ಆಂಧ್ರಪ್ರದೇಶದ ಅನಕಾಪಲ್ಲಿ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರು ಅಸಾಧ್ಯವಾದುದನ್ನು ಸಾಧ್ಯವಾಗಿಸಿದ್ದಾರೆ. ಸಾಮಾನ್ಯವಾಗಿ 4 ಕೆಜಿಗಿಂತ ಹೆಚ್ಚು ತೂಕವಿರುವ ಮಗು ಜನಿಸುವಾಗ ಸಿಸೇರಿಯನ್ ಶಸ್ತ್ರಚಿಕಿತ್ಸೆ ಅನಿವಾರ್ಯ ಎಂಬ ನಂಬಿಕೆಯನ್ನು ಸುಳ್ಳು ಮಾಡಿದ ವೈದ್ಯರ ತಂಡ, 4.8 ಕೆಜಿ ತೂಕದ ಮಗುವಿಗೆ ಸಹಜ ಹೆರಿಗೆ ಮಾಡಿಸುವ ಮೂಲಕ ಮೆಚ್ಚುಗೆಗೆ ಪಾತ್ರವಾಗಿದೆ.
ಏನಿದು ಘಟನೆ? ಪೆಂದುರ್ತಿಯ ಕೆ. ರೂಪಾವತಿ (25) ಎಂಬ ಗರ್ಭಿಣಿ ಮಂಗಳವಾರ ತಡರಾತ್ರಿ ಹೆರಿಗೆ ನೋವಿನಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಮಗುವಿನ ತೂಕ ಅತಿ ಹೆಚ್ಚಾಗಿದ್ದರಿಂದ ಹೆರಿಗೆಯ ಸಮಯದಲ್ಲಿ ಗಂಭೀರ ಸಮಸ್ಯೆ ಎದುರಾಯಿತು. ಮಗುವಿನ ತಲೆ ಹೊರಬಂದರೂ, ಭುಜಗಳು ಸಿಲುಕಿಕೊಂಡಿದ್ದವು (Shoulder Dystocia). ಇಂತಹ ಪರಿಸ್ಥಿತಿ ತಾಯಿ ಮತ್ತು ಮಗು ಇಬ್ಬರಿಗೂ ಪ್ರಾಣಾಪಾಯ ತಂದೊಡ್ಡುವ ಸಾಧ್ಯತೆ ಇರುತ್ತದೆ.
ವೈದ್ಯರ ಸಾಹಸ: ಸೂಪರ್ ಸ್ಪೆಷಾಲಿಟಿ ಸೌಲಭ್ಯಗಳಿಲ್ಲದಿದ್ದರೂ, ವೈದ್ಯಕೀಯ ತಂಡವು ಸತತ ನಾಲ್ಕು ಗಂಟೆಗಳ ಕಾಲ ಶ್ರಮಿಸಿತು. ಮೊದಲು ಸಿಸೇರಿಯನ್ ಮಾಡುವ ಬಗ್ಗೆ ಯೋಚಿಸಿದರೂ, ನಂತರ ವೈದ್ಯಕೀಯ ವಿಜ್ಞಾನದ “ವುಡ್ಸ್ ಕಾರ್ಕ್‌ಸ್ಕ್ರೂ ಮ್ಯಾನೋವರ್” (Woods Corkscrew maneuver) ಎಂಬ ವಿಶೇಷ ತಂತ್ರವನ್ನು ಬಳಸಿ ಮಗುವಿನ ಭುಜಗಳನ್ನು ಸುರಕ್ಷಿತವಾಗಿ ಹೊರತೆಗೆದರು. ಆ ಮೂಲಕ ಶಸ್ತ್ರಚಿಕಿತ್ಸೆಯಿಲ್ಲದೆ ಸಹಜ ಹೆರಿಗೆಯನ್ನು ಯಶಸ್ವಿಗೊಳಿಸಿದರು.
ಸಚಿವರಿಂದ ಅಭಿನಂದನೆ: ಈ ಸಾಧನೆ ಮಾಡಿದ ಡಾ. ಸೌಜನ್ಯ, ಪಿಜಿ ವಿದ್ಯಾರ್ಥಿನಿ ಡಾ. ಮಾನಸ ಮತ್ತು ಶುಶ್ರೂಷಕಿಯರ ತಂಡವನ್ನು ಆರೋಗ್ಯ ಸಚಿವ ವೈ. ಸತ್ಯ ಕುಮಾರ್ ಯಾದವ್ ಅಭಿನಂದಿಸಿದ್ದಾರೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಸಹಜ ಹೆರಿಗೆಗೆ ಆದ್ಯತೆ ನೀಡುತ್ತಿರುವ ವೈದ್ಯರ ಕಾರ್ಯ ಮಾದರಿಯಾಗಿದೆ ಎಂದು ಅವರು ಶ್ಲಾಘಿಸಿದ್ದಾರೆ. ಅನಕಾಪಲ್ಲಿ ಆಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು 400 ಹೆರಿಗೆಗಳಾಗುತ್ತಿದ್ದು, ಅದರಲ್ಲಿ ಶೇ. 65-70 ರಷ್ಟು ಸಹಜ ಹೆರಿಗೆಗಳಾಗಿರುವುದು ಗಮನಾರ್ಹ.

