ಕರ್ನಾಟಕದಲ್ಲಿ ಸರ್ಕಾರಿ ನೌಕರರ ಕರ್ತವ್ಯಕ್ಕೆ ಅಡ್ಡಿಪಡಿಸುವ ಹಲವಾರು ಘಟನೆಗಳು ನಡೆದಿವೆ. ಈ ಕುರಿತು ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಆತಂಕವನ್ನು ವ್ಯಕ್ತಪಡಿಸಿದೆ.
ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ನೇತೃತ್ವದ ನಿಯೋಗ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಭೇಟಿಯಾಗಿ ಮನವಿಯೊಂದನ್ನು ಸಲ್ಲಿಕೆ ಮಾಡಿದೆ.
ಈ ಮನವಿಯು ಸರ್ಕಾರಿ ನೌಕರರ ಕರ್ತವ್ಯದ ವೇಳೆಯಲ್ಲಿ ಕೆಲವು ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರಿಂದ ನಡೆಯುವ ಹಲ್ಲೆ, ದೌರ್ಜನ್ಯ, ಅವಾಚ್ಯ ಶಬ್ದಗಳಿಂದ ನಿಂದನೆ ಮತ್ತು ಕಿರುಕುಳ ನೀಡುತ್ತಿರುವ ವ್ಯಕ್ತಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲು ಪೂರಕವಾಗಿ ಸೂಕ್ತ ಕಾನೂನು ರೂಪಿಸಿ ರಕ್ಷಣೆ ನೀಡುವ ಕುರಿತು ಎಂಬ ವಿಷಯವನ್ನು ಒಳಗೊಂಡಿದೆ.
ಈ ವಿಷಯಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯದಲ್ಲಿ ಇತ್ತೀಚಿನ ದಿನಗಳಲ್ಲಿ ರಾಜ್ಯ ಸರ್ಕಾರದ ಅಧಿಕಾರಿ/ ನೌಕರರ ಕರ್ತವ್ಯದ ವೇಳೆಯಲ್ಲಿ ಕೆಲವು ಸಾರ್ವಜನಿಕರಿಂದ ಹಲ್ಲೆ, ದೌರ್ಜನ್ಯ, ಕಿರುಕುಳ ನಡೆಯುತ್ತಿರುವುದು ಹಾಗೂ ಸಾರ್ವಜನಿಕ ಸಭೆ-ಸಮಾರಂಭಗಳಲ್ಲಿ ಗಣ್ಯ ವ್ಯಕ್ತಿಗಳು ಅವಾಚ್ಯ ಮತ್ತು ಅಸಂವಿಧಾನಿಕ ಪದಗಳನ್ನು ಬಳಸಿ ನಿಂದನೆ ಮಾಡುವಂತಹ ಪ್ರಕರಣಗಳು ಹವ್ಯಾಹತವಾಗಿ ನಡೆಯುತ್ತಿರುವುದು ದಿನಪತ್ರಿಕೆ/ ಸುದ್ಧಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವುದನ್ನು ತಾವೂ ಸಹ ಗಮನಿಸಿರುತ್ತೀರಿ.
ಇದರಿಂದ ರಾಜ್ಯದ ಆಡಳಿತ ನಿರ್ವಹಣೆ ಹಾಗೂ ಸರ್ಕಾರಕ್ಕೂ ಮುಜುಗರ ಉಂಟಾಗುತ್ತಿರುವುದಲ್ಲದೆ, ಸೇವಾನಿರತ ಅಧಿಕಾರಿ/ ನೌಕರರ ನೈತಿಕ ಸ್ಥೆರ್ಯವನ್ನು ಕುಂದಿಸುತ್ತಿದೆ.
ರಾಜ್ಯ ಸರ್ಕಾರದ ಅಧಿಕಾರಿ /ನೌಕರರ ಒತ್ತಡದ ವಿವರಣೆ
* ರಾಜ್ಯದ ಸುಮಾರು 3 ಕೋಟಿ ಜನಸಂಖ್ಯೆ ಇದ್ದ ಅವಧಿಯಲ್ಲಿ 7.23 ಲಕ್ಷ ಮಂಜೂರಾದ ಸರ್ಕಾರಿ ಹುದ್ದೆಗಳಿದ್ದವು. ಆದರೆ ಹಾಲಿ 6.50 ಕೋಟಿಗೂ ಹೆಚ್ಚಿನ ಜನಸಂಖ್ಯೆಗೆ 4.95 ಲಕ್ಷ ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. 2.76 ಲಕ್ಷ ಹುದ್ದೆಗಳು ಹಾಲಿ ಖಾಲಿಯಿರುತ್ತವೆ. ಈ ಹುದ್ದೆಗಳ ಕಾರ್ಯ ಹಂಚಿಕೆಯೂ ಸೇವಾ ನಿರತ ನೌಕರರಿಗೆ ಹೆಚ್ಚುವರಿ ಕಾರ್ಯಭಾರದ ಒತ್ತಡವಿದೆ.
* ರಾಜ್ಯದ ಜನಸಂಖ್ಯೆಯ ಹೆಚ್ಚಳಕ್ಕೆ ಅನುಗುಣವಾಗಿ ಸರ್ಕಾರ ಹೊಸದಾಗಿ ತಾಲ್ಲೂಕು/ ಜಿಲ್ಲೆಗಳನ್ನು ಹೆಚ್ಚಳ ಮಾಡುತ್ತಾ ಬಂದಿದ್ದು, ಅದಕ್ಕೆ ಪೂರಕವಾಗಿ ಸರ್ಕಾರಿ ಹುದ್ದೆಗಳನ್ನೂ ಸಹ ಹೆಚ್ಚಳ ಮಾಡಬೇಕಾಗಿರುತ್ತದೆ. ಆದರೆ ಈ ಕ್ರಮ ಸರ್ಕಾರದಿಂದ ಈವರೆಗೂ ಆಗಿರುವುದಿಲ್ಲ.
* ರಾಜ್ಯದ ಬಜೆಟ್ ಗಾತ್ರ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದ್ದು, ಅದಕ್ಕೆ ಪೂರಕವಾಗಿ ಕೆಲಸವೂ ಹೆಚ್ಚಾಗುತ್ತಿದ್ದು, ಈ ಹೆಚ್ಚಿನ ಕಾರ್ಯವನ್ನೂ ಹಾಲಿ ನೌಕರರೇ ನಿರ್ವಹಿಸುತ್ತಿದ್ದಾರೆ.
* ಆಯಾ ಸರ್ಕಾರಗಳು ಅಧಿಕಾರಕ್ಕೆ ಬಂದ ಸಂದರ್ಭಗಳಲ್ಲಿ ಜನಸಾಮಾನ್ಯರಿಗೆ ಪೂರಕವಾಗಿ ಹೊಸ ಹೊಸ ಯೋಜನೆಗಳನ್ನು ಜಾರಿಗೊಳಿಸುವುದರಿಂದ ಸಹಜವಾಗಿಯೇ ಕೆಲಸದ ಒತ್ತಡ ಹೆಚ್ಚಾಗಿದ್ದರೂ ಯಾವುದೇ ಹೊಸ ಹುದ್ದೆಗಳ ಸೃಜನೆಯಾಗಿರುವುದಿಲ್ಲ. ಆದಾಗ್ಯೂ, ಅಂತಹ ಯೋಜನೆಗಳನ್ನು ಕಾರ್ಯಗತಗೊಳಿಸಿ ಜನಸಾಮಾನ್ಯರಿಗೆ ಮುಟ್ಟಿಸುವ ಗುರುತರ ಜವಾಬ್ದಾರಿ ಸರ್ಕಾರದ ಅಧಿಕಾರಿ/ ನೌಕರರ ಮೇಲಿರುತ್ತದೆ. ಹೆಚ್ಚುವರಿ ಜವಾಬ್ದಾರಿಗೆ ಪೂರಕವಾಗಿ ಹುದ್ದೆ ಸೃಜನೆಜಾಗುತ್ತಿಲ್ಲ.
* ಈ ಮಧ್ಯೆ ಕೇಂದ್ರ ಸರ್ಕಾರವೂ ಸಹ ಆಗಿದ್ದಾಗ್ಗೆ ಹೊಸ ಹೊಸ ಯೋಜನೆಗಳನ್ನು ರಾಷ್ಟ್ರವ್ಯಾಪ್ತಿ ಜಾರಿಗೆ ತಂದ ಸಂದರ್ಭಗಳಲ್ಲಿ ಅಂತಹ ಯೋಜನೆಗಳನ್ನೂ ಸಹ ರಾಜ್ಯದ ಸರ್ಕಾರಿ ನೌಕರರು ನಿರ್ವಹಿಸುತ್ತಿದ್ದಾರೆ.
* ಪ್ರತಿ ವರ್ಷದ ಆಯ-ವ್ಯಯದಲ್ಲಿ ಸರ್ಕಾರ ಇಲಾಖಾವಾರು ನಿಗದಿಪಡಿಸುವ ತೆರಿಗೆ ಸಂಗ್ರಹಿಸುವ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
* ಆಡಳಿತ ಸುಧಾರಣಾ ಆಯೋಗ-2 ಸಲ್ಲಿಸಿರುವ ವರದಿಗಳಲ್ಲಿ ರಾಜ್ಯದ ಸುಗಮ ಆಡಳಿತ ಹಿತದೃಷ್ಟಿಯಿಂದ ಹಾಗೂ ಜನಸಂಖ್ಯೆ ಹೆಚ್ಚಳಕ್ಕೆ ಅನುಗುಣವಾಗಿ ಹುದ್ದೆಗಳ ಹೆಚ್ಚಳಕ್ಕೆ ಹಾಗೂ ಖಾಲಿ ಹುದ್ದೆಗಳ ಭರ್ತಿಗೆ ಶಿಫಾರಸ್ಸು ಮಾಡುವ ಬದಲು, ಒಟ್ಟು ಮಂಜೂರಾದ ಹುದ್ದೆಗಳಲ್ಲೇ ಕೆಲವು ಹುದ್ದೆಗಳನ್ನು ಕಡಿತಗೊಳಿಸುವಂತೆ ಹಾಗೂ ಮರು ಹೊಂದಾಣಿಕೆ ಮಾಡಿಕೊಳ್ಳಲು ಶಿಫಾರಸ್ಸು ಮಾಡಿರುತ್ತದೆ.
* ರಾಜ್ಯ ಸರ್ಕಾರದ ಪ್ರತಿ ವರ್ಷದ ಆಯ-ವ್ಯಯವನ್ನು ಸಿದ್ಧಪಡಿಸಲು ಪೂರಕ ಮಾಹಿತಿಯನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ಮಾಡುವುದು ಹಾಗೂ ಆಯ-ವ್ಯಯದಲ್ಲಿ ನಿರ್ಧಿಷ್ಟಪಡಿಸುವ ಗರಿಷ್ಠ ಮಿತಿಯನ್ನು ಸರ್ಕಾರಿ ನೌಕರರು ಸಾಧಿಸುವ ಗುರುತರ ಜವಾಬ್ದಾರಿಯನ್ನು ನಿರ್ವಹಿಸುತ್ತಿದ್ದಾರೆ.
* ಸರ್ಕಾರಿ ನೌಕರರು ಕಚೇರಿ/ ಇಲಾಖೆ ಕರ್ತವ್ಯಗಳ ಜೊತೆ ಜೊತೆಗೆ ಪ್ರಾಕೃತಿಕ ವಿಕೋಪ ಸಂದರ್ಭಗಳಲ್ಲಿ ಜೀವದ ಹಂಗು ತೊರೆದು ರಾಜ್ಯ ಸರ್ಕಾರ ನೀಡುವ ನಿರ್ದೇಶನದಂತೆ ದಕ್ಷತೆಯಿಂದ ಕರ್ತವ್ಯ ನಿರ್ವಹಿಸುತ್ತಿದ್ದಾರೆ ಹಾಗೂ ಮತದಾರರ ಪಟ್ಟಿ ಪರಿಷ್ಕರಣೆ, ಜನಗಣಗತಿ, ಜಾತಿ ಸಮೀಕ್ಷೆ, ಜಾನುವಾರು ಸಮೀಕ್ಷೆ ಸೇರಿದಂತೆ ಇತರೆ ಆಯೋಗಗಳು ಸೂಚಿಸುವ ಗಣತಿ ಕಾರ್ಯಗಳು, ಲೋಕಸಭೆ, ವಿಧಾಸಭೆ, ವಿಧಾನ ಪರಿಷತ್, ಪ್ರಾಧಿಕಾರಗಳು, ಜಿಲ್ಲೆ, ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಸೇರಿದಂತೆ ಪಾಲಿಕೆ/ ನಗರಸಭೆ/ ಪಟ್ಟಣ ಪಂಚಾಯಿತಿ ಚುನಾವಣೆ ಕರ್ತವ್ಯಗಳನ್ನು ಯಶಸ್ವಿಯಾಗಿ ನಿರ್ವಹಿಸುತ್ತಿದ್ದಾರೆ.
* ಮೇಲ್ಕಂಡ ಎಲ್ಲಾ ಕರ್ತವ್ಯಗಳನ್ನು ಸರ್ಕಾರಿ ನೌಕರರು ಸೇವಾ ನಿಯಮಗಳು ಮತ್ತು ಸೇವಾ ನಡತೆ ನಿಯಮಗಳು ಹಾಗೂ ಸರ್ಕಾರದ ನಿರ್ದೆಶನ, ಕಾನೂನಿನ ನಿರ್ಬಂಧಕ್ಕೊಳಪಟ್ಟು ಕಾರ್ಯ ನಿರ್ವಹಿಸುತ್ತಿದ್ದಾರೆ.
* ಕರ್ತವ್ಯಗಳನ್ನು ನಿರ್ವಹಿಸುವ ಸಂದರ್ಭಗಳಲ್ಲಿ ಅನಿರೀಕ್ಷಿತವಾಗಿ ಹಾಗೂ ಒತ್ತಡದಿಂದಾಗಿ ಉಂಟಾಗುವ ಪ್ರಮಾದಗಳಿಗಾಗಿ ಶಿಸ್ತು ಕ್ರಮಗಳನ್ನು ಸಹ ಸರ್ಕಾರಿ ನೌಕರರು ಎದುರಿಸಬೇಕಾಗುತ್ತದೆ.
* ಕರ್ತವ್ಯ ವೇಳೆಯಲ್ಲಿ ಸರ್ಕಾರಿ ನೌಕರರ ಮೇಲೆ ಉಂಟಾಗುವ ಪ್ರಮಾದಗಳ ಬಗ್ಗೆ ನೇರವಾಗಿ ಸರ್ಕಾರಕ್ಕೆ ಅಥವಾ ಮಾಧ್ಯಮಗಳಿಗೆ ಮಾಹಿತಿ ನೀಡುವ ಅಥವಾ ಪ್ರಶ್ನೆ ಮಾಡುವ ಮುಕ್ತ ಅವಕಾಶ ಸರ್ಕಾರಿ ನೌಕರರಿಗೆ ಇರುವುದಿಲ್ಲ.
ರಾಜ್ಯ ಸರ್ಕಾರಿ ನೌಕರರು ಮೇಲೆ ಹೇಳಲಾದ ಹೆಚ್ಚುವರಿ ಕರ್ತವ್ಯದಲ್ಲಿಯೂ ಈ ಕೆಳಕಂಡಂತೆ ರಾಜ್ಯದ ಪ್ರಗತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿದ್ದಾರೆ.
ರಾಷ್ಟ್ರ ಮಟ್ಟದಲ್ಲಿ ಕರ್ನಾಟಕ ರಾಜ್ಯದ ಪ್ರಗತಿಯ ವಿವರಗಳು
ಜನಸಂಖ್ಯೆಯ ಒಟ್ಟು ನಿವ್ವಳ ಆದಾಯದಲ್ಲಿ: 1ನೇ ಸ್ಥಾನ
ಜಿ.ಎಸ್.ಟಿ. ತೆರಿಗೆ ಸಂಗ್ರಹದಲ್ಲಿ: 2ನೇ ಸ್ಥಾನ
ನೇರ ತೆರಿಗೆ ಸಂಗ್ರಹದಲ್ಲಿ: 2ನೇ ಸ್ಥಾನ
ರಾಜ್ಯದ ಮೂಲ ಸೌಕರ್ಯಗಳ ಅಭಿವೃದ್ಧಿಯಲ್ಲಿ: 2ನೇ ಸ್ಥಾನ
ರಾಜ್ಯದ ಅಭಿವೃದ್ಧಿಯಲ್ಲಿ (ಜಿ.ಎಸ್.ಡಿ.ಪಿ.ಮಾನದಂಡದಂತೆ): 4ನೇ ಸ್ಥಾನ
ಮೇಲೆ ಪ್ರಸ್ತಾಪಿಸಿರುವಂತೆ ರಾಜ್ಯದ ಪ್ರಗತಿಯಲ್ಲಿ ದಕ್ಷತೆ, ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸುತ್ತಿರುವ ರಾಜ್ಯ ಸರ್ಕಾರದ ಅಧಿಕಾರಿ/ ನೌಕರರ ಮೇಲೆ ಕೆಲವು ಗಣ್ಯವ್ಯಕ್ತಿಗಳು ಹಾಗೂ ಸಾರ್ವಜನಿಕರು ಹಲ್ಲೆ, ದೌರ್ಜನ್ಯ, ಅವಾಚ್ಯ ಶಬ್ದಗಳಿಂದ ನಿಂದನೆ, ಕಿರುಕುಳಗಳಂತಹ ಪ್ರಕರಣಗಳು ಪದೇ ಪದೇ ಮರುಕಳಿಸುತ್ತಿರುವುದು ಕರ್ತವ್ಯನಿರತ ಅಧಿಕಾರಿ/ ನೌಕರರ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ದುಷ್ಪರಿಣಾಮ ಉಂಟಾಗುತ್ತಿದೆ.
ಇದರಿಂದ ಸಾರ್ವಜನಿಕ ವಲಯದಲ್ಲಿ ಸರ್ಕಾರದ ಆಡಳಿತ ವ್ಯವಸ್ಥೆಯ ಮೇಲೆ ಕೆಟ್ಟ ಹೆಸರು ಬರುತ್ತದೆ. ಈ ಸಂಬಂಧ ಸರ್ಕಾರಿ ನೌಕರರ ರಕ್ಷಣೆಗಾಗಿ ಸೂಕ್ತ ಕಾನೂನುಗಳನ್ನು ರಚಿಸುವಂತೆ ಸಂಘವು ಸರ್ಕಾರಕ್ಕೆ ಅನೇಕ ಬಾರಿ ಮನವಿ ಮಾಡಿರುತ್ತದೆ.
ರಾಜ್ಯದಲ್ಲಿ ಪ್ರಸ್ತುತ 2.73 ಲಕ್ಷ ಹುದ್ದೆಗಳು ಖಾಲಿ ಇದ್ದು ರಾಜ್ಯದ ಅಭಿವೃದ್ಧಿಗಾಗಿ ದಕ್ಷತೆ ಮತ್ತು ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಣೆ ಮಾಡುತ್ತಿರುವ ಅಧಿಕಾರಿ/ ನೌಕರರ ಕರ್ತವ್ಯದ ವೇಳೆಯಲ್ಲಿ ಕೆಲವು ಗಣ್ಯ ವ್ಯಕ್ತಿಗಳು ಹಾಗೂ ಸಾರ್ವಜನಿಕರಿಂದ ಹಲ್ಲೆ, ದೌರ್ಜನ್ಯ, ಅವಾಚ್ಯ ಶಬ್ದಗಳಿಂದ ನಿಂದನೆ, ಕಿರುಕುಳ ನಡೆದಲ್ಲಿ ಅಂತಹವರನ್ನು ಶಿಕ್ಷೆಗೆ ಒಳಪಡಿಸಲು ಪೂರಕವಾಗುವಂತಹ ಕಠಿಣ ಕಾನೂನು ರೂಪಿಸುವ ಮೂಲಕ ಅಧಿಕಾರಿ/ ನೌಕರರು ಮುಕ್ತ ವಾತಾವರಣದಲ್ಲಿ ದಕ್ಷತೆಯಿಂದ ಕರ್ತವ್ಯ ನಿರ್ವಹಿಸಲು ಅವಕಾಶ ಕಲ್ಪಿಸುವಂತೆ ಕೋರಿದೆ.

