ಬೆಂಗಳೂರು: ನರೇಗಾ ಯೋಜನೆಯ ಹೆಸರು ಬದಲಾವಣೆ ಮಾಡಿರುವ ಕೇಂದ್ರ ಸರ್ಕಾರದ ನಡೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿ ರಾಜ್ಯ ಕಾಂಗ್ರೆಸ್ ಸರ್ಕಾರ ಕರೆದಿದ್ದ ವಿಶೇಷ ಅಧಿವೇಶನದ ಮೊದಲ ದಿನವೇ ವಿಧಾನಸಭೆಯಲ್ಲಿ ಹೈಡ್ರಾಮಾ ನಡೆದಿದೆ. ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಭಾಷಣ ಓದದೇ ತೆರಳಿದ್ದಾರೆ.
ರಾಜ್ಯ ಸರ್ಕಾರ ಹಾಗೂ ರಾಜ್ಯಪಾಲರ ಸಂಘರ್ಷದ ನಡುವೆಯೇ ಬೆಳಿಗ್ಗೆ 11 ಗಂಟೆಗೆ ವಿಧಾನಮಂಡಲ ಜಂಟಿ ಅಧಿವೇಶನ ಆರಂಭವಾಗಿತ್ತು. ಅಧಿವೇಶನಕ್ಕೆ ವಿಧಾನಸೌಧಕ್ಕೆ ಆಗಮಿಸಿದ ರಾಜ್ಯಪಾಲರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ, ಸ್ಪೀಕರ್ ಯು.ಟಿಖಾದರ್, ಸಭಾಪತಿ ಬಸವರಾಜ್ ಹೊರಟ್ಟಿ, ಸಚಿವರು-ಶಾಸಕರು ಸ್ವಾಗತಿಸಿದರು. ಜಂಟಿ ಅಧಿವೇಶನದಲ್ಲಿ ಭಾಷಣ ಆರಂಭಿಸಿದ ರಾಜ್ಯಪಾಲರು ಕೇವಲ ಎರಡು ಸಾಲಿನಲ್ಲೇ ಭಾಷಣ ಮುಗಿಸಿ ತೆರಳಿದ್ದಾರೆ. ರಾಜ್ಯ ಸರ್ಕಾರ ಕೊಟ್ಟ ಭಾಷಣವನ್ನು ಓದಲು ನಿರಾಕರಿಸಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಭಾಷಣ ಓದದೇ ಸದನದಿಂದ ತೆರಳಿದ್ದಾರೆ.
ರಾಜ್ಯಪಾಲರ ನಡೆಗೆ ಕಾಂಗ್ರೆಸ್ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದು, ಸದನದಲ್ಲಿಯೇ ರಾಜ್ಯಪಾಲರ ವಿರುದ್ಧ ಘೋಷಣೆಗಳನ್ನು ಕೂಗಿದರು. ಸದನದಿಂದ ಹೊರ ನಡೆಯುತ್ತಿದ್ದ ರಾಜ್ಯಪಾಲ ಗೆಹ್ಲೋಟ್ ಅವರನ್ನು ವಿಧಾನ ಪರಿಷತ್ ಹಿರಿಯ ಕಾಂಗ್ರೆಸ್ ಸದಸ್ಯ ಬಿ.ಕೆ.ಹರಿಪ್ರಸಾದ್ ಅಡ್ಡಗಟ್ಟಿದ್ದಾರೆ. ಸದನದ ಬಾಗಿಲಿನಲ್ಲಿಯೇ ರಾಜ್ಯಪಾಲರನ್ನು ತಡೆದು ನಿಲ್ಲಿಸಲು ಯತ್ನಿಸಿದ್ದಾರೆ. ಅಧಿವೇಶನದಲ್ಲಿ ಭಾಷಣ ಓದಲೇಬೇಕು. ಇಲ್ಲವಾದಲ್ಲಿ ಅಸಂವಿಧಾನಿಕ ನಡೆಯಾಗುತ್ತದೆ ಎಂದು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ. ಈ ವೇಳೆ ರಾಜ್ಯಪಾಲರ ಭದ್ರತಾ ಸಿಬ್ಬಂದಿಗಳು ಎಂಟ್ರಿಕೊಟ್ಟಿದ್ದು ರಾಜ್ಯಪಾಲರನ್ನು ಸದನದಿಂದ ಹೊರ ಕರೆತಂದಿದ್ದಾರೆ.
ಜಂಟಿ ಅಧಿವೇಶನದ ಮೊದಲ ದಿನವೇ ಸದನದಲ್ಲಿ ಭಾರಿ ಹೈಡ್ರಾಮಾ ಸೃಷ್ಟಿಯಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸದಸ್ಯರು ರಾಜ್ಯಪಾಲರ ನಡೆಯನ್ನು ತೀವ್ರವಾಗಿ ಖಂಡಿಸಿದ್ದು, ಇದು ಸಂವಿಧಾನಕ್ಕೆ ಹಾಗೂ ಕರ್ನಾಟಕದ ಇತಿಹಾಸಕ್ಕೆ ರಾಜ್ಯಪಾಲರು ಮಾಡುತ್ತಿರುವ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಧಿವೇಶನದಲ್ಲಿ ರಾಜ್ಯಪಾಲರು ಭಾಷಣ ಮಾಡದೇ ಹೊರನಡೆದ ಘಟನೆ ಕರ್ನಾಟಕದ ರಾಜಕೀಯ ಇತಿಹಾಸದಲ್ಲಿಯೇ ಇದೇ ಮೊದಲು ಎನ್ನಲಾಗಿದೆ.

