ಹಾಸನ ಜಿಲ್ಲೆಯ ಎಲ್ಲಾ ಪಡಿತರ ಚೀಟಿದಾರರು ವಿವಿಧ ಕಾರಣಗಳಿಂದ ಆದ್ಯತಾ ಪಡಿತರ ಚೀಟಿಯು (ಬಿಪಿಎಲ್) ಆದ್ಯತೇತರ ಪಡಿತರ ಚೀಟಿಯಾಗಿ(ಎ.ಪಿ.ಎಲ್) ಪರಿವರ್ತಿತವಾಗಿದಲ್ಲಿ ಹಾಗೂ ಪಡಿತರ ಚೀಟಿದಾರರು ಆದ್ಯತಾ ಪಡಿತರ ಚೀಟಿ ಹೊಂದಲು ಅರ್ಹರಿದ್ದಲ್ಲಿ, ಸೂಕ್ತ ದಾಖಲೆಗಳೊಂದಿಗೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಕಚೇರಿಯ ಆಹಾರ ಶಾಖೆ ಆಹಾರ ಶಿರಸ್ತೇದಾರ್ ಮತ್ತು ಆಹಾರ ನಿರೀಕ್ಷಕರುಗಳಿಗೆ ದಾಖಲೆಗಳನ್ನು ಸಲ್ಲಿಸಬಹುದು ಎಂದು ಜಿಲ್ಲಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅನ್ನ ಸುವಿಧಾ ಯೋಜನೆಗೆ ನೋಂದಣಿ
ಅನ್ನಸುವಿಧಾ ಯೋಜನೆಯು ರಾಜ್ಯಾದ್ಯಂತ ಅನುಷ್ಠಾನಗೊಂಡಿದ್ದು, 75 ವಯಸ್ಸಿನ ಮೇಲ್ಪಟ್ಟ ಒಂಟಿ ಹಿರಿಯ ನಾಗರೀಕರು ಮಾತ್ರ ಇರುವ ಮನೆಗಳಿಗೆ ಅನ್ನ ಸುವಿಧಾ ಮಾಡ್ಯೂಲ್ನ ಮೂಲಕ ಅರ್ಹ ಫಲಾನುಭವಿಗಳ ಮನೆಯ ಬಾಗಿಲಿಗೆ ಪಡಿತರವನ್ನು ವಿತರಣೆ ಮಾಡಲಾಗುವುದು.
ಜಿಲ್ಲೆಯಲ್ಲಿ ಒಟ್ಟು 15,207 ಫಲಾನುಭವಿಗಳಿದ್ದು 3229 ಫಲಾನುಭವಿಗಳು ಅನ್ನ ಸುವಿಧಾ ಯೋಜನೆಯಡಿ ನೋಂದಾವಣೆ ಮಾಡಿಕೊಂಡಿರುತ್ತಾರೆ. ಉಳಿದ 11,978 ಪಡಿತರ ಚೀಟಿದಾರರು ಮಾರ್ಚ್ 2026 ರ ಮಾಹೆಯ 1 ರಿಂದ 6ನೇ ತಾರೀಖಿನೊಳಗೆ ನ್ಯಾಯಬೆಲೆ ಅಂಗಡಿಗೆ ತೆರಳಿ ನೋಂದಣಿ ಮಾಡಿಕೊಂಡು ಯೋಜನೆಯ ಪ್ರಯೋಜನೆ ಪಡೆದುಕೊಳ್ಳಬಹುದಾಗಿದೆ.
ಯೋಜನೆಯ ಅನುಕೂಲ ಪಡೆಯಲು ಮೊಬೈಲ್ ಸಂಖ್ಯೆಯನ್ನು ಹೊಂದುವುದು ಕಡ್ಡಾಯವಾಗಿದ್ದು, ಮೊಬೈಲ್ ಸಂಖ್ಯೆಯನ್ನು ನೊಂದಣಿ ಮಾಡಿಸದ ಅರ್ಹ ಫಲಾನುಭವಿಗಳು ಕೂಡಲೇ ನ್ಯಾಯಬೆಲೆ ಅಂಗಡಿಗೆ ತೆರಳಿ ಇ-ಕೆ.ವೈಸಿ ಮಾಡಿಸಿ ಮೊಬೈಲ್ ಸಂಖ್ಯೆಗಳನ್ನು ಅಫ್ಡೇಟ್ ಮಾಡಿಕೊಂಡಿರಬೇಕು,
ನೋಂದಾಯಿತ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ಆಯಾ ತಿಂಗಳ 6 ರಿಂದ 15ನೇ ತಾರೀಖಿನೊಳಗಾಗಿ ಸಂಬಂಧಿಸಿದ ನ್ಯಾಯಬೆಲೆ ಅಂಗಡಿಯಿಂದ ಪಡಿತರವನ್ನು ಪೂರೈಸಲಾಗುವುದು. ಅರ್ಹ ಫಲಾನುಭವಿಗಳು ಸದರಿ ಅನ್ನ ಸುವಿಧಾ ಯೋಜನೆಯ ಸದುಪಯೋಗಪಡಿಸಿಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗಾಗಿ ತಾಲ್ಲೂಕಿನ ಆಹಾರ ಶಿರಸ್ತೇದಾರ್ ಮತ್ತು ಆಹಾರ ನಿರೀಕ್ಷಕರುಗಳನ್ನು ಹಾಗೂ ಜಿಲ್ಲೆಯ ಜಂಟಿ ನಿರ್ದೇಶಕರ ಕಾರ್ಯಾಲಯವನ್ನು ಸಂಪರ್ಕಿಸುವಂತೆ ಜಿಲ್ಲಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

