ಬೆಂಗಳೂರು: ಗೃಹಲಕ್ಷ್ಮಿ ಯೋಜನೆಗೆ ಹಣ ನೀಡುವ ಕಾರಣಕ್ಕೆ ಶಂಕಿತ ಕಾರ್ಡ್ ದಾರರೆಂದು ಬಿಪಿಎಲ್ ಕಾರ್ಡ್ ರದ್ದುಪಡಿಸಲಾಗಿದೆ. ಇದರಿಂದ ಬಡವರು ಪಡಿತರ ಸೇರಿ ಆರೋಗ್ಯ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದು, ಈ ಬಗ್ಗೆ ಪುನರ್ ಪರಿಶೀಲಿಸಿ ಅರ್ಹರಿಗೆ ಕಾರ್ಡ್ ನೀಡಬೇಕೆಂದು ಶಾಸಕ ಕೆ. ಗೋಪಾಲಯ್ಯ ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಬಜೆಟ್ ಕುರಿತ ಚರ್ಚೆಯಲ್ಲಿ ಮಾತನಾಡಿದ ಅವರು, ಅಕ್ರಮ ಕಾರ್ಡ್ ಮತ್ತು ನಿಯಮ ಮೀರಿ ಕಾರ್ಡ್ ಹೊಂದಿದವರನ್ನು ಪರಿಶೀಲಿಸಬೇಕು. ವಾಸ್ತವಾಂಶ ಪರಿಶೀಲಿಸಲು ಅಧಿಕಾರಿಗಳು ಯಾವುದೇ ಮನೆಗೆ ಭೇಟಿ ನೀಡದೆ ಕಾರ್ಡ್ ರದ್ದು ಮಾಡಿದ್ದಾರೆ. ಸ್ವಂತ ಉದ್ಯೋಗಕ್ಕೆ ಕಾರ್ ಖರೀದಿಸಿದವರ ಬಿಪಿಎಲ್ ಕಾರ್ಡುಗಳನ್ನು ಕೂಡ ರದ್ದು ಮಾಡಲಾಗಿದೆ. ಈ ಬಗ್ಗೆ ಪುನರ್ ಪರಿಶೀಲಿಸಬೇಕು ಎಂದು ಹೇಳಿದ್ದಾರೆ.
ರಾಜ್ಯದಲ್ಲಿ 29 ಲಕ್ಷ ಎಪಿಎಲ್ ಕಾರ್ಡ್ ದಾರರಿದ್ದು, ಅವರಿಗೆ ಕೆಜಿಗೆ 15 ರೂ. ದರದಲ್ಲಿ ಅಕ್ಕಿ ನೀಡಲಾಗುತ್ತಿತ್ತು. ಈ ಸರ್ಕಾರ ಬಂದ ಮೇಲೆ ಅಕ್ಕಿ ಕೊಡುವುದನ್ನು ನಿಲ್ಲಿಸಿದ್ದು, ಅವರಿಗೆ ಅಕ್ಕಿಯ ಜೊತೆಗೆ ಉಚಿತ ವೈದ್ಯಕೀಯ ಸೇವೆ ಕಲ್ಪಿಸಲು ಸರ್ಕಾರ ಕ್ರಮ ವಹಿಸಬೇಕು ಎಂದು ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಚುನಾವಣೆ ವೇಳೆ ಘೋಷಣೆ ಮಾಡಿದಂತೆ ಪ್ರತಿ ಕುಟುಂಬಕ್ಕೆ 10 ಕೆಜಿ ಅಕ್ಕಿ ನೀಡಬೇಕು. ಆದರೆ ಈಗ ಕೊಡುತ್ತಿರುವ 5 ಕೆಜಿ ಅಕ್ಕಿಯನ್ನು ಕೂಡ ಸಮಯಕ್ಕೆ ಸರಿಯಾಗಿ ಕೊಡುತ್ತಿಲ್ಲ ಎಂದು ದೂರಿದ್ದಾರೆ.

