು ಕೇವಲ ನಿವೃತ್ತಿಯ ನಂತರ ಸಿಗುವ ಹಣವಲ್ಲ. ಈ ಕೆಳಗಿನ ಮೂರು ಪ್ರಮುಖ ಸಂದರ್ಭಗಳಲ್ಲಿ ಉದ್ಯೋಗಿ ಅಥವಾ ಅವರ ಕುಟುಂಬ ಈ ಮೊತ್ತವನ್ನು ಪಡೆಯಲು ಅರ್ಹರಾಗಿರುತ್ತಾರೆ:
ನಿವೃತ್ತಿಯ ನಂತರ (Retirement): ಒಬ್ಬ ಉದ್ಯೋಗಿ ತನ್ನ ಸುದೀರ್ಘ ಸೇವೆಯ ನಂತರ ನಿಗದಿತ ವಯಸ್ಸಿನಲ್ಲಿ ನಿವೃತ್ತಿ ಹೊಂದಿದಾಗ, ಕಂಪನಿಯು ಅವರ ಇಡೀ ಸೇವಾವಧಿಯನ್ನು ಗೌರವಿಸಿ ಈ ಹಣವನ್ನು ನೀಡುತ್ತದೆ.
5 ವರ್ಷಗಳ ನಂತರ ರಾಜೀನಾಮೆ ನೀಡಿದರೆ (Resignation): ನೀವು ನಿವೃತ್ತಿಯಾಗುವ ಮೊದಲೇ ಕೆಲಸ ಬಿಡುತ್ತಿದ್ದೀರಾ? ಚಿಂತಿಸಬೇಡಿ. ಒಂದೇ ಕಂಪನಿಯಲ್ಲಿ ಸತತವಾಗಿ 5 ವರ್ಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಕೆಲಸ ಮಾಡಿ ರಾಜೀನಾಮೆ ನೀಡಿದರೆ, ನೀವು ಗ್ರಾಚ್ಯುಟಿ ಪಡೆಯಲು ಕಾನೂನುಬದ್ಧವಾಗಿ ಅರ್ಹರು.
ಅಕಾಲಿಕ ಮರಣ ಅಥವಾ ಅಂಗವೈಕಲ್ಯ (Death or Disablement): ಯಾವುದಾದರೂ ಕಾಯಿಲೆ, ಅಪಘಾತ ಅಥವಾ ದುರದೃಷ್ಟವಶಾತ್ ಉದ್ಯೋಗಿ ಅಕಾಲಿಕ ಮರಣ ಹೊಂದಿದ ಸಂದರ್ಭದಲ್ಲಿ ಈ ಹಣವನ್ನು ನೀಡಲಾಗುತ್ತದೆ.
ಗ್ರಾಚ್ಯುಟಿ ಲೆಕ್ಕಾಚಾರ
ನಿಮ್ಮ ಮೂಲ ವೇತನ (Basic Salary + DA) ₹30,000 ಇದ್ದರೆ, ನೀವು ಎಷ್ಟು ವರ್ಷ ಕೆಲಸ ಮಾಡಿದರೆ ಎಷ್ಟು ಹಣ ಸಿಗಬಹುದು? ನಿಮಗಾಗಿ ಇಲ್ಲಿದೆ ಒಂದು ಅಂದಾಜು ಪಟ್ಟಿ.ನೆನಪಿರಲಿ: ಇಲ್ಲಿ ತಿಂಗಳ 26 ದಿನಗಳನ್ನು ಕೆಲಸದ ದಿನಗಳೆಂದು ಪರಿಗಣಿಸಿ, ಪ್ರತಿ ವರ್ಷಕ್ಕೆ 15 ದಿನದ ಸಂಬಳದಂತೆ ಲೆಕ್ಕ ಹಾಕಲಾಗುತ್ತದೆ.
| ಸೇವೆಯ ವರ್ಷಗಳು (Years) | ಸಿಗುವ ಅಂದಾಜು ಮೊತ್ತ (Amount) |
|---|---|
| 5 ವರ್ಷಗಳು | ರೂ. 86,538 |
| 7 ವರ್ಷಗಳು | ರೂ. 1,21,153 |
| 10 ವರ್ಷಗಳು | ರೂ. 1,73,076 |
| 15 ವರ್ಷಗಳು | ರೂ. 2,59,615 |

