ನವದೆಹಲಿ: ಜೊಮ್ಯಾಟೋ, ಸ್ವಿಗ್ಗಿ, ಫ್ಲಿಪ್ ಕಾರ್ಟ್ ಇತರೆ ಇ- ಕಾಮರ್ಸ್ ಸಂಸ್ಥೆಗಳ ಡೆಲಿವರಿ ಎಕ್ಸಿಕ್ಯೂಟಿವ್ ಗಳು, ಚಾಲಕರು ಸೇರಿದಂತೆ ಅರೆಕಾಲಿಕ ಕಾರ್ಮಿಕರಿಗೆ(ಗಿಗ್ ಕಾರ್ಮಿಕರು) ಸಾಮಾಜಿಕ ಭದ್ರತೆ ಕಲ್ಪಿಸಲು ಕೇಂದ್ರ ಸರ್ಕಾರ ಮುಂದಾಗಿದ್ದು, ಈ ಸಂಬಂಧ ಕೇಂದ್ರ ಕಾರ್ಮಿಕ ಸಚಿವಾಲಯ ಕರಡು ನಿಯಮ ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ ಸೂಚನೆಗಳನ್ನು ಆಹ್ವಾನಿಸಲಾಗಿದೆ.
ಹೊಸ ನಿಯಮಗಳ ಪ್ರಕಾರ ವರ್ಷದಲ್ಲಿ ಕನಿಷ್ಠ 90 ದಿನಗಳ ಕಾಲ ಕೆಲಸದಲ್ಲಿ ನಿರತರಾದ ಗಿಗ್ ವರ್ಕರ್ಸ್ ಆರೋಗ್ಯ ವಿಮೆ, ಜೀವ ವಿಮೆ, ಅಪಘಾತ ವಿಮೆ ಇತರೆ ಸಾಮಾಜಿಕ ಭದ್ರತಾ ಸೌಲಭ್ಯಗಳಿಗೆ ಅರ್ಹತೆ ಪಡೆದುಕೊಳ್ಳುತ್ತಾರೆ. ಒಂದು ವೇಳೆ ಕಾರ್ಮಿಕರು ಒಂದಕ್ಕಿಂತ ಹೆಚ್ಚು ಕಂಪನಿಗಳಲ್ಲಿ ಕೆಲಸ ಮಾಡಿದರೆ ಕನಿಷ್ಠ 120 ದಿನಗಳ ಅವಧಿ ಕೆಲಸ ನಿರತರಾಗಿರಬೇಕು. ದಿನದ ಯಾವುದೇ ಸಮಯದಲ್ಲಿ ಕೆಲಸ ಮಾಡಿ ಎಷ್ಟೇ ಪ್ರಮಾಣದ ಹಣ ಗಳಿಸಿದರೂ ಅದನ್ನು ಒಂದು ದಿನವಾಗಿ ಪರಿಗಣಿಸಲಾಗುತ್ತದೆ. ಒಂದೇ ದಿನ ಎರಡು ಮೂರು ಕಂಪನಿಗಳಿಗೆ ಕೆಲಸ ಮಾಡಿದಲ್ಲಿ ಅವುಗಳನ್ನು ಪ್ರತ್ಯೇಕ ದಿನಗಳೆಂದು ಪರಿಗಣಿಸಲಾಗುತ್ತದೆ.
ಯಾವುದೇ ಒಂದು ನಿರ್ದಿಷ್ಟ ಆನ್ಲೈನ್ ಅಗ್ರಿಗೇಟರ್ ಜೊತೆಗೆ ಕನಿಷ್ಠ 90 ದಿನ ಕೆಲಸ ಮಾಡುವ ಗಿಫ್ಟ್ ಕಾರ್ಮಿಕರಿಗೆ ವಿಮೆಯಂತಹ ಸೌಲಭ್ಯ ಕಲ್ಪಿಸುವ ಸಾಮಾಜಿಕ ಭದ್ರತಾ ನಿಯಮಗಳ ಕರಡನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. 16 ವರ್ಷ ಮೇಲ್ಪಟ್ಟ ಎಲ್ಲಾ ಗಿಫ್ಟ್ ಕಾರ್ಮಿಕರು ತಮ್ಮ ಆಧಾರ್ ಸಂಖ್ಯೆ ಇತರೆ ಅಗತ್ಯ ದಾಖಲಾತಿ ನೀಡಿ ನೋಂದಣಿ ಮಾಡಿಸಿಕೊಳ್ಳಬೇಕು. ಅಗ್ರಿಗೇಟರ್ಗಳು ಗಿಗ್ ಕಾರ್ಮಿಕರು ಅಥವಾ ಫ್ಲ್ಯಾಟ್ ಫಾರ್ಮ್ ನೌಕರರ ಈ ಮಾಹಿತಿಯನ್ನು ಯುನಿವರ್ಸಲ್ ಅಕೌಂಟ್ ನಂಬರ್ ಅಥವಾ ವಿಶೇಷ ಐಡಿ ಸೃಷ್ಟಿಗಾಗಿ ಕೇಂದ್ರೀಯ ಪೋರ್ಟಲ್ ಜೊತೆಗೆ ಹಂಚಿಕೊಳ್ಳಬೇಕು. ನಂತರ ಕಾರ್ಮಿಕನಿಗೆ ಡಿಜಿಟಲ್ ಅಥವಾ ಭೌತಿಕ ಗುರುತಿನ ಚೀಟಿ ನೀಡಲಾಗುವುದು. ನಿರ್ದಿಷ್ಟ ಪೋರ್ಟಲ್ ಮೂಲಕ ಈ ಗುರುತಿನ ಚೀಟಿ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಅಂತಿಮ ನಿಯಮ ಪ್ರಕಟವಾದ ನಂತರ ರಾಜ್ಯಗಳ ಸಹಕಾರದೊಂದಿಗೆ ಇದನ್ನು ಅನುಷ್ಠಾನಗೊಳಿಸಲಾಗುವುದು ಎಂದು ಹೇಳಲಾಗಿದೆ.

