ಶಿವಮೊಗ್ಗ: ಎಸ್ಐಆರ್ ಕರ್ತವ್ಯದ ವೇಳೆಯಲ್ಲೇ ಹೃದಯಾಘಾತದಿಂದ ಬಿಎಲ್ಒ ಸಾವನ್ನಪ್ಪಿದ್ದಾರೆ. ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಕಲ್ಲಾಪುರ ಗ್ರಾಮದಲ್ಲಿ ಬಿಎಲ್ಒ ಮಂಜುಳಾ(52) ಮೃತಪಟ್ಟಿದ್ದಾರೆ.
ಕಲ್ಲಾಪುರದ ಕೋಡಿಹೊಸೂರಿನಲ್ಲಿ ಮನೆ ಮನೆಗೆ ತೆರಳಿ ಎಸ್ಐಆರ್ ಪ್ರಕ್ರಿಯೆ ನಡೆಸುತ್ತಿದ್ದ ವೇಳೆಯಲ್ಲಿ ಮಂಜುಳಾ ಅವರು ಕುಸಿದುಬಿದ್ದಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯೆ ಮಂಜುಳಾ ಸಾವನ್ನಪ್ಪಿದ್ದಾರೆ. ಹೊಳೆಹೊನ್ನೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಭದ್ರಾವತಿ ತಾಲೂಕಿನ ಕಲ್ಲಾಪುರದ ಅಂಗನವಾಡಿ ಶಿಕ್ಷಕಿ ಮಂಜುಳಾ ಅವರು ಅರಕೆರೆ ಪಂಚಾಯ್ತಿ ವ್ಯಾಪ್ತಿಯ ಕೊಡಿಹೊಸೂರು ಗ್ರಾಮದ ಅಂಗನವಾಡಿಯಲ್ಲಿ ಎಸ್ಐಆರ್ ಕಾರ್ಯನಿರ್ವಹಿಸುತ್ತಿದ್ದರು. ಇಂದು ಮಧ್ಯಾಹ್ನ ಕರ್ತವ್ಯದ ವೇಳೆಯಲ್ಲಿ ಏಕಾಏಕಿ ಕುಸಿದುಬಿದ್ದ ಅವರನ್ನು ಗ್ರಾಮ ಆಡಳಿತ ಸಿಬ್ಬಂದಿ ಮತ್ತು ಸಹಾಯಕರು ಅರಬಿಳಚಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಿದ್ದಾರೆ. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಭದ್ರಾವತಿ ತಾಲೂಕು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯದಲ್ಲಿ ಶಿಕ್ಷಕಿ ಮಂಜುಳಾ ಮೃತಪಟ್ಟಿದ್ದಾರೆ. ಮಾಹಿತಿ ತಿಳಿದ ತಹಶೀಲ್ದಾರ್ ಪ್ರದೀಪ್ ದೇವಗಿರಿ ಸೇರಿದಂತೆ ಹಲವು ಅಧಿಕಾರಿಗಳು, ಸಹೋದ್ಯೋಗಿಗಳು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.

