ವಿಜಯಪುರ: ಎರಡು ಸಾವಿರ ಹೊಸ ಬಸ್ ಗಳ ಖರೀದಿಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.
ವಿಜಯಪುರದ ದರ್ಬಾರ್ ಮೈದಾನದಲ್ಲಿ ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ 102 ನೂತನ ನಗರ ಸಾರಿಗೆ ಬಸ್ ಗಳನ್ನು ಲೋಕಾರ್ಪಣೆಗೊಳಿಸಿ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
2000 ಹೊಸ ಬಸ್ ಗಳ ಖರೀದಿ ಪ್ರಕ್ರಿಯೆ ನಡೆದಿದೆ. ಕಲ್ಯಾಣ ಕರ್ನಾಟಕ ಸಾರಿಗೆಗೆ 400, ಕೆಎಸ್ಆರ್ಟಿಸಿಗೆ 900, ವಾಯುವ್ಯ ಕರ್ನಾಟಕ ಸಾರಿಗೆ 700 ಬಸ್ ಗಳನ್ನು ಹಂಚಿಕೆ ಮಾಡಲಾಗುವುದು. 225 ಎಲೆಕ್ಟ್ರಿಕ್ ಬಸ್ ಖರೀದಿಸುತ್ತಿದ್ದು, ಕಲಬುರಗಿಗೆ 100, ವಿಜಯಪುರಕ್ಕೆ 75, ಬಳ್ಳಾರಿಗೆ 50 ಬಸ್ ಗಳನ್ನು ಹಂಚಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ಮುಂದಿನ ಎರಡು ತಿಂಗಳಲ್ಲಿ 20 ನಾನ್ ಎಸಿ ಸ್ಲೀಪರ್, 20 ಎಸಿ ಸ್ಲೀಪರ್, 16 ಎಸಿ ಸೀಟರ್ ಸೇರಿ 56 ಹೊಸ ಬಸ್ ಗಳ ಖರೀದಿಗೆ ಆದೇಶ ಹೊರಡಿಸಲಾಗುವುದು. ನಗರಗಳ ಪ್ರಯಾಣಿಕರಿಗೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಕಲ್ಯಾಣ ಕರ್ನಾಟಕ ಭಾಗದಲ್ಲಿ 112 ಬಸ್ ಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಹೇಳಿದರು.
ಸಚಿವ ಎಂ.ಬಿ. ಪಾಟೀಲ್, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ವಿಠಲ ಕಟಕದೊಂದ, ಕೆಕೆಆರ್‌ಟಿಸಿ ಅಧ್ಯಕ್ಷ ಅರುಣ್ ಕುಮಾರ್ ಪಾಟೀಲ ಇತರರು ಇದ್ದರು.

