HomeUncategorizedವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಗ್ರಂಥಾಲಯಗಳಲ್ಲಿ ‘ಸ್ಪರ್ಧಾತ್ಮಕ ಪರೀಕ್ಷೆ’ ಅಧ್ಯಯನ ಕೇಂದ್ರ: ಜೆಇಇ, ನೀಟ್ ಗೆ ಉಚಿತ...

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಗ್ರಂಥಾಲಯಗಳಲ್ಲಿ ‘ಸ್ಪರ್ಧಾತ್ಮಕ ಪರೀಕ್ಷೆ’ ಅಧ್ಯಯನ ಕೇಂದ್ರ: ಜೆಇಇ, ನೀಟ್ ಗೆ ಉಚಿತ ತರಬೇತಿ

ಬೆಂಗಳೂರು: ವಿದ್ಯಾರ್ಥಿಗಳ ಜೀವನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳಾದ CET, NEET, JEE ಹಾಗೂ ಇನ್ನಿತರ ಪರೀಕ್ಷೆಗಳಿಗೆ ಸಿದ್ದರಾಗಲು ಗ್ರಂಥಾಲಯಗಳು ಸಹಕಾರಿಯಾಗಲಿವೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಚಿವ ಎಸ್. ಮಧು ಬಂಗಾರಪ್ಪ ಹೇಳಿದ್ದಾರೆ.

ಇಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ವತಿಯಿಂದ ಆಯೋಜಿಸಿದ್ದ “ಗ್ರಂಥಪಾಲಕರ ದಿನಾಚರಣೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ”ದಲ್ಲಿ ಭಾಗವಹಿಸಿ, ಭಾರತದ ಗ್ರಂಥಾಲಯ ಪಿತಾಮಹ, ಪದ್ಮಶ್ರೀ ಪುರಸ್ಕೃತರಾದ ಡಾ.ಎಸ್.ಆರ್ ರಂಗನಾಥನ್ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.

ವಿಶೇಷವಾಗಿ ಸ್ಪರ್ಧಾತ್ಮಕ ಪರೀಕ್ಷೆಗಳ ಸಿದ್ಧತೆಗೆ ಹೆಚ್ಚಿನ ಸಂಪನ್ಮೂಲಗಳನ್ನು ಹೊಂದುವಂತೆ ಗ್ರಂಥಾಲಯಗಳನ್ನು ಬಲಪಡಿಸುವ ಅಗತ್ಯವಿದೆ. ಇಂದು ಗ್ರಂಥಾಲಯ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಡಾ. ಎಸ್.ಆರ್. ರಂಗನಾಥನ್ ಅವರನ್ನು ಸ್ಮರಿಸುತ್ತಿದ್ದೇವೆ. ಅವರ ಹಾಗೂ ಅವರಂತೆಯೇ ಅಸಂಖ್ಯಾತ ಗ್ರಂಥಪಾಲಕರ ಶ್ರಮದಿಂದ ಇಂದು ಕರ್ನಾಟಕದಲ್ಲಿ 2500ಕ್ಕೂ ಹೆಚ್ಚಿನ ಗ್ರಂಥಾಲಯಗಳಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ರಾಜ್ಯದ ಹಲವಾರು ಗ್ರಂಥಾಲಯಗಳಿಗೆ ಭೇಟಿ ನೀಡಿದ ಅನುಭವವನ್ನು ಹಂಚಿಕೊಂಡ ಸಚಿವರು, ದುಬಾರಿ ಕೋಚಿಂಗ್ ಕೇಂದ್ರಗಳಿಗೆ ಹೋಗಲು ಸಾಧ್ಯವಿಲ್ಲದ ವಿದ್ಯಾರ್ಥಿಗಳು ದಿನವಿಡೀ ಗ್ರಂಥಾಲಯಗಳಲ್ಲಿ ಓದುತ್ತಾರೆ. ಇದರಿಂದಲೇ ಸರ್ಕಾರಿ ಪಿಯುಸಿ ವಿದ್ಯಾರ್ಥಿಗಳಿಗೆ ಉಚಿತ JEE ಹಾಗೂ NEET ತರಬೇತಿ ಯೋಜನೆಯನ್ನು ಆರಂಭಿಸುವ ಪ್ರೇರಣೆ ದೊರೆಯಿತು. ಪ್ರಸ್ತುತ 25,000 ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆಯುತ್ತಿದ್ದಾರೆ. ಕರ್ನಾಟಕವು ಇಂತಹ ಸೌಲಭ್ಯ ಒದಗಿಸುವ ಏಕೈಕ ರಾಜ್ಯವಾಗಿದೆ. ಇಂತಹ ಸೌಲಭ್ಯದಿಂದ ಗೌರಿಬಿದನೂರಿನ ಎನ್. ಸಂಕೇತ್ ರಾಜ್ ಐಐಟಿ ಖರಗ್ಪುರ್‌ಗೆ ಪ್ರವೇಶ ಪಡೆದಿದ್ದಾರೆ ಎಂದು ಹೇಳಿದ್ದಾರೆ.

ನಮ್ಮ ಸರ್ಕಾರದ ವತಿಯಿಂದ ಗ್ರಂಥಾಲಯಗಳ ಅಭಿವೃದ್ಧಿಗೆ ವಿಶೇಷವಾಗಿ ಕ್ರಮ ಕೈಗೊಂಡಿದ್ದು ಸಾರ್ವಜನಿಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಗ್ರಂಥಾಲಯಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ. ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಅಧ್ಯಯನ ಕೇಂದ್ರಗಳನ್ನು ಸ್ಥಾಪಿಸಲು ನಮ್ಮ ಸರ್ಕಾರ ಉದ್ದೇಶಿಸಲಾಗಿದೆ. ಸರ್ಕಾರಿ ಪಿಯುಸಿ ವಿದ್ಯಾರ್ಥಿಗಳೆಲ್ಲರಿಗೂ ಉಚಿತ ತರಬೇತಿ ವಿಸ್ತರಿಸುವ ಉದ್ದೇಶವಿದ್ದು, ಇದಕ್ಕಾಗಿ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸುವುದಾಗಿ ಹೇಳಿದರು. ಸಾರ್ವಜನಿಕ ಗ್ರಂಥಾಲಯಗಳಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳ ಪುಸ್ತಕಗಳನ್ನು ಹೆಚ್ಚಿಸಲು, ಬೇಕಾದ ಸಂಪನ್ಮೂಲಗಳನ್ನು ಬಳಸಿಕೊಳ್ಳುವುದರ ಬಗ್ಗೆ ಒತ್ತು ನೀಡಿದರು.

ಪ್ರತಿ ಗ್ರಂಥಪಾಲಕರೂ ಒಂದು ವಿಶ್ವವಿದ್ಯಾಲಯದ ಮುಖ್ಯಸ್ಥರಿದ್ದಂತೆ. ಗ್ರಂಥಾಲಯ ಬಲಪಡಿಸುವಲ್ಲಿ ಸವಾಲುಗಳಿದ್ದರೂ ನಮ್ಮ ಸರ್ಕಾರ ಅದನ್ನು ಬಲಪಡಿಸುವಲ್ಲಿ ಪ್ರಾಮಾಣಿಕವಾಗಿ ಕೆಲಸ ಮಾಡುವೆ. ತಮ್ಮ ತಂದೆ ಹಾಗೂ ಮಾಜಿ ಮುಖ್ಯಮಂತ್ರಿಗಳಾದ ಎಸ್. ಬಂಗಾರಪ್ಪನವರಿಗೆ ಬಹಳ ಓದುವ ಹವ್ಯಾಸವಿತ್ತು ಎಂದು ಹಂಚಿಕೊಂಡರು.

ಶಿಕ್ಷಣ ಇಲಾಖೆಯ ಸುಧಾರಣೆಗಳ ಕುರಿತು ಮಾತನಾಡಿದ ಅವರು, ಮೂರು ಪರೀಕ್ಷಾ ಪದ್ಧತಿ ಹಾಗೂ ಪರೀಕ್ಷಾ ಪ್ರಕ್ರಿಯೆಯ ಪಾರದರ್ಶಕತೆಗೆ ವೆಬ್‌ಕಾಸ್ಟಿಂಗ್‌ ಮತ್ತು ಶಿಕ್ಷಣ ಇಲಾಖೆಯ ಇನ್ನೂ ಹಲವು ನೂತನ ಕ್ರಮಗಳನ್ನು ವಿವರಿಸಿದರು.

ಈ ಸಂದರ್ಭದಲ್ಲಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ. ಪುರುಷೋತ್ತಮ ಬಿಳಿಮಲೆ, ಡಾ. ಕರಿಗೌಡ ಬೀಚನಹಳ್ಳಿ(ಅಧ್ಯಕ್ಷರು, ರಾಜ್ಯ ಮಟ್ಟದ ಪುಸ್ತಕ ಆಯ್ಕೆ ಸಮಿತಿ, ಸಾರ್ವಜನಿಕ ಗ್ರಂಥಾಲಯ ಇಲಾಖೆ), ಡಾ. ಬಿ. ಎಸ್. ಶಿವರಾಮ್ (ಗ್ರಂಥಾಲಯ ಮುಖ್ಯಸ್ಥ – NAL), ಪ್ರಧಾನ ಕಾರ್ಯದರ್ಶಿ ರಶ್ಮಿ ಮಹೇಶ್ ಹಾಗೂ ಬಸವರಾಜೇಂದ್ರ ಹೆಚ್. (ಆಯುಕ್ತರು, ಸಾರ್ವಜನಿಕ ಗ್ರಂಥಾಲಯ ಇಲಾಖೆ) ಉಪಸ್ಥಿತರಿದ್ದರು.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular