ಇಷ್ಟು ದಿನ ಉಚಿತವಾಗಿ ನಡೆಯುತ್ತಿದ್ದ ಯುಪಿಐ ಮೇಲೆ ಇದೀಗ ಶುಲ್ಕ ವಿಧಿಸಲಾಗುತ್ತದೆ ಎಂಬ ಚರ್ಚೆ ಜೋರಾಗಿದೆ. ಅಕ್ಟೋಬರ್ 15ರಿಂದ ಹೊಸ ನಿಯಮಗಳು ಜಾರಿಗೆ ಬರಲಿದ್ದು, ಆನ್‌ಲೈನ್‌ನಲ್ಲಿ ₹2,000ಕ್ಕಿಂತ ಹೆಚ್ಚಿನ ಪಾವತಿಗಳಿಗೆ ಶುಲ್ಕ ವಿಧಿಸಲಾಗುತ್ತದೆ ಎಂಬ ಸುದ್ದಿಗಳು ಹರಿದಾಡುತ್ತಿವೆ.
ಕೆಲವು ರೀತಿಯ ವಹಿವಾಟುಗಳಿಗೆ ₹5, ಇನ್ನು ಕೆಲವು ವಹಿವಾಟುಗಳಿಗೆ ಅದಕ್ಕಿಂತ ಹೆಚ್ಚಿನ ಶುಲ್ಕ ಪಾವತಿಸಬೇಕಾಗುತ್ತದೆ ಎಂಬ ಪ್ರಚಾರವೂ ನಡೆಯುತ್ತಿದೆ. ಇದರಿಂದ ಇನ್ನು ಮುಂದೆ ಯುಪಿಐ ಮೂಲಕ ಹಣ ಕಳುಹಿಸಿದರೂ, ಅಂಗಡಿಯಲ್ಲಿ ಪಾವತಿ ಮಾಡಿದರೂ ನಮ್ಮ ಜೇಬಿಗೆ ಹೆಚ್ಚುವರಿ ಹೊರೆ ಬೀಳುತ್ತದೆಯೇ ಎಂಬ ಆತಂಕ ಜನರಲ್ಲಿ ಮೂಡಿದೆ.
ಆದರೆ ಈ ಶುಲ್ಕ ಯಾರಿಗೆ ಅನ್ವಯಿಸುತ್ತದೆ? ಎಷ್ಟು ಪಾವತಿಸಬೇಕು? ಗ್ರಾಹಕರ ಜೇಬಿನಿಂದ ಹಣ ಹೋಗುತ್ತದೆಯೇ ಅಥವಾ ವ್ಯಾಪಾರಿಯೇ ಭರಿಸಬೇಕೇ? ಯುಪಿಐ ಬಳಸುವ ಪ್ರತಿಯೊಬ್ಬರ ಮೇಲೂ ಶುಲ್ಕದ ಹೊರೆ ಬೀಳುತ್ತದೆಯೇ ಎಂಬ ಪ್ರಶ್ನೆಗಳು ಸಹಜ.
ಯುಪಿಐ ಮೂಲಕ ಹಣ ಕಳುಹಿಸಿದರೆ ಶುಲ್ಕ ಇದೆಯೇ?
ನೀವು ಕಿರಾಣಿ ಅಂಗಡಿಯಲ್ಲಿ ಸಾಮಾನು ಖರೀದಿಸಿದ್ದೀರಿ ಅಥವಾ ಬೇರೆ ಅಂಗಡಿಯಲ್ಲಿ ಶಾಪಿಂಗ್ ಮಾಡಿದ್ದೀರಿ ಎಂದುಕೊಳ್ಳಿ. ಫೋನ್ ತೆಗೆದು ಯುಪಿಐ ಮೂಲಕ ಹಣ ಪಾವತಿಸಿದರೆ ಹೆಚ್ಚುವರಿಯಾಗಿ ಹಣ ನೀಡಬೇಕೇ? ಅಗತ್ಯವಿಲ್ಲ.
ನಿಮ್ಮ ಸ್ನೇಹಿತರಿಗೆ ₹10,000 ಕಳುಹಿಸಿದರೆ ಶುಲ್ಕ ವಿಧಿಸಲಾಗುತ್ತದೆಯೇ? ಅದೂ ಇಲ್ಲ.
ಹಾಗಾದರೆ ಯುಪಿಐ ಶುಲ್ಕದ ಬಗ್ಗೆ ಬರುತ್ತಿರುವ ಸುದ್ದಿಗಳೇನು ಎಂಬ ಗೊಂದಲ ಸಹಜ. ಹೊಸ ನಿಯಮಗಳ ಪ್ರಕಾರ ಎಲ್ಲರೂ ಯುಪಿಐಗೆ ಶುಲ್ಕ ಪಾವತಿಸಬೇಕಾಗಿಲ್ಲ. ಅಕ್ಟೋಬರ್ 15ರಿಂದ ಕೆಲವು ರೀತಿಯ ವ್ಯಾಪಾರಿ ಪಾವತಿಗಳಿಗೆ ಮಾತ್ರ ಎಂಡಿಆರ್ (MDR) ಎಂಬ ಶುಲ್ಕ ಅನ್ವಯಿಸುತ್ತದೆ. ಅದನ್ನು ಸಾಮಾನ್ಯ ಗ್ರಾಹಕರು ಪಾವತಿಸಬೇಕಾಗಿಲ್ಲ; ವ್ಯಾಪಾರಿಯೇ ಭರಿಸಬೇಕು.
ವ್ಯಕ್ತಿಯಿಂದ ವ್ಯಕ್ತಿಗೆ ಹಣ ಕಳುಹಿಸಿದರೆ ಶುಲ್ಕವಿಲ್ಲ
ಸರಳವಾಗಿ ಹೇಳುವುದಾದರೆ, ನೀವು ಒಬ್ಬ ವ್ಯಕ್ತಿಗೆ ಹಣ ಕಳುಹಿಸಿದರೆ ಯಾವುದೇ ಶುಲ್ಕ ಇರುವುದಿಲ್ಲ. ಎಷ್ಟು ಮೊತ್ತ ಕಳುಹಿಸಿದರೂ ಇದೇ ನಿಯಮ.
ಉದಾಹರಣೆಗೆ, ಸ್ನೇಹಿತರಿಗೆ ₹10,000 ಅಥವಾ ಕುಟುಂಬದ ಸದಸ್ಯರಿಗೆ ₹50,000 ಕಳುಹಿಸಿದರೂ ಯುಪಿಐ ಶುಲ್ಕ ಇರುವುದಿಲ್ಲ.
ಅದೇ ರೀತಿ ಅಂಗಡಿಯಲ್ಲಿ ₹2,000ವರೆಗೆ ಯುಪಿಐ ಮೂಲಕ ಪಾವತಿಸಿದರೂ ಯಾವುದೇ ಶುಲ್ಕವಿಲ್ಲ. ಅಂದರೆ ₹500, ₹1,000 ಅಥವಾ ₹2,000 ಬಿಲ್ ಪಾವತಿಸುವಾಗ ನೀವು ಹೆಚ್ಚುವರಿಯಾಗಿ ಒಂದು ರೂಪಾಯಿಯನ್ನೂ ನೀಡಬೇಕಾಗಿಲ್ಲ.
₹2,000ಕ್ಕಿಂತ ಹೆಚ್ಚಿನ ಪಾವತಿ ಮಾಡಿದರೆ?
ಇಲ್ಲಿಯೇ ಹೊಸ ನಿಯಮ ಅನ್ವಯಿಸುತ್ತದೆ. ವ್ಯಾಪಾರಿಗೆ ₹2,000ಕ್ಕಿಂತ ಹೆಚ್ಚಿನ ಯುಪಿಐ ಪಾವತಿ ಮಾಡಿದಾಗ ಕೆಲವು ಸಂದರ್ಭಗಳಲ್ಲಿ 0.4% ಎಂಡಿಆರ್ ಅನ್ವಯಿಸುತ್ತದೆ.
ಆದರೆ ಈ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡುವಂತಿಲ್ಲ. ವ್ಯಾಪಾರಿಯೇ ಭರಿಸಬೇಕು. ಈ ಶುಲ್ಕವು ಪ್ರತಿ ವಹಿವಾಟಿಗೆ ಗರಿಷ್ಠ ₹300ಕ್ಕೆ ಸೀಮಿತವಾಗಿರುತ್ತದೆ.
ಉದಾಹರಣೆಗೆ, ನೀವು ರೆಸ್ಟೋರೆಂಟ್‌ನಲ್ಲಿ ₹6,000 ಬಿಲ್ ಪಾವತಿಸಿದ್ದೀರಿ ಎಂದುಕೊಳ್ಳಿ. 0.4% ಪ್ರಕಾರ ₹24 ಎಂಡಿಆರ್ ಬರುತ್ತದೆ. ನೀವು ಪಾವತಿಸಬೇಕಿರುವುದು ₹6,000 ಮಾತ್ರ. ಆ ₹24ನ್ನು ರೆಸ್ಟೋರೆಂಟ್ ಭರಿಸುತ್ತದೆ.
ಅದೇ ರೀತಿ ₹30,000 ಮೌಲ್ಯದ ಮೊಬೈಲ್ ಖರೀದಿಸಿದರೆ ₹30,000 ಪಾವತಿಸಿದರೆ ಸಾಕು. ಯುಪಿಐ ಶುಲ್ಕದ ಹೆಸರಿನಲ್ಲಿ ಹೆಚ್ಚುವರಿ ಹಣ ನೀಡುವ ಅಗತ್ಯವಿಲ್ಲ.
ಪೆಟ್ರೋಲ್ ಹಾಕಿಸಿದರೆ ಏನು?
ಇಲ್ಲಿ ಮತ್ತೊಂದು ವ್ಯತ್ಯಾಸವಿದೆ. ಪೆಟ್ರೋಲ್, ರೈಲ್ವೆ, ಟೆಲಿಕಾಂ, ವಿಮೆ, ಕೃಷಿ ಇನ್‌ಪುಟ್ಸ್ ಸೇರಿದಂತೆ ಕೆಲವು ಕ್ಷೇತ್ರಗಳಲ್ಲಿ ₹2,000ಕ್ಕಿಂತ ಹೆಚ್ಚಿನ ಪಾವತಿಗಳಿಗೆ ₹5 ಫ್ಲಾಟ್ ಎಂಡಿಆರ್ ಅನ್ವಯಿಸುತ್ತದೆ.
ಈ ₹5 ಕೂಡ ಗ್ರಾಹಕರು ಪಾವತಿಸಬೇಕಾಗಿಲ್ಲ. ವ್ಯಾಪಾರಿಯೇ ಭರಿಸಬೇಕು.
ಅಂದರೆ ಪೆಟ್ರೋಲ್ ಬಂಕ್‌ನಲ್ಲಿ ₹5,000 ಮೌಲ್ಯದ ಇಂಧನ ತುಂಬಿಸಿ ಯುಪಿಐ ಮೂಲಕ ಪಾವತಿಸಿದರೂ ನೀವು ₹5,000 ಮಾತ್ರ ಪಾವತಿಸುತ್ತೀರಿ.
ಸಣ್ಣ ಅಂಗಡಿಗಳ ವ್ಯಾಪಾರಿಗಳಿಗೆ ಏನು?
ಇದು ಕೂಡ ಪ್ರಮುಖ ವಿಷಯ. ಸಣ್ಣ ಕಿರಾಣಿ ಅಂಗಡಿಗಳು, ತಳ್ಳುಗಾಡಿ ವ್ಯಾಪಾರಿಗಳು ಮತ್ತು ಬೀದಿ ವ್ಯಾಪಾರಿಗಳು ಆತಂಕಪಡಬೇಕಾಗಿಲ್ಲ.
ಯುಪಿಐ ಮೂಲಕ ತಿಂಗಳಿಗೆ ₹1 ಲಕ್ಷದವರೆಗೆ ಹಣ ಸ್ವೀಕರಿಸುವ ಸಣ್ಣ ವ್ಯಾಪಾರಿಗಳಿಗೆ ಜೀರೋ ಎಂಡಿಆರ್ ಸೌಲಭ್ಯ ಮುಂದುವರಿಯುತ್ತದೆ.ಹೀಗಾಗಿ ಸಣ್ಣ ಅಂಗಡಿಯಲ್ಲಿ ₹200, ₹500 ಅಥವಾ ₹1,000 ಅನ್ನು ಯುಪಿಐ ಮೂಲಕ ಪಾವತಿಸುವ ಗ್ರಾಹಕರಿಗೆ ಯಾವುದೇ ಬದಲಾವಣೆ ಇರುವುದಿಲ್ಲ.
ಈ ಹಣ ಯಾರಿಗೆ ಹೋಗುತ್ತದೆ?
ಇದು ಸರ್ಕಾರಕ್ಕೆ ಪಾವತಿಸುವ ತೆರಿಗೆಯಲ್ಲ. ಎಂಡಿಆರ್ ಎಂದರೆ ಯುಪಿಐ ಮೂಲಕ ಪಾವತಿಗಳನ್ನು ಸ್ವೀಕರಿಸುವ ವ್ಯಾಪಾರಿಗೆ ಸಂಬಂಧಿಸಿದ ಸಣ್ಣ ಶುಲ್ಕ.
ಈ ಮೊತ್ತವನ್ನು ಬ್ಯಾಂಕ್‌ಗಳು, ಪಾವತಿ ಸೇವೆ ಒದಗಿಸುವ ಸಂಸ್ಥೆಗಳು ಮತ್ತು ಯುಪಿಐ ಆ್ಯಪ್‌ಗಳನ್ನು ಒಳಗೊಂಡ ಪಾವತಿ ವ್ಯವಸ್ಥೆಯ ವಿವಿಧ ಪಾಲುದಾರರ ನಡುವೆ ಹಂಚಲಾಗುತ್ತದೆ.
ಯುಪಿಐ ವ್ಯವಸ್ಥೆಯನ್ನು ನಿರ್ವಹಿಸುವುದು, ಭದ್ರತೆಯನ್ನು ಹೆಚ್ಚಿಸುವುದು ಮತ್ತು ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸುವುದು ಇದರ ಉದ್ದೇಶ ಎಂದು ಸರ್ಕಾರ ತಿಳಿಸಿದೆ.
ವ್ಯಾಪಾರಿ ನಿಮ್ಮ ಬಳಿ ಹೆಚ್ಚುವರಿ ಹಣ ಕೇಳಿದರೆ?
ಇದೇ ಈಗ ಹಲವರ ಆತಂಕಕ್ಕೆ ಕಾರಣವಾಗಿದೆ. “ಯುಪಿಐ ಶುಲ್ಕ ಬಂದಿದೆ, ಹೆಚ್ಚುವರಿ ಹಣ ನೀಡಿ” ಎಂದು ಅಂಗಡಿ ಮಾಲೀಕರು ಕೇಳಿದರೆ ಏನು ಮಾಡಬೇಕು?
ನಿಯಮಗಳ ಪ್ರಕಾರ ಈ ಶುಲ್ಕವನ್ನು ಗ್ರಾಹಕರ ಮೇಲೆ ಹಾಕುವಂತಿಲ್ಲ. ವ್ಯಾಪಾರಿಗಳಿಂದ ಎಂಡಿಆರ್ ಶುಲ್ಕವನ್ನು ಗ್ರಾಹಕರಿಂದ ವಸೂಲಿ ಮಾಡದಂತೆ ಬ್ಯಾಂಕ್‌ಗಳು ನೋಡಿಕೊಳ್ಳಬೇಕು ಎಂದು ಹಣಕಾಸು ಸಚಿವಾಲಯ ಸೂಚಿಸಿದೆ.
ಯುಪಿಐ ಆ್ಯಪ್‌ಗಳೂ ಹೆಚ್ಚುವರಿ ಪ್ಲಾಟ್‌ಫಾರ್ಮ್ ಶುಲ್ಕ ಅಥವಾ ಇತರ ಹೆಚ್ಚುವರಿ ಚಾರ್ಜ್‌ಗಳನ್ನು ವಿಧಿಸಬಾರದು.
ಹಾಗಾದರೆ ಯುಪಿಐ ಇನ್ನು ಮುಂದೆ ಉಚಿತವಾಗಿರುವುದಿಲ್ಲವೇ?
ಸಾಮಾನ್ಯ ಗ್ರಾಹಕರ ವಿಚಾರದಲ್ಲಿ ಯುಪಿಐ ಸೇವೆ ಇನ್ನೂ ಉಚಿತವೇ ಇದೆ.
-
ವ್ಯಕ್ತಿಯಿಂದ ವ್ಯಕ್ತಿಗೆ ಮಾಡುವ ಎಲ್ಲಾ ಯುಪಿಐ ವಹಿವಾಟುಗಳು ಉಚಿತ.
-
₹2,000ವರೆಗೆ ವ್ಯಾಪಾರಿ ಪಾವತಿಗಳೂ ಉಚಿತ.
-
ಸಣ್ಣ ವ್ಯಾಪಾರಿಗಳಿಗೆ ವಿಶೇಷ ವಿನಾಯಿತಿಗಳು ಮುಂದುವರಿಯುತ್ತವೆ.
-
₹2,000ಕ್ಕಿಂತ ಹೆಚ್ಚಿನ ಕೆಲವು ವ್ಯಾಪಾರಿ ಪಾವತಿಗಳಲ್ಲಿ ಎಂಡಿಆರ್ ಇದ್ದರೂ ಅದನ್ನು ಗ್ರಾಹಕರ ಬದಲಿಗೆ ವ್ಯಾಪಾರಿಯೇ ಭರಿಸಬೇಕು.
ಹಣಕಾಸು ಸಚಿವಾಲಯ ಮತ್ತು ಆರ್‌ಬಿಐ ತಿಳಿಸಿರುವ ವಿವರಗಳ ಪ್ರಕಾರ, ಹೊಸ ಎಂಡಿಆರ್‌ನಿಂದ ಒಟ್ಟು ವ್ಯಾಪಾರಿ-ಗ್ರಾಹಕ ಯುಪಿಐ ವಹಿವಾಟುಗಳ ಪೈಕಿ ಸುಮಾರು 96% ವಹಿವಾಟುಗಳಿಗೆ ಯಾವುದೇ ಪರಿಣಾಮ ಇರುವುದಿಲ್ಲ.
ಅಂದರೆ ಸುದ್ದಿಗಳಲ್ಲಿ “ಯುಪಿಐ ಶುಲ್ಕ” ಎಂದು ಕಾಣಿಸುತ್ತಿರುವಷ್ಟು ದೊಡ್ಡ ಪ್ರಮಾಣದ ಹೆಚ್ಚುವರಿ ಹೊರೆ ಸಾಮಾನ್ಯ ಗ್ರಾಹಕರ ಮೇಲೆ ಬೀಳುವುದಿಲ್ಲ.
ಕೊನೆಯದಾಗಿ ಸರಳವಾಗಿ ಹೇಳುವುದಾದರೆ…
ನೀವು ಸ್ನೇಹಿತರಿಗೆ ಹಣ ಕಳುಹಿಸುತ್ತಿದ್ದೀರಾ? ಶುಲ್ಕ ಇಲ್ಲ.
ಅಂಗಡಿಯಲ್ಲಿ ಪಾವತಿ ಮಾಡುತ್ತಿದ್ದೀರಾ? ಶುಲ್ಕ ಇಲ್ಲ.
ಅಂಗಡಿಯಲ್ಲಿ ₹2,000ವರೆಗೆ ಪಾವತಿಸುತ್ತಿದ್ದೀರಾ? ಶುಲ್ಕ ಇಲ್ಲ.
ಸಣ್ಣ ವ್ಯಾಪಾರಿಯ ಕ್ಯೂಆರ್ ಕೋಡ್‌ಗೆ ಹಣ ಕಳುಹಿಸುತ್ತಿದ್ದೀರಾ? ಶುಲ್ಕ ಇಲ್ಲ.
₹2,000ಕ್ಕಿಂತ ಹೆಚ್ಚಿನ ಕೆಲವು ವ್ಯಾಪಾರಿ ಪಾವತಿಗಳಲ್ಲಿ ಎಂಡಿಆರ್ ಇದ್ದರೂ, ಅದನ್ನು ಗ್ರಾಹಕರು ಅಲ್ಲ, ವ್ಯಾಪಾರಿಯೇ ಭರಿಸಬೇಕು.
ಫೋನ್‌ಪೇ, ಗೂಗಲ್‌ಪೇ ಮಾತ್ರವಲ್ಲ…
ಯುಪಿಐ ಎಂದರೆ ಒಂದೇ ಒಂದು ಆ್ಯಪ್ ಅಲ್ಲ. ನಾವು ಪ್ರತಿದಿನ ಬಳಸುವ ಫೋನ್‌ಪೇ, ಗೂಗಲ್‌ಪೇ, ಪೇಟಿಎಂ, ಭೀಮ್, ಅಮೆಜಾನ್ ಪೇ, ವಾಟ್ಸಾಪ್ ಪೇ ಸೇರಿದಂತೆ ಹಲವು ಆ್ಯಪ್‌ಗಳ ಮೂಲಕ ಯುಪಿಐ ಪಾವತಿಗಳನ್ನು ಮಾಡುತ್ತೇವೆ.ಇದಲ್ಲದೆ ಅನೇಕ ಬ್ಯಾಂಕ್‌ಗಳ ಮೊಬೈಲ್ ಆ್ಯಪ್‌ಗಳಲ್ಲಿಯೂ ಯುಪಿಐ ಸೌಲಭ್ಯವಿದೆ.ಯಾವ ಆ್ಯಪ್ ಮೂಲಕ ಹಣ ಪಾವತಿಸಿದರೂ, ಅದರ ಹಿಂದೆ ಕಾರ್ಯನಿರ್ವಹಿಸುವುದು ಯುಪಿಐ ಪಾವತಿ ವ್ಯವಸ್ಥೆಯೇ.

