ಬೆಂಗಳೂರು: ರಾಜ್ಯದ ರೈತರ ಹಿತರಕ್ಷಣೆ ಮತ್ತು ಆರ್ಥಿಕ ಭದ್ರತೆಯೇ ನಮ್ಮ ಸರ್ಕಾರದ ಆದ್ಯತೆಯಾಗಿದೆ ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.
ಕನಿಷ್ಠ ಬೆಂಬಲ ಬೆಲೆ (MSP) ಯೋಜನೆಯಡಿ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು 2025–26ನೇ ಸಾಲಿನ ಮುಂಗಾರು ಹಾಗೂ ಹಿಂಗಾರು ಹಂಗಾಮಿನಲ್ಲಿ ರಾಗಿ, ಜೋಳ ಮತ್ತು ಭತ್ತ ಸೇರಿದಂತೆ ಒಟ್ಟು 7.96 ಲಕ್ಷ ಮೆಟ್ರಿಕ್ ಟನ್ ಧಾನ್ಯಗಳನ್ನು ಸುಮಾರು 2.89 ಲಕ್ಷ ರೈತರಿಂದ ಖರೀದಿಸಿದೆ.
ವಿವಿಧ ವರ್ಷಗಳ ಕ್ಲೈಮ್‌ಗಳಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರದಿಂದ ಬಿಡುಗಡೆಯಾಗಬೇಕಿರುವ ಒಟ್ಟು ₹1,902 ಕೋಟಿ ಅನುದಾನ ಇನ್ನೂ ಬಾಕಿಯಿದ್ದು, ಅದನ್ನು ಶೀಘ್ರವಾಗಿ ಪಡೆಯಲು ರಾಜ್ಯ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ.
ಕೇಂದ್ರದಿಂದ ಮರುಪಾವತಿ ವಿಳಂಬವಾಗುತ್ತಿದ್ದರೂ, ರೈತರ ಆರ್ಥಿಕ ಹಿತವನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರವು ತನ್ನ ಆವರ್ತ ನಿಧಿಯಿಂದ (Revolving Fund) 2026ರ ಜೂನ್ 15ರಂದು ₹650 ಕೋಟಿಗಳನ್ನು ಬಿಡುಗಡೆ ಮಾಡಿ ರೈತರಿಗೆ ಪಾವತಿಸಿದೆ. ಅಲ್ಲದೆ, ಉಳಿದ ಬಾಕಿ ಪಾವತಿಗಳಿಗಾಗಿ ಹಣಕಾಸು ಇಲಾಖೆಯ ನಿಯಮಾವಳಿಗಳಿಗೆ ಅನುಗುಣವಾಗಿ 2026ರ ಜುಲೈ 4ರಂದು ಮತ್ತಷ್ಟು ₹600 ಕೋಟಿಗಳ ಬಿಡುಗಡೆಗೆ ಅನುಮೋದನೆ ನೀಡಲಾಗಿದೆ.
ಇದರ ಜೊತೆಗೆ, 2026–27ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಹೆಸರುಕಾಳು, ಉದ್ದು ಹಾಗೂ ತೊಗರಿ ಸೇರಿದಂತೆ ವಿವಿಧ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸಲು ಅಗತ್ಯವಿರುವ ₹990 ಕೋಟಿ ಅನುದಾನದ ಕುರಿತು ಮುಂದಿನ ಕ್ರಮ ಕೈಗೊಳ್ಳುವಂತೆ ಸೂಚಿಸಲಾಗಿದೆ. ರೈತರ ಹಿತಾಸಕ್ತಿ, ಆರ್ಥಿಕ ಭದ್ರತೆ ಮತ್ತು ಕೃಷಿ ಕ್ಷೇತ್ರದ ಸದೃಢ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಎಂದಿಗೂ ಬದ್ಧವಾಗಿದೆ ಎಂದು ಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.


