ಶಿವಮೊಗ್ಗ: ಗಾಂಜಾ ಮಾರಾಟಕ್ಕೆ ವಿರೋಧ ವ್ಯಕ್ತಪಡಿಸಿದ್ದ ಅಜ್ಜಿಯ ಮೇಲೆ ಸೈಜು ಕಲ್ಲು ಎತ್ತು ಹಾಕಿ ಭೀಕರವಾಗಿ ಕೊಲೆ ಮಾಡಿದ ಆರೋಪಿ ಮೇಲೆ ಪೊಲೀಸರು ಫೈರಿಂಗ್ ಮಾಡಿದ್ದಾರೆ.
55 ವರ್ಷದ ಸುಶೀಲಮ್ಮ ಕೊಲೆಯಾದವರು. ಗಾಂಜಾ ಮಾರಾಟ ಮಾಡಬೇಡ, ಸೇವನೆ ಮಾಡಬೇಡ ಎಂದು ಮೊಮ್ಮಗ ಕಿಶೋರ್(26) ಗೆ ಬುದ್ಧಿವಾದ ಹೇಳಿದ್ದರು. ಪೊಲೀಸರಿಗೆ ದೂರು ಕೊಡುತ್ತೇನೆ ಎಂದು ಅವರು ನಡೆದುಕೊಂಡು ಹೋಗುವಾಗ ಹಿಂಬದಿಯಿಂದ ದಾಳಿ ಮಾಡಿದ ಕಿಶೋರ್ ತಲೆ ಮೇಲೆ ಸೈಜುಕಲ್ಲು ಎತ್ತಿಹಾಕಿ ಭೀಕರವಾಗಿ ಕೊಲೆ ಮಾಡಿದ್ದಾನೆ. ನಂತರ ಸ್ಥಳದಿಂದ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಲು ತೆರಳಿದ್ದಾರೆ. ಈ ವೇಳೆ ಪೊಲೀಸರ ಮೇಲೆ ಆರೋಪಿ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದಾಗ ಫೈರಿಂಗ್ ಮಾಡಲಾಗಿದೆ.
ಶಿವಮೊಗ್ಗದ ಜಿಲ್ಲೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗಾಗಿ ದೊಡ್ಡಪೇಟೆ ಪಿಐ ಹಾಗೂ ಸಿಬ್ಬಂದಿರವರು ತೆರಳಿದ್ದಾರೆ. ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ವಾಜಪೇಯಿ ಬಡಾವಣೆಯಲ್ಲಿ ಆರೋಪಿ ಕಿಶೋರ್ ದಸ್ತಗಿರಿ ಮಾಡಲು ಹೋದಾಗ ಆರೋಪಿ ಕಿಶೋರನಿಗೆ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ತನ್ನ ಬಳಿ ಇದ್ದ ಚಾಕುವಿನಿಂದ ಪೊಲೀಸ್ ಸಿಬ್ಬಂದಿ ಗಣೇಶ್ ಹಲ್ಲೆ ಮಾಡಿ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾನೆ.
ಈ ವೇಳೆ ದೊಡ್ಡಪೇಟೆ ಠಾಣೆ ಪಿಐ ಅವರು ಸಿಬ್ಬಂದಿ ರಕ್ಷಣೆಗಾಗಿ ಒಂದು ಸುತ್ತು ಗುಂಡನ್ನು ಗಾಳಿಯಲ್ಲಿ ಹಾರಿಸಿ ಎಚ್ಚರಿಕೆ ನೀಡಿದ್ದು, ಶರಣಾಗದೆ ಇದ್ದಾಗ ಮತ್ತೊಂದು ಸುತ್ತು ಗುಂಡನ್ನು ಆರೋಪಿ ಕಿಶೋರನ ಎಡಗಾಲಿಗೆ ಹಾರಿಸಿದ್ದು ತಕ್ಷಣ ಕಂಟ್ರೋಲ್ ರೂಮ್ ಗೆ ಕರೆ ಮಾಡಿ ತಿಳಿಸಿದ್ದು, ಇಲಾಖಾ ವಾಹನದಲ್ಲಿಯೇ ಸಿಬ್ಬಂದಿ ಗಣೇಶ್ ಹಾಗೂ ಆರೋಪಿ ಕಿಶೋರನನ್ನು ಆಸ್ಪತ್ರೆಗೆ ಕಳುಹಿಸಿದ್ದಾರೆ.

